ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅನಿಶ್ಚಿತತೆ ಎದುರಾಗಿದ್ದು, ನಿಗದಿತ ದಿನಾಂಕ್ಕೆ ಸಮ್ಮೇಳನ ನಡೆಯೊತ್ತೊ ಇಲ್ಲವೊ ಎನ್ನುವುದನ್ನ ಮೂಕನಾಗಿ ನೋಡುವ ಸ್ಥಿತಿ ಬಂದಿದೆ ಎಂದು ಕಸಾಪ ಅಧ್ಯಕ್ಷ, ನಾಡೋಜ ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.
ನಗರಸ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾಹಿತ್ಯ ಸಮ್ಮೇಳನ ನಡೆಸಲು ನವೆಂಬರ್ 11,12,13 ಕ್ಕೆ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಇತ್ತೀಚಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಸಮ್ಮೇಳನಕ್ಕೆ ಪೂರ್ವ ಸಿದ್ದತೆ ಆಗಿಲ್ಲ ಸಮ್ಮೇಳನ ಮುಂದಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ತದನಂತರ ಎರಡು ದಿನ ಆದ ಮೇಲೆ ಮುಖ್ಯಮಂತ್ರಿಗಳು ಅದೆ ದಿನಾಂಕಕ್ಕೆ ಸಮ್ಮೇಳನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಮೊದಲು ಇದ್ದ ಉತ್ಸಾಹ ಕಡಿಮೆಯಾಗುತ್ತಿದೆ. ಪ್ರತಿ ಹೆಜ್ಜೆಗೂ ನಮಗೆ ಸಹಕಾರ ಸಿಗ್ತಿಲ್ಲ. ಇದರಿಂದಾಗಿ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂತದ್ದು ಸಾಹಿತ್ಯ ಪರಿಷತ್ ಅಧ್ಯಕ್ಷರು. ಮುಖ್ಯಮಂತ್ರಿಗಳು ಇದೆ ಜಿಲ್ಲೆಯವರು, ನಾನು ಇದೆ ಜಿಲ್ಲೆಯವನು ಈ ಕಾರಣಕ್ಕೆ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಸಮ್ಮೇಳನ ಆಯೋಜನೆ ಬಗ್ಗೆ ಸಿಎಂ ಜೊತೆ ಚರ್ಚಿಸಲು ಸಭೆ ನಿಗದಿ ಗೊಳಿಸುವಂತೆ ಪತ್ರ ಬರೆದು ಮನವಿ ಮಾಡಿದ್ದೆ. ಹೀಗಾಗಿ ಸಭೆ ನಡೆಸಲು ದಿನಾಂಕ ನಿಗದಿ ಮಾಡಿ ನಾಲ್ಕು ಬಾರಿ ಸಭೆ ಮುಂದೂಡಿದರು. ಸಿಎಂ ಮನೆ ಕಾಯುವ ಅಧ್ಯಕ್ಷ ನಾನಲ್ಲ, ಸ್ವಾಭಿಮಾನ ಬಿಟ್ಟು ಹೋಗಲ್ಲ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಮ್ಮೇಳದನ ದಿನಾಂಕ ಘೋಷಣೆ ಮಾಡಿದ ಮೇಲೆ ಲಾಂಛನ ಬಿಡುಗಡೆ ಆಗಬೇಕಿತ್ತು. ಹಲವು ಸಮಿತಿಗಳ ರಚನೆ ಆಗಬೇಕಿತ್ತು. ಇದುವರೆಗೆ ಸಮಿತಿಗಳ ರಚನೆಯಾಗಿಲ್ಲ. ನಮಗೆ ಈಗ ನಿಗದಿತ ದಿನಾಂಕಕ್ಕೆ ಸಮ್ಮೇಳನ ನಡೆಯುವ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಪ್ರತಿನಿಧಿಗಳ ನೋಂದಣಿಯಾಗಿಲ್ಲ, ಪ್ರತಿನಿಧಿಗಳ ನೋಂದಣಿಗೆ ಒಂದು ತಿಂಗಳು ಸಮಯ ಬೇಕಾಗುತ್ತದೆ. ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಸುಮಾರು 50 ಸಾವಿರ ಆವಂತ್ರಣ ಪತ್ರಿಕೆಗಳನ್ನು ಪೋಸ್ಟ್ ಮಾಡಬೇಕಿದೆ. ಇದಕ್ಕೆಲ್ಲ ಸುಮಾರು ಎರಡು ತಿಂಗಳು ಆದರೂ ಸಮಯ ಬೇಕಾಗುತ್ತದೆ. ಅಲ್ಲದೇ ಸಮ್ಮೇಳನಕ್ಕೆ ಬಜೆಟ್ ನಲ್ಲಿ ಮೀಸಲಿಟ್ಟ 20 ಕೋಟಿ ರೂ. ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಒಂದು ಪೈಸೆ ಬಂದಿಲ್ಲ. ಹೀಗಾಗಿ ಸಮ್ಮೇಳನ ನಡೆಯುವ ಬಗ್ಗೆ ಅನಿಶ್ಚಿತತೆ ಎದುರಾಗಿದ್ದು ತುಂಬ ಬೇಸರವಾಗಿದೆ ಎಂದು ಹೇಳಿದರು.
ಈ ಬಗ್ಗೆ ಹಲವು ಸಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡುತ್ತಾರೆ. ಮೈಸೂರ ದಸರಾ ಆಚರಣೆಲ್ಲಿ ಸಾಹಿತ್ಯ ಪರಿಷತ್ತು ಅಧ್ಯಕ್ಷರನ್ನ ಕಡೆಗಣಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕಸಪಾ ಅಧ್ಯಕ್ಷರಿಲ್ಲ. ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಗೌರವ ನೀಡದಿರುವುದು ಈ ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಹಾವೇರಿ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಇತರರು ಇದ್ದರು.
ಇದನ್ನೂ ಓದಿ : ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಲಿನಲಿಕೆ: ಮಿಥುನ್ ರೈ