Advertisement
ಯಾವುದೇ ನಿರೀಕ್ಷೆಗಳಿಲ್ಲ, ಏಕೆಂದರೆ…ಭಾರತ ನೂರಾರು ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ, ಭಾಷಿಕ ನಾಗರಿಕತೆಗಳಿಂದ ರೂಪುಗೊಂಡ ದೇಶವಾದ್ದರಿಂದ ಪ್ರತಿಯೊಂದು ರಾಜ್ಯವೂ ತನ್ನ ಭಾಷೆಯನ್ನು ಭದ್ರವಾಗಿ ಉಳಿಸಿಕೊಂಡು ಬೇರೆ ರಾಜ್ಯಗಳ ಭಾಷೆಗಳೊಂದಿಗೆ ಅನ್ಯೋನ್ಯ ಸಂಬಂಧ ಉಳಿಸಿಕೊಳ್ಳುವುದು ರಾಜಕೀಯವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಅನಿವಾರ್ಯವಾಗಿರುವ ಸಂಗತಿ.
ಇಂಥ ಸಂದರ್ಭದಲ್ಲಿ ಆಯಾ ಭಾಷೆಯ ಜನ ತಮ್ಮ ತಮ್ಮ ಭಾಷೆಯ ಉಳಿವಿಗಾಗಿ ನಾನಾ ಮಾರ್ಗ ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕನ್ನಡದ ಎಲ್ಲ ಹಂತದ ಸಾಹಿತ್ಯ ಸಮ್ಮೇಳನಗಳು ನಮ್ಮ ಭಾಷೆಯ ಉಳಿವಿಗಾಗಿ ಏನೆಲ್ಲ ಮಾರ್ಗಸೂಚಿಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾದ ಕ್ರಮಗಳ ಬಗ್ಗೆ ಸರಕಾರಗಳೊಂದಿಗೆ ಚರ್ಚಿಸಬೇಕಾಗಿದೆ. ಆದರೆ ಪ್ರಸ್ತುತ ಸಮ್ಮೇಳನಗಳು ಅಂಥ ಕೆಲಸಗಳಲ್ಲಿ ವಿಫಲಗೊಂಡಿವೆ. ಸಾಹಿತಿಗಳು ಜಾತಿ, ಧರ್ಮ, ಸಮುದಾಯ, ರಾಜಕೀಯ ಪಕ್ಷ ಮುಂತಾದ ಗುಂಪುಗಳಾಗಿ ಛಿದ್ರಗೊಂಡು ಸಾಹಿತ್ಯದ ಹಿರಿಮೆಯನ್ನು ಕೆಳಮಟ್ಟಕ್ಕೆ ಕುಸಿಯುವಂತೆ ಮಾಡಿದ್ದಾರೆ. ಪಂಥ, ಸಿದ್ಧಾಂತ, ಪಕ್ಷ ಮುಂತಾದ ಅನಿಷ್ಠಗಳ ಮೂಲಕ ಮೂಲ ಸಾಹಿತ್ಯದ ಆಶಯದ ಕತ್ತನ್ನೆ ಮುರಿದಿದ್ದಾರೆ. ಗುಂಪುಗಾರಿಕೆ ಮಾಡುತ್ತ ಸಾಹಿತ್ಯ ಸಮ್ಮೇಳನಗಳ ಮಹತ್ವಕ್ಕೂ ಮಸಿ ಬಳಿದಿದ್ದಾರೆ. ಹಾಗಾಗಿ ಸಾಹಿತ್ಯ ಸಮ್ಮೇಳನಗಳು ಭಾಷೆಯ ಅಳಿವು-ಉಳಿವಿಗಾಗಿ ಯಾವ ಸಾಧನೆಯನ್ನೂ ಮಾಡಲಾರವೆಂದು ನನ್ನ ವೈಯಕ್ತಿಕ ಅಭಿಪ್ರಾಯ.
-ಕೇಶವ ರೆಡ್ಡಿ ಹಂದ್ರಾಳ, ಹಿರಿಯ ಕಥೆಗಾರರು
ಸಮ್ಮೇಳನದ ಸರ್ವಾಧ್ಯಕ್ಷರು ಸಾಹಿತ್ಯದ ಪರವಾಗಿಯೇ ಇರಬೇಕು. ಎಷ್ಟೇ ಸಾಹಿತ್ಯ ಮತ್ತು ರಾಜಕೀಯಗಳ ಘರ್ಷಣೆ ಕುರಿತು ಮಾತಾಡಿದರೂ ತೊಂದರೆಯಿಲ್ಲ, ಆದರೆ ಯಾವುದೇ ರಾಜಕೀಯ ಪಕ್ಷದ ವಕ್ತಾರರಂತೆ ಅಥವಾ ವಿರೋಧ ಪಕ್ಷದ ನಾಯಕರಂತೆ ವರ್ತಿಸುವುದು ಬೇಡ. ರಾಜ ಕೀಯ ನಾಯಕರು ಸಾಹಿತ್ಯದ ಘನತೆಯ ಬೆಳಕಿನಲ್ಲಿ ಮಾತಾಡಬೇಕು. ರಾಜಕೀಯದ ಕೆಸರೆರಚಾಟ ಅಲ್ಲಿ ನಡೆಯಬಾರದು. ಗೋಷ್ಠಿಗಳು ಕಾಲಮಿತಿಯಲ್ಲಿ ಕಡ್ಡಾಯವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಜನಸಂದಣಿ ಹೆಚ್ಚಾದಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕೆ ಸೂಕ್ತ ಸುರಕ್ಷ ಕ್ರಮಗಳು ಜಾರಿಯಲ್ಲಿರಲಿ. ಲಕ್ಷಾಂತರ ಜನ ಸೇರುವುದರಿಂದ ಮೊಬೈಲ್ ಬಳಕೆ ಹೆಚ್ಚಿರುತ್ತದೆ. ಅದಕ್ಕೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಇರಲಿ. ನೆಟ್‌ವರ್ಕ್ ಇಲ್ಲದೆ ಮಳಿಗೆಗಳು ವ್ಯಾಪಾರ ಮಾಡುವುದು ಕಷ್ಟ. ಮಾಸ್ತರುಗಳು ಮಕ್ಕಳೊಡನೆ ಪುಸ್ತಕ ಮಳಿಗೆಗೆ ಬಂದು ಹೋಗಲಿ. ಮಕ್ಕಳಿಗೆ ಇಂತಹ ನೆನಪುಗಳು ಬಹಳ ಮುಖ್ಯ. ಪುಸ್ತಕ ಮಾಹಿತಿ ತಿಳಿಸಲು ಓದುಗರು ತಮ್ಮ ಮೊಬೈಲ್ ಸಂಖ್ಯೆ/ಇಮೇಲ್ ತಿಳಿಸುವ ಅವಕಾಶ ಇರಲಿ. ಪುಸ್ತಕ ಪ್ರಕಟನೆಗೆ ನೆರವಾಗುವ ಕಲಾವಿದರು, ಮುದ್ರಕರು, ತಂತ್ರಜ್ಞರು ಮತ್ತು ಪ್ರಕಾಶಕರು ಒಂದೆಡೆ ಸೇರಿ ವೃತ್ತಿಪರ ಹರಟೆ ಹೊಡೆಯಲು ಅಡ್ಡಾ ಒಂದಿದ್ದರೆ ಅನುಕೂಲ. ಇದು ಮುಂದಿನ ದಿನಗಳಲ್ಲಿ ಪುಸ್ತಕ ಪ್ರಕಟನೆಗೆ ನೆರವಾಗುತ್ತದೆ. ಕನ್ನಡ ಕಲಿಸಲು ಮತ್ತು ಕಲಿಯಲು ಆಸಕ್ತರಾಗಿರುವವರ ಒಂದು ಪಟ್ಟಿ ಮಾಡುವ ವ್ಯವಸ್ಥೆ ಇರಲಿ.
-ವಸುಧೇಂದ್ರ, ಕಥೆಗಾರರು, ಪ್ರಕಾಶಕರು. ಸಮ್ಮೇಳನ ನಾಡಹಬ್ಬವಾಗಬೇಕು…
ಸಾಹಿತ್ಯ ಸಮ್ಮೇಳನವೆಂದರೆ ಕನ್ನಡ ಭಾಷೆ-ಸಂಸ್ಕೃತಿಗಳು ಪ್ರತಿ ವರ್ಷವೂ ಇರಿಸುತ್ತಿರುವ ಹೊಸ ಹೆಜ್ಜೆಗೆ ಸಂಭ್ರಮದ ಆಹ್ವಾನ. ಕಳೆದ ವರ್ಷ ನಾವು ಸಾಧಿಸಿದ್ದೇನು, ಎಷ್ಟು, ಸಾಹಿತ್ಯದ ಯಾವ ಪ್ರಕಾರದಲ್ಲಿ ಅನನ್ಯತೆ ಮೆರೆದೆವು ಅಥವಾ ಮುಂದಡಿಯಿಡಲು ಉದ್ಯುಕ್ತರಾದೆವು, ಈಗ ನಮ್ಮ ಶಕ್ತಿ-ಮಿತಿಗಳೇನು ಎಂಬ ಆತ್ಮಾವಲೋಕನದಿಂದ ಆರಂಭವಾಗಬೇಕೆಂಬುದು ನನ್ನ ನಿರೀಕ್ಷೆ. ಈ ಅರಿವಿನೊಡನೆ ಮುಂದಿನ ಗುರಿಯನ್ನು ನಿಶ್ಚಯಿಸಿದಾಗ ಕಾರ್ಯೋನ್ಮುಖರಾಗಬೇಕಾದ ದಿಕ್ಕು-ದೆಸೆಗಳು ಸ್ಪಷ್ಟವಾಗುತ್ತವೆ. ಅನುಷ್ಠಾನಯೋಗ್ಯ ವಿಷಯಗಳ ಗೋಷ್ಠಿಗಳು, ಉದಾಹರಣೆಗೆ, ನಿತ್ಯಜೀವನದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವುದು, ಯುವ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವುದು, ಈ ಕುರಿತು ಗಂಭೀರ ಚರ್ಚೆಗಳಾಗಬೇಕು. ಫಲಸ್ವರೂಪವಾಗಿ ದೊರೆತ ವಿಚಾರಗಳಲ್ಲಿ ಕೆಲವನ್ನಾದರೂ ಮರುವರ್ಷದೊಳಗೆ ಕಾರ್ಯರೂಪಕ್ಕೆ ತರುವ ನಿಯಮವಿರಿಸಿಕೊಳ್ಳಬೇಕು. ವ್ಯವಸ್ಥಿತ ಪುಸ್ತಕ ಮೇಳಗಳನ್ನು ವರ್ಷಕ್ಕೆ ಕನಿಷ್ಠ ಎರಡಾವರ್ತಿ ರಾಜ್ಯದ ಬೇರೆಬೇರೆ ಪ್ರದೇಶಗಳಲ್ಲಿ ಆಯೋಜಿಸಿ, ಪ್ರಕಾಶಕ-ಲೇಖಕ-ಓದುಗರನ್ನು ಬೆಸೆಯುವ ಶಕ್ತಿಶಾಲಿ ಮಾಧ್ಯಮವಾಗಿ ಸಾಹಿತ್ಯ ಪರಿಷತ್ತು ರೂಪುಗೊಳ್ಳಬೇಕು. ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ, ಪ್ರತೀವರ್ಷ ಕನ್ನಡಿಗರು ಎದುರು ನೋಡುವ ಅರ್ಥಪೂರ್ಣ ನಾಡಹಬ್ಬವಾಗಬೇಕು. ನಾಡು ನುಡಿ ಸಂರಕ್ಷಿಸುವಲ್ಲಿ, ನೆರೆ ರಾಜ್ಯದವರು ಅನುಸರಿಸುತ್ತಿರುವ ವಿಧಾನಗಳನ್ನು ನಾವು ಅಳವಡಿಸಿಕೊಳ್ಳಬೇಕು.
-ಸಹನಾ ವಿಜಯಕುಮಾರ್, ಕಾದಂಬರಿಗಾರ್ತಿ
Related Articles
ಸಾಹಿತ್ಯ ಸಮ್ಮೇಳನದಲ್ಲಿ ಯಾವ ಗೋಷ್ಠಿ ಇರಬೇಕು, ಎಂತಹ ವಿಷಯಗಳು ಚರ್ಚೆಯಾಗಬೇಕು, ಕನ್ನಡ ನಾಡುನುಡಿಯ ಉಳಿವಿಗಾಗಿ ಏನೆಲ್ಲ ನಿರ್ಣಯಗಳಾಗಬೇಕು ಎಂಬುದನ್ನು ಚರ್ಚಿಸುವ ಬದಲಾಗಿ ಬೇರೆಬೇರೆ ಸಂಗತಿಗಳೇ ಹೆಚ್ಚು ಚರ್ಚೆಗೆ ಒಳಪಡುತ್ತಿವೆ. ಇದನ್ನು ಗಮನಿಸಿದರೆ ನಾವೆಲ್ಲ ಎಷ್ಟು ಅಸೂಕ್ಷ್ಮರು ಮತ್ತು ಸಂವೇದನರಹಿತರಾಗಿದ್ದೇವೆ ಎಂದು ಖೇದವಾಗುತ್ತದೆ. ಇದರ ಹೊರತಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ನಮಗೆ ಹಬ್ಬ. ಇದು ಕೇವಲ ಸಾಹಿತ್ಯ ವಲಯದ, ವಿದ್ವತ್ವಲಯದ ಜನರಿಗೆ ಮಾತ್ರ ಸೀಮಿತವಾದುದಲ್ಲ ಎಂಬುದರ ಪ್ರಜ್ಞೆ ನಮಗೆ ಇರಬೇಕು. ಕನ್ನಡದ ಕಟ್ಟ ಕಡೆಯ ವ್ಯಕ್ತಿಗೆ ಈ ಹಬ್ಬ ತಲುಪಬೇಕು. ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ರಚನೆ ಆಗುವ ಸಾಹಿತ್ಯ ನಮ್ಮಲ್ಲಿ ಕಡಿಮೆ ಮತ್ತು ಮಕ್ಕಳಿಗಾಗಿಯೇ ನಡೆಯುವ ಸಮ್ಮೇಳನಗಳಂತೂ ಇಲ್ಲವೇ ಇಲ್ಲ! ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳಿಗಾಗಿಯೇ ಮೀಸಲಾಗಿರುವ ಪರ್ಯಾಯ ಗೋಷ್ಠಿ ಇರುವುದು ಪ್ರಸ್ತುತ ಅನಿವಾರ್ಯ. ಶಾಲಾ ಪಠ್ಯಕ್ರಮದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪರಿಚಯಾತ್ಮಕ ವಿಷಯಗಳಿರಬೇಕು. ಉಳಿದಂತೆ ಗುಣಾತ್ಮಕವಾಗಿ ಸಾಹಿತ್ಯಿಕ ಸಂಗತಿಗಳು ಗುಂಪು, ಪಂಥ, ಅಕಾಡೆಮಿಕ್, ನಾನ್ ಅಕಾಡೆಮಿಕ್ ಆಚೆಗೆ ಚರ್ಚೆಯಾಗಬೇಕು.. ಆ ಕುರಿತ ಸಾಮಾನ್ಯ ತಿಳಿವಳಿಕೆ ಕನ್ನಡ ನಾಡಿನಲ್ಲಿ ವಾಸವಾಗಿರುವ ಎಲ್ಲರಿಗೂ ತಿಳಿದಿರಬೇಕು.
-ಸ್ವಾಮಿ ಪೊನ್ನಾಚಿ, ಯುವ ಕಥೆಗಾರ
Advertisement
ಅನುಭವಿಗಳ ಒಡನಾಟ ಸಿಗುವಂತಾಗಲಿಭಾರತದಾದ್ಯಂತ ನೆಲೆಸಿರುವ ಕನ್ನಡಿಗರುಈ ನೆಪದಲ್ಲಾ ದರೂ ಒಂದೆಡೆ ಸೇರುತ್ತಾರೆ. ವರ್ಷಕ್ಕೊಮ್ಮೆಯಾದರೂ ಮೆಚ್ಚಿನ ಸಾಹಿತಿಗಳನ್ನುಕಂಡು, ಮಾತನಾಡಿಸಿ, ಅವರ ಮಾತು,ಅನುಭವ ಕೇಳುವ ಅವಕಾಶ ಸಿಗುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯದ ಹಲವು ಆಯಾಮಗಳನ್ನು ಪರಿಣತರು ವಿವಿಧ ಗೋಷ್ಠಿಗಳಲ್ಲಿ ಚರ್ಚೆಗಳ ಮೂಲಕ ಪರಿಚಯಿಸುತ್ತಾರೆ. ಹೊಸದಾಗಿ ಕನ್ನಡ ಪುಸ್ತಕಗಳನ್ನು ಓದಲು ಶುರು ಮಾಡುವವರಿಗೆ ಮತ್ತು ಹೊಸ ಬರಹಗಾರರಿಗೆ ನಮ್ಮ ಕನ್ನಡದ ಹೆಮ್ಮೆಯ ಪಾರಂಪರಿಕ ಕೃತಿಗಳ ವಿಮರ್ಶಾತ್ಮಕ ಪರಿಚಯವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಸಾಹಿತ್ಯ ಮತ್ತು ಪುಸ್ತಕೋದ್ಯಮದ ತುಲನಾತ್ಮಕ ಒಳನೋಟಗಳು ಸಿಗುತ್ತವೆ. ಉದಾಹರಣೆಗೆ ಇತ್ತೀಚಿಗೆ ನೊಬೆಲ್ ಪ್ರಶಸ್ತಿ ಪಡೆದ “ದಿ ವೆಜಿಟೇರಿಯನ್’ ಪುಸ್ತಕದ ಬಗ್ಗೆ ಹಲವು ಚರ್ಚೆಗಳು ಆಗಿವೆ. ಈ ರೀತಿಯ ಸಮ್ಮೇಳನಗಳಲ್ಲಿ ಸಂಗೀತ, ನೃತ್ಯ, ರಂಗಭೂಮಿ ಮತ್ತು ಸಿನೆಮಾ ಕಲಾವಿದರೂ ಭಾಗವಹಿಸುತ್ತಾರೆ. ಸಾಹಿತ್ಯವು ಹೇಗೆ ಇತರ ಕಲೆಗಳನ್ನು ಒಳಗೊಳ್ಳುತ್ತದೆ ಎಂದು ತಿಳಿಯುತ್ತದೆ. ಅನುಭವಿ ಲೇಖಕರು ಮತ್ತು ಇತರ ಕ್ಷೇತ್ರಗಳ ಪರಿಣತರೊಂದಿಗಿನ ಚರ್ಚೆಯಿಂದ ಹಲವು ವಿಷಯಗಳನ್ನು ತಿಳಿಯಲು ಹಾಗೂ ನಮ್ಮ ಅರಿವಿನ ಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
-ಪೂರ್ಣಿಮಾ ಮಾಳಗಿಮನಿ, ಲೇಖಕಿ ಅರ್ಥಪೂರ್ಣ ಚರ್ಚೆಗಳು ನಡೆಯಬೇಕು
ಕನ್ನಡ ಜಗತ್ತು ಆರಂಭದಿಂದಲೂ ಸಹಬಾಳ್ವೆಯ, ಸಹಿಷ್ಣುತೆ ಯ ಅಗತ್ಯವನ್ನು ಕಾಣ್ಕೆಯ ಹಾಗೆ, ಮಾದರಿಯ ಹಾಗೆ ಕಂಡಿದೆ. ಸಾಹಿತ್ಯವು ಲೋಕವನ್ನೆಲ್ಲ ಅದರ ನಿಜ ಸುಳ್ಳುಗಳಲ್ಲಿ ಕಾಣುವ ಹಾಗೆ ಸಾಹಿತ್ಯ ಸಮ್ಮೇಳನವೂ, “ಒಳಗೊಳ್ಳುವ’ ವಿನ್ಯಾಸ ಹೊಂದಿರಬೇಕು. ಆ ಪ್ರಯತ್ನಗಳು ಇವೆ ನಿಜ. ಆದರೆ, ಒಳಗೆಲ್ಲೋ ಒಂದು ಮೂಕ ಅಮೈತ್ರಿಯೂ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತದೆ. ಶ್ರಮಜೀವಿಗಳು, ರೈತರು, ಮಹಿಳೆಯರ ಕುರಿತು ಕಾಟಾಚಾರದ ಗೋಷ್ಠಿ ಬದಲು ಅರ್ಥಪೂರ್ಣ ಚರ್ಚೆ ನಡೆಯಬೇಕು. ಕವಿಗೋಷ್ಠಿಗಳ ಸ್ವರೂಪ, ಸಮ್ಮಾನಗಳು, ಔಪಚಾರಿಕತೆಗೇ ಸಮಯದ ದುಂದು, ಊಟೋಪಚಾರಗಳ ಗೊಂದಲ ಬಗೆಗೂ ಮರುಪರಿಶೀಲನೆ ಆಗಬೇಕು. ರಾಜಕಾರಣಿಗಳ ಪಾತ್ರ ಕಡಿಮೆಯಾದಷ್ಟೂ ಒಳ್ಳೆಯದು. ಬರಹಗಾರರ ಸಮ್ಮೇಳನ ಎನ್ನುವ ಚಿತ್ರ ಬದಲಾಗಿ, ಸಮಸ್ತ ಕನ್ನಡಿಗರ ಹಬ್ಬ ಎನ್ನುವ ವಿಸ್ತಾರ, ವೈವಿಧ್ಯ ಬರಬೇಕು. ಹಿಂದೊಂದು ಸಮ್ಮೇಳನದಲ್ಲಿ ವಿವೇಕ ರೈ ಮತ್ತು ಕಿ.ರಂ. ನಾಗರಾಜ ಅವರನ್ನು ಅವರ ಪರಿಚಯ ಮಾಡಿಕೊಡಬೇಕಾದವರು ಅವರ ಹೆಸರನ್ನೇ ಕೇಳಿರಲಿಲ್ಲ! ಮತ್ತು ಅವರು ಪರಿಷತ್ತಿನ ಗೌರವಾನ್ವಿತ ಪದಾಧಿಕಾರಿಗಳಾಗಿದ್ದರು! ಸಮಕಾಲೀನ ಜಗತ್ತನ್ನು ಕನ್ನಡದ ಕನ್ನಡಿಯಲ್ಲಿ ಕಾಣಿಸಬೇಕು ಎನ್ನುವುದು ಯುಟೋಪಿಯನ್ ಅನ್ನಿಸಬಹುದು. ಆದರೆ ಅದು ಈ ಹೊತ್ತಿನ ತುರ್ತು. ಸಾಹಿತ್ಯ ಸಮ್ಮೇಳನಗಳು ಮಾತ್ರ ಇಂಥ ಹೊಣೆ ಹೊರಬಲ್ಲವು. ಆ ಶಕ್ತಿಯನ್ನು ಸಮ್ಮೇಳನಗಳಿಗೆ ತರಬೇಕಾಗಿರುವುದು ನಮ್ಮ ಹೊಣೆ.
-ಎಂ.ಎಸ್. ಆಶಾದೇವಿ, ವಿಮರ್ಶಕರು