ಕರುನಾಡಿಗೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡಿದ್ದು, ಈ “ಸುವರ್ಣ ಸಂಭ್ರಮ’ವನ್ನು ಇಡೀ ನಾಡು ಅದ್ಧೂರಿಯಾಗಿ ಆಚರಿಸುತ್ತಿದೆ. ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಅವಧಿಯಲ್ಲಿ ಜಗತ್ತಿನ ನಕ್ಷೆಯಲ್ಲಿ ಕರ್ನಾಟಕ ತನ್ನದೇ ಆದ ಅಚ್ಚಳಿಯದ ಛಾಪನ್ನು ಒತ್ತಿದೆ. ಆಡಳಿತದಿಂದ ಹಿಡಿದು ಸಿನೆಮಾದ ತನಕ, ಕ್ರೀಡೆಯಿಂದ ಹಿಡಿದು ಸಾಹಿತ್ಯದವರೆಗೆ, ವಿಜ್ಞಾನದಿಂದ ಹಿಡಿದು ಕೈಗಾರಿಕೆಯ ತನಕ ಕನ್ನಡನಾಡು ಇಡೀ ದೇಶ ಕಣ್ಣರಳಿಸುವ ಮಾದರಿಯಲ್ಲಿ ಸಾಧನೆ ತೋರಿದೆ. ಕಳೆದ 50 ವರ್ಷಗಳಲ್ಲಿ ಕರ್ನಾಟಕ ರಾಜ್ಯ ವಿವಿಧ ಕ್ಷೇತ್ರಗಳಲ್ಲಿ ಕಂಡ 50 ಪ್ರಮುಖ ಮೈಲಿಗಲ್ಲುಗಳನ್ನು “ಉದಯವಾಣಿ’ ಗುರುತಿಸಿ ಇಲ್ಲಿ ಪ್ರಸ್ತುತಪಡಿಸುತ್ತಿದೆ.
01: 1973ರಲ್ಲಿ “ಕರ್ನಾಟಕ’ ನಾಮಕರಣ
ಏಕೀಕರಣವಾದ ಬಳಿಕ ನಮ್ಮ ರಾಜ್ಯವನ್ನು ಮೈಸೂರು ರಾಜ್ಯ ಎನ್ನಲಾಗುತ್ತಿತ್ತು. 1973ರಲ್ಲಿ ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಮೈಸೂರು ರಾಜ್ಯ ಎಂದಿದ್ದ ಹೆಸರನ್ನು ಕರ್ನಾಟಕ ಎಂದು ಬದಲಾವಣೆ ಮಾಡಲಾಯಿತು.
02: ಕರ್ನಾಟಕ ಬ್ರಾಂಡ್ ಕೆಎಂಎಫ್
ಹಾಲು ಉತ್ಪಾದಕರಿಗೆ ನೆರವಾಗುವ ಸಲುವಾಗಿ 1974ರಲ್ಲಿ ಕೆಎಂಎಫ್ಸ್ಥಾಪನೆ ಮಾಡಲಾಯಿತು. ರಾಜ್ಯದ ಈ ಬ್ರಾಂಡ್ ಈಗ ಸಾಕಷ್ಟು ಜನಪ್ರಿಯಗೊಂಡಿದ್ದು, ನಂದಿನಿ ಎಂಬ ಬ್ರಾಂಡ್‌ನಲ್ಲಿ ಎಲ್ಲೆಡೆ ಮಾರಾಟವಾಗುತ್ತಿದೆ.
03: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ
ರಾಜ್ಯದಲ್ಲಿರುವ ಬಂಡೀಪುರ ಅರಣ್ಯವನ್ನು 1974ರಲ್ಲಿ ರಾಷ್ಟ್ರೀಯ ಅಭಯಾರಣ್ಯ ಎಂದು ಘೋಷಿಸಲಾಯಿತು. ಈ ಮೂಲಕ ರಾಜ್ಯದಲ್ಲಿ ಈ ರೀತಿ ಗುರುತಿಸಿಕೊಂಡ ಮೊದಲ ಅರಣ್ಯ ಎಂಬ ಕೀರ್ತಿಗೆ ಬಂಡೀಪುರ ಪಾತ್ರವಾಯಿತು. ರಾಜ್ಯದಲ್ಲಿ ಒಟ್ಟು 5 ರಾಷ್ಟ್ರೀಯ ಉದ್ಯಾನಗಳಿವೆ.
04: 1980ರಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ
ರಾಜ್ಯದ ರಾಜಧಾನಿ ಬೆಂಗಳೂರಿನ ಹೃದಯ ಎನಿಸಿರುವ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣವನ್ನು 1980ರಲ್ಲಿ ಸ್ಥಾಪಿಸ ಲಾಯಿತು. ಬಳಿಕ ಇದು ಬೆಂಗಳೂರಿನ ಹೆಗ್ಗುರುತಿನ ಭಾಗವಾಗಿ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತವೆ.
05: ಕನ್ನಡಕ್ಕಾಗಿ ಗೋಕಾಕ್ ಚಳವಳಿ
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಹಾಗೂ ಅಧಿಕೃತ ರಾಜ್ಯಭಾಷೆಯಾಗಿ ಕನ್ನಡ ಘೋಷಣೆ ಯಾಗಬೇಕು ಎಂದು ಆಗ್ರಹಿಸಿ ನಡೆದ 1980-82ರ ವರೆಗೆ ಆಂದೋಲನವೇ ಗೋಕಾಕ್ ಚಳವಳಿ. ಡಾ| ರಾಜ್‌ಕುಮಾರ್ ಸೇರಿ ಹಲವು ಗಣ್ಯರು ಈ ಚಳವಳಿಯಲ್ಲಿ ಭಾಗಿಯಾಗಿದ್ದರು.
06: ಕರ್ನಾಟಕದಲ್ಲಿ ರೈತ ಸಂಘ ಸ್ಥಾಪನೆ
ರೈತರ ಹಿತರಕ್ಷಣೆ ಹಾಗೂ ಸಂಘಟನೆಗಾಗಿ 1980ರಲ್ಲಿ ಕರ್ನಾಟಕದಲ್ಲಿ ರೈತ ಸಂಘ ಸ್ಥಾಪನೆಯಾಯಿತು. ಪ್ರೊ| ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಸಂಘದ ಸ್ಥಾಪಕರಲ್ಲಿ ಒಬ್ಬರು. ಮುಂದಿನ ಒಂದು ದಶಕದಲ್ಲಿ ರಾಜ್ಯದಲ್ಲಿ ರೈತ ಸಂಘ ಭಾರೀ ಪ್ರಭಾವಶಾಲಿಯಾಗಿ ಬೆಳೆವಣಿಗೆ ಕಂಡಿತು.
07: 1980ರಲ್ಲೇ ಕೈಗಾರಿಕಾ ನೀತಿ
ದೇಶದಲ್ಲೇ ಮೊದಲ ಬಾರಿಗೆ ಅಂದರೆ 1980ರಲ್ಲಿ ಕೈಗಾರಿಕಾ ನೀತಿ ಜಾರಿಗೊಳಿಸಿದ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಈ ಮೂಲಕ ಕೈಗಾರಿಕೆಗಳಿಗೆ ಒತ್ತು ನೀಡಿ, ಗಮನ ಸೆಳೆಯಿತು. ಇದಾದ ಬಳಿಕ 2020ರಲ್ಲಿ ಕೈಗಾರಿಕೆಗಳ ಬೆಳವಣಿಗೆಗಾಗಿ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಯಿತು.
08: ಉತ್ತರ ಕನ್ನಡದಲ್ಲಿ ಅಪ್ಪಿಕೋ ಚಳವಳಿ
1983ರ ಸೆಪ್ಟಂಬರ್ 8ರಂದು ಉತ್ತರ ಕನ್ನಡ ಜಿಲ್ಲೆಯ ಸಾಲ್ಕುಣಿ ಗ್ರಾಮದಲ್ಲಿ ಆರಂಭವಾದ ಅಪ್ಪಿಕೋ ಚಳವಳಿ ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಉಳಿಸು, ಬೆಳೆಸು, ಬಳಸು ಎಂಬ ವಿನೂತನ ಪರಿಕಲ್ಪನೆಯಲ್ಲಿ ಅರಣ್ಯ ರಕ್ಷಣೆಗೆ ನಾಂದಿ ಹಾಡಲಾಯಿತು.
09: 1983ರಲ್ಲಿ ಬೆಂಗಳೂರಿಗೆ ಇನ್ಫೋಸಿಸ್
ಐಟಿ ಜಗತ್ತಿನ ದಿಗ್ಗಜ ಸಂಸ್ಥೆ ಎಂದೇ ಗುರುತಿಸಿಕೊಂಡ ಇನ್ಫೋಸಿಸ್ ಸಂಸ್ಥೆಯು 1983ರಲ್ಲಿ ಕರ್ನಾಟಕದ ಬೆಂಗಳೂರಿಗೆ ಪದಾರ್ಪಣೆ ಮಾಡಿತು. ಕನ್ನಡಿಗ ನಾರಾಯಣ ಮೂರ್ತಿ ಇದರ ಸಂಸ್ಥಾಪಕರು. 2021ರಲ್ಲಿ 100 ಬಿಲಿ ಯನ್ ಮಾರುಕಟ್ಟೆ ಬಂಡವಾಳ ಸಾಧಿಸಿದ ಭಾರತದ 4ನೇ ಕಂಪೆನಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
10: ಕನ್ನಡಿಗರಿಗೆ ಮ್ಯಾಗ್ಸೆಸ್ಸೆೆ ಪ್ರಶಸ್ತಿಯ ಗೌರವ
ಕನ್ನಡಕ್ಕೆ ಮೊದಲ ರಾಮನ್ ಮ್ಯಾಗ್ಸೆಸ್ಸೆೆ ಗೌರವ ತಂದುಕೊಟ್ಟವರು ಆರ್.ಕೆ. ಲಕ್ಷ್ಮಣ್. ಇವರಿಗೆ 1984ರಲ್ಲಿ ಈ ಗೌರವ ಸಿಕ್ಕಿತ್ತು, ಇವರ ಬಳಿಕ ಕೆ.ವಿ.ಸುಬ್ಬಣ್ಣ ಅವರಿಗೆ 1991ರಲ್ಲಿ ಈ ಪ್ರಶಸ್ತಿ ಬಂತು. ಬಳಿಕ ಹರೀಶ್ ಹಂದೆ ಮತ್ತು ಬೇಜಾವಾಡ ವಿಲ್ಸನ್ ಅವರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದರು.
11: ಮೊದಲ ವಿಶ್ವ ಕನ್ನಡ ಸಮ್ಮೇಳನ
1985ರಲ್ಲಿ ಮೈಸೂರಿನಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆಯಿತು. ಈ ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಅವರು ಉದ್ಘಾಟನೆ ಮಾಡಿದರು. ಶಿವರಾಮ ಕಾರಂತರು ಅಧ್ಯಕ್ಷತೆಯನ್ನು ವಹಿಸಿದ್ದರು. 2011ರ ಮಾರ್ಚ್‌ನಲ್ಲಿ ಬೆಳಗಾವಿಯಲ್ಲಿ 2ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
12: ಹಂಪಿಗೆ ವಿಶ್ವ ಪರಂಪರೆ ತಾಣ ಗೌರವ
ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ, ಕೃಷ್ಣದೇವರಾಯನ ರಾಜಧಾನಿ ಹಂಪಿಗೆ 1986ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸ್ಥಾನಮಾನ ನೀಡಿತು. ಹೊಸಪೇಟೆ ಯಲ್ಲಿರುವ ಹಂಪಿಯಲ್ಲಿ ರಾಮಾಯಣ ಕಾಲದ ಕುರುಹುಗಳನ್ನು ಸಹ ಕಾಣಬ ಹುದು. ಈ ಸ್ಥಳ ಕರ್ನಾಟಕದ ಬಹುದೊಡ್ಡ ಹೆಗ್ಗುರುತಾಗಿದೆ.
13: ಒಂದು ಮುತ್ತಿನ ಕಥೆ ಸಿನೆಮಾ
ಡಾ| ರಾಜಕುಮಾರ್ ಅಭಿನಯ ಹಾಗೂ ಶಂಕರ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಚಿತ್ರವು ನೀರಿನ ಆಳದಲ್ಲಿ ಚಿತ್ರೀಕರಿಸಿದ ದೇಶದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಚಿತ್ರ 1987ರಲ್ಲಿ ಬಿಡುಗಡೆ ಯಾಗಿತ್ತು. ಕಾರವಾರ, ಗೋಕರ್ಣ, ಸೈಂಟ್‌ಮೇರೀಸ್ ದ್ವೀಪಗಳಲ್ಲಿ ಚಿತ್ರೀಕರಣ ನಡೆದಿತ್ತು.
14: ಕರ್ನಾಟಕದಿಂದ ಮೊದಲ ಸಿಜೆಐ
ನ್ಯಾಯಮೂರ್ತಿ ಇ.ಎಸ್.ವೆಂಕಟ ರಾಮಯ್ಯ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು. 1989ರಲ್ಲಿ ಇವರು ಸಿಜೆಐ ಆಗಿದ್ದರು. ಇವರ ಪುತ್ರಿ ಬಿ.ವಿ.ನಾಗರತ್ನ ಕೂಡ ಸುಪ್ರೀಂ ಕೋರ್ಟ್ ಜಡ್ಜ್ ಆಗಿದ್ದು, ಇವರಿಗೂ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶವಿದೆ.
15: ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ
ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ಜಾನಪದಕ್ಕಾಗಿಯೇ ಕರ್ನಾಟಕ ಸರಕಾರವು 1991ರಲ್ಲಿ ಹಂಪಿಯಲ್ಲಿ ಕರ್ನಾಟಕ ವಿ.ವಿ. ಕಾಯ್ದೆಯಡಿ ಕನ್ನಡ ವಿಶ್ವವಿದ್ಯಾನಿಲಯ ವನ್ನು ಆರಂಭಿಸಿತು. ಈ ವಿಶ್ವವಿದ್ಯಾನಿಲಯ ನೀಡುವ ಗೌರವ ಡಾಕ್ಟ ರೆಟ್ ಪ್ರಶಸ್ತಿಯನ್ನು ನಾಡೋಜ ಎಂದು ಕರೆಯಲಾಗುತ್ತದೆ.
16: 10 ಮಂದಿಗೆ ಕರ್ನಾಟಕ ರತ್ನ ಗೌರವ
ಕರ್ನಾಟಕದ ಅದ್ವಿತೀಯ ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತದೆ. 1992ರಲ್ಲಿ ಅಂದಿನ ಸಿಎಂ ಎಸ್.ಬಂಗಾರಪ್ಪ ಈ ಪ್ರಶಸ್ತಿ ಆರಂಭಿಸಿದರು. ರಾಷ್ಟ್ರ ಕವಿ ಕುವೆಂಪು ಹಾಗೂ ವರ ನಟ ಡಾ| ರಾಜ್‌ಕುಮಾರ್ ಅವರಿಗೆ ಮೊದಲ ಪ್ರಶಸ್ತಿ ನೀಡಲಾಯಿತು. ಈ ವರೆಗೆ 10 ಜನರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
17: ದೇಶಕ್ಕೆ ಮಾದರಿ ಪಂಚಾಯತ್ ರಾಜ್
ಇಡೀ ದೇಶಕ್ಕೆ ಮಾದರಿಯಾಗುವಂಥ ಪಂಚಾಯತ್ ರಾಜ್ ವ್ಯವಸ್ಥೆಯನ್ನು 1993ರ ಮೇ 10ರಂದು ಕರ್ನಾಟಕ ರಾಜ್ಯವು ಜಾರಿ ಮಾಡಿತು. ಈ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸಲಾಯಿತು. ರಾಜ್ಯದಲ್ಲಿ ಜಾರಿಯಾದ ಬಳಿಕ ಬಹಳಷ್ಟು ರಾಜ್ಯಗಳು ಕರ್ನಾಟಕ ಮಾದರಿಯನ್ನು ಅಳವಡಿಸಿಕೊಂಡವು.
18: 1993ರಲ್ಲಿ ಸಿಇಟಿ ವ್ಯವಸ್ಥೆ ಜಾರಿ
ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಇಡೀ ದೇಶಕ್ಕೆ ಮಾದರಿಯಾಗಬಲ್ಲ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಕರ್ನಾಟಕ ಸರಕಾರವು 1993ರಲ್ಲಿ ಪರಿಚಯಿಸಿತು. ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಈ ವ್ಯವಸ್ಥೆಯನ್ನು ಬಳಿಕ ದೇಶದ ಇತರ ರಾಜ್ಯಗಳು ಅಳವಡಿಸಿಕೊಂಡವು.
19: 1986ರಲ್ಲಿ ಹೊಸ ಜಿಲ್ಲೆ ನಿರ್ಮಾಣ ಆರಂಭ
ಕರ್ನಾಟಕ ರಾಜ್ಯ ರಚನೆಯಾದ ಬಳಿಕ 19 ಜಿಲ್ಲೆಗಳಿ ದ್ದವು. 1986ರಲ್ಲಿ ಮೊದಲ ಬಾರಿಗೆ ಬೆಂಗಳೂರನ್ನು 2 ಭಾಗ ಮಾಡುವ ಜಿಲ್ಲೆಗಳ ವಿಸ್ತರಣೆ ಆರಂಭವಾಯಿತು. 1997ರಲ್ಲಿ 7 ಹೊಸ ಜಿಲ್ಲೆಗಳನ್ನು ಸೃಷ್ಟಿಸಲಾಯಿತು. ಬಳಿಕ 2007ರಲ್ಲಿ 2, 2009ರಲ್ಲಿ 1, 2020ರಲ್ಲಿ 1 ಜಿಲ್ಲೆ ಸೃಷ್ಟಿಸಲಾಯಿತು. ರಾಜ್ಯದಲ್ಲಿ ಪ್ರಸ್ತುತ 31 ಜಿಲ್ಲೆಗಳಿವೆ.
20: ಐಶ್ವರ್ಯ ರೈಗೆ ವಿಶ್ವಸುಂದರಿ ಕಿರೀಟ
ಕರ್ನಾಟಕದ ಮಂಗಳೂರು ಮೂಲದವರಾದ ಐಶ್ವಯಾ ರೈ 1994ರಲ್ಲಿ ವಿಶ್ವಸುಂದರಿ ಗೌರವಕ್ಕೆ ಪಾತ್ರರಾದರು. ಈ ಮೂಲಕ ರಾಜ್ಯಕ್ಕೆ ಈ ಗೌರವ ತಂದುಕೊಟ್ಟ ಏಕೈಕ ಮಹಿಳೆ ಎನಿಸಿಕೊಂಡರು. ಬಳಿಕ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡರು.
21: ದೂರದರ್ಶನ ಚಂದನ ಆರಂಭ
1994ರಲ್ಲಿ ಕರ್ನಾಟಕಕ್ಕಾಗಿಯೇ ದೂರದರ್ಶನವು ಚಂದನ ವಾಹಿನಿಯನ್ನು ಆರಂಭಿಸಿತು. ಆ ಮೂಲಕ ಸಂಪೂರ್ಣವಾಗಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮೊದಲು ಡಿಡಿ-9 ಕನ್ನಡ ಎಂದು ಇದಕ್ಕೆ ಹೆಸರಿಡಲಾಗಿತ್ತು. ಬಳಿಕ ಚಂದನ ಎಂದು ಹೆಸರಿಡಲಾಯಿತು.
22: ಡಾ|ರಾಜ್‌ಗೆ ದಾದಾಸಾಹೇಬ್ ಫಾಲ್ಕೆ
ವರನಟ ಎಂದೇ ಖ್ಯಾತರಾದ ಪದ್ಮ ಭೂಷಣ ಡಾ|ರಾಜ್‌ಕುಮಾರ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 1995ರಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾದರು. 45 ವರ್ಷಕ್ಕೂ ಹೆಚ್ಚು ಸಮಯ ಸೇವೆ ಸಲ್ಲಿಸಿದ ಅವರು 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ.
23: ಕ್ರಿಕೆಟ್‌ನಲ್ಲಿ ಕನ್ನಡಿಗರ ಪಾರುಪತ್ಯ
1996ನೇ ಇಸವಿ ಕನ್ನಡಿಗ ಕ್ರಿಕೆಟಿಗರಿಗೆ ಮಹತ್ವದ ವರ್ಷ. ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತೀಯ ತಂಡದಲ್ಲಿ ಕನ್ನಡಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ, ವಿಜಯ ಭಾರದ್ವಾಜ್ ಹಾಗೂ ಸುನೀಲ್ ಜೋಶಿ.. ಹೀಗೆ 6 ಜನರು ಸ್ಥಾನ ಪಡೆದಿದ್ದರು.
24: ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಎಬಿಸಿ ಕಂಪೆನಿಯು 1996ರಲ್ಲಿ ಬೆಂಗಳೂರಲ್ಲಿ ಮೊದಲ ವಿಶ್ವ ಸುಂದರಿ ಸ್ಪರ್ಧೆಯನ್ನು ಏರ್ಪಡಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಈ ಸ್ಪರ್ಧೆ ನಡೆದಿತ್ತು. ಗ್ರೀಸ್‌ನ ಇರೇನಾ ಸ್ಕಿ$Éàವಾ ಗೆದ್ದರು. ಭಾರತದಿಂದ ಸ್ಪರ್ಧಿಸಿದ್ದ ರಾಣಿ ಜಯರಾಜ್ ಟಾಪ್-5ರಲ್ಲಿ ಸ್ಥಾನ ಪಡೆದುಕೊಂಡಿದ್ದರು.
25: ಮೊದಲ ಕನ್ನಡಿಗ ಪ್ರಧಾನಮಂತ್ರಿ
ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಕೀರ್ತಿಗೆ ಎಚ್.ಡಿ.ದೇವೇಗೌಡ ಅವರು ಪಾತ್ರರಾದರು. 1996-97ರಲ್ಲಿ ಕೇಂದ್ರದಲ್ಲಿ ಸಂಯುಕ್ತ ರಂಗದ ಸರಕಾರದ ನೇತೃತ್ವ ವಹಿಸಿದ್ದರು. ಇದಕ್ಕೂ ಮೊದಲು ಅವರು ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
26: ಬೆಂಗಳೂರಲ್ಲಿ ಐಐಐಟಿ ಸ್ಥಾಪನೆ
1997-98ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನಾ#ರ್ಮೇಶನ್ ಟೆಕ್ನಾಲಜಿ (ಐಐಐಟಿ-ಬಿ) ಆರಂಭವಾ ಯಿತು. ಜ್ಞಾನವೇ ಶ್ರೇಷ್ಠ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿ ರುವ ಈ ಸಂಸ್ಥೆ ಕರ್ನಾಟಕದ ಹೆಗ್ಗುರುತಾ ಗಿದೆ. 778 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
27: ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆ
1999ರಲ್ಲಿ ಪಾಕಿಸ್ಥಾನ ವಿರುದ್ಧ ದಿಲ್ಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬೌಲರ್ ಅನಿಲ್ ಕುಂಬ್ಳೆ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್ ಪಡೆದು ಸಾಧನೆ ಮಾಡಿದ್ದರು. ಈ ರೀತಿ ಸಾಧನೆ ಮಾಡಿದ 2ನೇ ವ್ಯಕ್ತಿ ಎನಿಸಿಕೊಂಡರು. ಇದಕ್ಕೂ ಮೊದಲು ಇಂಗ್ಲೆಂಡ್‌ನ ಜಿಮ್ ಲೇಕರ್ 10 ವಿಕೆಟ್ ಪಡೆದುಕೊಂಡಿದ್ದರು.
28: 2000ದಲ್ಲಿ ಕೈಗಾ ಅಣು ಸ್ಥಾವರ
ಕೈಗಾ ಅಣು ಸ್ಥಾವರ ಕರ್ನಾಟಕದ ಹೆಮ್ಮೆಗಳಲ್ಲಿ ಒಂದು. ಆರಂಭದಲ್ಲಿ ಪರಿಸರ ವಾದಿಗಳಿಂದ ವಿರೋಧ ಬಂದರೂ 2000ದಲ್ಲಿ ಸ್ಥಾವರ ಲೋಕಾರ್ಪಣೆಯಾಯಿತು. ಪ್ರಸ್ತುತ 4 ಘಟಕಗಳಿಂದ ಒಟ್ಟು 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
29: ಕಾರವಾರದಲ್ಲಿ ಕದಂಬ ನೌಕಾ ನೆಲೆ
ಕರ್ನಾಟಕದ ಏಕೈಕ ಹಾಗೂ ದೇಶದ ಮೂರನೇ ಅತಿ ದೊಡ್ಡ ಕದಂಬ ನೌಕಾ ನೆಲೆಯನ್ನು ಕಾರವಾರದಲ್ಲಿ 2000ರಲ್ಲಿ ಆರಂಭಿಸಲಾಯಿತು. ಇದು 2005ರಿಂದ ಕಾರ್ಯಾಚರಣೆ ಆರಂಭಿಸಿದ್ದು, 45 ಚ.ಕಿ.ಮೀ ವ್ಯಾಪ್ತಿಯಲ್ಲಿ ಇದು ಹಬ್ಬಿದೆ. ಈ ಮೂಲಕ ದೇಶದ ರಕ್ಷಣೆಗೆ ಹೊಸ ಮೈಲುಗಲ್ಲು ನೆಡಲಾಯಿತು.
30: ಮೊದಲ ಖಾಸಗಿ ಎಫ್ಎಂ ಆರಂಭ
ಭಾರತದ ಮೊದಲ ಖಾಸಗಿ ಎಫ್ಎಂ ರೇಡಿಯೋ ಸಿಟಿ 2001ರಲ್ಲಿ ಬೆಂಗಳೂರಲ್ಲಿ ಆರಂಭವಾಯಿತು. ಇದು ಕೂಡ ಕನ್ನಡದ ಮಹತ್ವದ ಬೆಳವಣಿಗೆಯಾಗಿದೆ. ಇದಾದ ಬಳಿಕ ಇಂಡಿಗೋ, ರೆಡ್, ಬಿಗ್, ರೇಡಿಯೋ ಒನ್, ರೇಡಿಯೋ ಮಿರ್ಚಿ ಮುಂತಾದ ಖಾಸಗಿ ಚಾನೆಲ್‌ಗಳು ಆರಂಭವಾದವು.
31: ರಾಜ್ಯದ ಏಕೈಕ ಮಹಿಳಾ ವಿ.ವಿ.
ಕರ್ನಾಟಕ ರಾಜ್ಯ ಮಹಿಳಾ ವಿ.ವಿ. 2003ರಲ್ಲಿ ಸ್ಥಾಪನೆ ಯಾಗಿದ್ದು, ರಾಜ್ಯದ ಏಕೈಕ ಮಹಿಳಾ ವಿ.ವಿ. ಯಾಗಿದೆ. ವಿಜಯಪುರದಲ್ಲಿ ಸ್ಥಾಪಿಸ ಲಾದ ಈ ವಿ.ವಿ.ಗೆ 2017ರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿ ದ್ಯಾನಿಲಯ ಎಂದು ಮರುನಾಮಕರಣ ಮಾಡಲಾಯಿತು. ವಿವಿಗೆ “ನ್ಯಾಕ್’ ಬಿ ಗ್ರೇಡ್ ನೀಡಿದೆ.
32: ನೈಋತ್ಯ ರೈಲ್ವೇ ವಲಯ ಆರಂಭ
ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು 2003ರಲ್ಲಿ ನೈಋತ್ಯ ರೈಲ್ವೇ ವಲಯವನ್ನು ಆರಂಭಿಸಲಾಯಿತು. ದೇಶದ 19 ರೈಲ್ವೇ ವಲಯಗಳ ಪೈಕಿ ನೈಋತ್ಯ ರೈಲ್ವೇ ವಲಯವೂ ಪ್ರಮುಖವಾಗಿದೆ. ಕರ್ನಾಟಕ ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಸಂಚರಿಸುವ ರೈಲುಗಳನ್ನು ಇಲ್ಲಿಂದ ನಿಯಂತ್ರಿಸಲಾಗುತ್ತದೆ.
33: 2004ರಲ್ಲಿ ನಾಡಗೀತೆಗೆ ಮನ್ನಣೆ
ಕುವೆಂಪು ಅವರು ರಚಿಸಿರುವ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ… ಗೀತೆಗೆ 2004ರಲ್ಲಿ ನಾಡಗೀತೆ ಮನ್ನಣೆ ನೀಡಲಾಯಿತು. ಮೈಸೂರು ಅನಂತಸ್ವಾಮಿ ಅವರು ಸಂಯೋಜನೆ ಮಾಡಿರುವ ರಾಗದಲ್ಲಿ ಇದನ್ನು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಾಡಲಾಗುತ್ತದೆ.
34: 2005ರಲ್ಲಿ ವಿಕಾಸ ಸೌಧ ನಿರ್ಮಾಣ
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ರೀತಿಯಲ್ಲೇ ವಿಕಾಸ ಸೌಧವನ್ನು 2005ರಲ್ಲಿ ನಿರ್ಮಿಸಲಾಯಿತು. ಅಂದು ಮುಖ್ಯ ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಈ ವಿಕಾಸ ಸೌಧದ ಕಾರಣಕರ್ತರು. ಇದನ್ನು ಕರ್ನಾಟಕ ರಾಜ್ಯ ಸರಕಾರದ ಸಚಿವಾಲಯವಾಗಿ ಬಳಕೆ ಮಾಡಲಾಗುತ್ತಿದೆ.
35: 2005ರಲ್ಲಿ ಆಲಮಟ್ಟಿ ಅಣೆಕಟ್ಟು
ಕೃಷ್ಣಾ ಮೇಲ್ಡಂಡೆ ನೀರಾವರಿ ಯೋಜನೆಯ ಪ್ರಮುಖ ಆಲಮಟ್ಟಿ. ಲಾಲ್ ಬಹದ್ದೂರ್ ಶಾಸಿŒ ಎಂಬ ಹೆಸರೂ ಹೊಂದಿರುವ ಅಣೆ ಕಟ್ಟು 2005ರಲ್ಲಿ ನಿರ್ಮಾಣವಾಗಿದ್ದು, ಉತ್ತರ ಕರ್ನಾಟಕ ಭಾಗದ ಪ್ರಮುಖ ಜಲ ಮೂಲವಾಗಿದೆ. ಇಲ್ಲಿ 290 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕವೂ ಇದೆ.
36: ಜಿ.ಎಸ್. ಶಿವರುದ್ರಪ್ಪ ರಾಷ್ಟ್ರಕವಿ
ಜಿ.ಎಸ್. ಶಿವರುದ್ರಪ್ಪ ಅವರಿಗೆ 2006ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಷ್ಟ್ರಕವಿ ಎಂಬ ಬಿರುದನ್ನು ನೀಡಿ ಗೌರವಿಸಿತು. ಈ ಮೂಲಕ ಇವರು ರಾಜ್ಯದ 3ನೇ ರಾಷ್ಟ್ರಕವಿ ಎನಿಸಿಕೊಂಡರು. ಇದಕ್ಕೂ ಮೊದಲು ಗೋವಿಂದ ಪೈ ಹಾಗೂ ಕುವೆಂಪು ಅವರಿಗೆ ಈ ಗೌರವ ನೀಡಲಾಗಿತ್ತು.
37: 2007ರಲ್ಲಿ ಕಾವೇರಿ ಐ ತೀರ್ಪು
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 2007ರಲ್ಲಿ ಸುಪ್ರೀಂ ಕೋರ್ಟ್ ಐ ತೀರ್ಪು ಪ್ರಕಟಿಸಿತು. ಇದರ ಅನ್ವಯ ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30, ಪುದುಚೆರಿಗೆ 10, ಪರಿಸರ ಸಂರಕ್ಷಣಗೆ 10 ಮತ್ತು ಸಮುದ್ರಕ್ಕೆ 4 ಟಿಎಂಸಿ ನೀರು ಹಂಚಲಾಯಿತು.
38: ರಾಜ್ಯದಲ್ಲಿ 2 ಹೈಕೋರ್ಟ್ ಪೀಠ
ಕರ್ನಾಟಕದ ಕಲಬುರ್ಗಿ ಮತ್ತು ಧಾರವಾಡದಲ್ಲಿ ಹೈಕೋರ್ಟ್‌ನ ಪೀಠ ಸ್ಥಾಪನೆ ಕುರಿತಂತೆ 5 ದಶಕಗಳ ಬೇಡಿಕೆ ಇತ್ತು. 1991ರಲ್ಲಿ ಈ ಬೇಡಿಕೆ ಚಳವಳಿ ರೂಪ ಪಡೆದ ಪರಿಣಾಮ 2008ರ ಜುಲೈ 4 ರಂದು ಕರ್ನಾಟಕ ಹೈಕೋರ್ಟ್ ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಶಾಶ್ವತ ಪೀಠಗಳನ್ನು ಸ್ಥಾಪಿಸಿತು.
39: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಸಿಲಿಕಾನ್ ಸಿಟಿಯಾಗಿ ಜಗತ್ತಿನ ಪ್ರಮುಖ ನಗರವಾಗಿ ಬೆಳೆದ ಬೆಂಗಳೂರಲ್ಲಿ 2008 ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶುರುವಾಯಿತು. ಈ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾ ಗಿದೆ. 2 ಟರ್ಮಿನಲ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
40: ಕನ್ನಡಿಗರಿಗೆ ಸರಸ್ವತಿ ಸಮ್ಮಾನ್
2010ರಲ್ಲಿ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆ ಯಿತು. ತನ್ಮೂಲಕ ಈ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಎನಿಸಿಕೊಂಡರು. ಬಳಿಕ 2014ರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ರಾಮಾಯಣ ಮಹಾನ್ವೇಷಣಂ ಕೃತಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆಯಿತು.
41: ವಿಶ್ವದ ಮೊದಲ ಜಾನಪದ ವಿವಿ
ಹಾವೇರಿ ಜಿಲ್ಲೆಯಲ್ಲಿ 2010ರಲ್ಲಿ ಜಾನಪದ ವಿವಿಯನ್ನು ಆರಂಭಿಸಲಾಯಿತು. ಜನಪದಕ್ಕಾಗಿಯೇ ಆರಂಭವಾದ ವಿಶ್ವದ ಮೊದಲ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಇದಕ್ಕಿದೆ. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಈ ಜಾನಪದ ವಿಶ್ವವಿದ್ಯಾಲಯವನ್ನು ಉದ್ಘಾಟನೆ ಮಾಡಿದ್ದರು.
42: 2011ರಲ್ಲಿ ಬೆಂಗಳೂರಿಗೆ ಮೆಟ್ರೊ
2011ರ ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಲಾಯಿತು. ಮಹಾತ್ಮಾ ಗಾಂಧಿ ರಸ್ತೆ (ಎಂ.ಜಿ.ರೋಡ್) ಯಿಂದ ಬೈಯ್ಯಪ್ಪನಹಳ್ಳಿ ಮಾರ್ಗವಾಗಿ ಮೊದಲ ಸಂಚಾರ ಆರಂಭಗೊಂಡಿದ್ದು, ಮೊದಲ 3 ದಿನದಲ್ಲೇ 1.69 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸಿದ್ದರು.
43: ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ
2012ರಲ್ಲಿ ಸಂವಿಧಾನಕ್ಕೆ 98ನೇ ತಿದ್ದುಪಡಿ ತಂದ ಬಳಿಕ ಕರ್ನಾಟಕಕ್ಕಾಗಿ 371-ಜೆ ವಿಧಿ ಯನ್ನು ಪರಿಚಯಿಸಲಾಯಿತು. ಈ ಮೂಲಕ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗಕ್ಕೆ ಮೊದಲಬಾರಿಗೆ ವಿಶೇಷ ನಿಬಂಧನೆ ಒದಗಿಸಿ, ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಲಾಯಿತು.
44: ಬೆಳಗಾವೀಲಿ ಸುವರ್ಣ ವಿಧಾನಸೌಧ
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿ ಸುವ ಮೂಲಕ ಕನ್ನಡಿಗರ ಬಹುದಿನದ ಆಸೆ ಈಡೇರಿತು. 2012ರಲ್ಲಿ ಈ ಸೌಧವನ್ನು ಲೋಕಾರ್ಪಣೆ ಮಾಡಲಾಯಿತು. ಇದರಲ್ಲಿ 300 ಮಂದಿ ಕೂರಲು ಅವಕಾಶವಿದ್ದು, ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
45: ಉಳುವಯೋಗಿಗೆ ರೈತ ಗೀತೆ ಮಾನ್ಯತೆ
ಕುವೆಂಪು ವಿರಚಿತ ಉಳುವ ಯೋಗಿಯ ನೋಡಲ್ಲಿ… ಗೀತೆಯನ್ನು 2013ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸರಕಾರವು ರೈತ ಗೀತೆಯನ್ನಾಗಿ ಘೋಷಿಸಿತು. ಈ ಮೂಲಕ ನಾಡಿನ ರೈತರಿಗೆ ಗೌರವ ಸಲ್ಲಿಸಿತು. 1930ರಲ್ಲಿ ಈ ಗೀತೆಯನ್ನು ರಾಷ್ಟ್ರಕವಿ ಕುವೆಂಪು ಅವರು ರಚನೆ ಮಾಡಿದ್ದರು.
46: ಸರಕಾರಿ ಸೇವೆಗಾಗಿ ಸಕಾಲ ಯೋಜನೆ
ನಾಗರಿಕರಿಗೆ ಕಾಲಮಿತಿಯೊಳಗೇ ಸರಕಾರಿ ಸೇವೆಗಳನ್ನು ಒದಗಿಸಲು 2014ರಲ್ಲಿ ಸಕಾಲ ಆರಂಭಿಸಲಾಯಿತು. ಭಾರತದಲ್ಲೇ ಕರ್ನಾಟಕ ಆರಂಭಿಸಿದ ವಿಶಿಷ್ಟ ಸೇವೆ ಇದಾಗಿದೆ. ಜಾತಿ ಆದಾಯ ಪತ್ರ, ಜನನ- ಮರಣ ಪ್ರಮಾಣಪತ್ರ ಸೇರಿ 40 ಇಲಾಖೆಗಳ 478 ಸೇವೆಗಳನ್ನು ಸಕಾಲದಡಿ ಒದಗಿಸಲಾಗುತ್ತದೆ.
47: ಕರ್ನಾಟಕಕ್ಕೆ ಮೊದಲ ಐಐಟಿ
2016ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಇಂಡಿ ಯನ್ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿ (ಐಐಟಿ)ಯನ್ನು ಧಾರವಾಡದಲ್ಲಿ ಸ್ಥಾಪಿಸಲಾಯಿತು. 470 ಎಕರೆ ವಿಸ್ತೀರ್ಣ ಹೊಂದಿದೆ. ಜುಲೈನಲ್ಲೇ ಇದರ ಕಾರ್ಯಾರಂಭವಾಗಿದ್ದರೂ, ಆಗಸ್ಟ್ 28 ರಂದು ಔಪಚಾರಿಕವಾಗಿ ಉದ್ಘಾಟನೆಗೊಂಡಿತು.
48: ಚಿನ್ನಸ್ವಾಮಿಯಲ್ಲಿ ಸಬ್‌ಏರ್ ಸೌಲಭ್ಯ
ಕೇವಲ 1 ನಿಮಿಷದಲ್ಲಿ 10000 ಲೀಟರ್ ನೀರನ್ನು ಹೀರಬಲ್ಲಂತಹ 200 ಎಚ್.ಪಿ. ಮೋಟಾರ್ ವ್ಯವಸ್ಥೆಯನ್ನು 2017ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಳವಡಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ವ್ಯವಸ್ಥೆ ಹೊಂದಿರುವ ಏಕೈಕ ಮೈದಾನ ಎಂಬ ಖ್ಯಾತಿಗೆ ಈ ಮೈದಾನ ಪಾತ್ರವಾಗಿದೆ.
49: 100 ಕೋಟಿ ರೂ. ಗಳಿಸಿದ ಕೆಜಿಎಫ್
2018ರಲ್ಲಿ ತೆರೆ ಕಂಡ ನಟ ಯಶ್ ಅಭಿಯನದ ಕೆಜಿಎಫ್ ಭಾಗ-1 100 ಕೋಟಿ ರೂ. ಗಳಿಸಿದ ಕನ್ನಡದ ಮೊದಲ ಸಿನೆಮಾ ಆಗಿದೆ. ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ನಟನೆಯ ರಾಜಕುಮಾರ ಹಾಗೂ ಗಣೇಶ್ ನಟನೆಯ ಮುಂಗಾರು ಮಳೆ ಚಿತ್ರವು 75 ಕೋಟಿ ರೂ.ಗೂ ಹೆಚ್ಚು ಹಣ ಗಳಿಸಿತ್ತು.
50: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ
ಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಬೇಕೆಂಬ ಬಹುದಿನಗಳ ಕೂಗು 2021ರಲ್ಲಿ ಈಡೇರಿತು. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಅವ ಕಾಶ ನೀಡಲಾಯಿತು. ಪ್ರಾದೇಶಿಕ ಭಾಷೆಗ ಳಲ್ಲಿ ಬ್ಯಾಂಕಿಂಗ್ ಹಾಗೂ ಕೇಂದ್ರ ಸರಕಾ ರದ ಪರೀಕ್ಷೆ ನಡೆಸಬೇಕು ಎಂದು ಪ್ರತಿಭಟನೆ ನಡೆಯುತ್ತಿದ್ದವು.
ಮಾಹಿತಿ: ಮಲ್ಲಿಕಾರ್ಜುನ ತಿಪ್ಪಾರ, ಗಣೇಶ್ ಪ್ರಸಾದ್, ಅಶ್ವಿನಿ ಸಿ.ಆರಾಧ್ಯ