ಸೊಲ್ಲಾಪುರ: ಸೊಲ್ಲಾಪುರದಲ್ಲಿ ಜು. 8 ಮತ್ತು 9ರಂದು ಬೃಹತ್ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಬಿ. ಬಿ. ಪೂಜಾರಿ ಇವರನ್ನು ಆದರ್ಶ ಕನ್ನಡ ಬಳಗವು ಜೂ. 24ರಂದು ಗೌರವಿಸಿ ಅಭಿನಂದನೆ ಸಲ್ಲಿಸಿತು.
ಸುಮಾರು 67 ವರ್ಷಗಳ ಹಿಂದೆ 1950ರಲ್ಲಿ ಸೊಲ್ಲಾಪುರದಲ್ಲಿ ಎಂ. ಆರ್. ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಡಾ| ಜಯದೇವಿ ತಾಯಿಲಿಗಾಡೆ, ರಾಜಶೇಖರ ಮಡಕಿ ಅವರ ನೇತೃತ್ವದಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಜರಗಿತ್ತು.
ಡಾ| ಪೂಜಾರಿ ಅವರು ಸೊಲ್ಲಾಪುರದ ಸಂಗಮೇಶ್ವರ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು ಹಲವಾರು ಕೃತಿಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಸೇವೆ ಕೈಗೊಂಡಿದ್ದಾರೆ. ಅಪಾರವಾದ ಶಿಷ್ಯವೃಂದ ಹೊಂದಿರುವ ಪೂಜಾರಿಯವರು ಹೊರನಾಡಿನಲ್ಲಿ ಕನ್ನಡದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.
ಜು. 8 ಮತ್ತು 9ರಂದು ಸೊಲ್ಲಾಪುರದ ಹುತಾತ್ಮ ಸ್ಮೃತಿಮಂದಿರದಲ್ಲಿ ಜರಗಲಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಡಾ| ಗುರುಲಿಂಗಪ್ಪ ಧಬಾಲೆ, ಡಾ| ಮಧುಮಾಲ ಲಿಗಾಡೆ, ಡಾ| ಗುರುಸಿದ್ದಯ್ಯ ಸ್ವಾಮಿ ಹಾಗೂ ಹಲವಾರು ಕನ್ನಡ ಪ್ರೇಮಿಗಳು ಶ್ರಮಿಸುತ್ತಿದ್ದಾರೆ. ಸಮ್ಮೇಳನಕ್ಕೆ ಶುಭಾಶಯ ಕೋರುತ್ತ ಆದರ್ಶ ಕನ್ನಡ ಬಳಗದ ಗೌರವಾಧ್ಯಕ್ಷ ಗಿರೀಶ ಜಕಾಪುರೆ ಹಾಗೂ ಅಧ್ಯಕ್ಷ ಮಲಿಕಜಾನ್ ಶೇಖ್ ಬಳಗದ ಪರ ಡಾ| ಬಿ. ಬಿ. ಪೂಜಾರಿಯವರಿಗೆ ಗೌರವ ಸಲ್ಲಿಸಿದರು.
ಸೊಲ್ಲಾಪುರ ಎಂದಿಗೂ ಕನ್ನಡದ ನೆಲ. ಇದಕ್ಕೆ ಕಾಯಕ ಯೋಗಿ ಸಿದ್ಧರಾಮನ ವಚನಗಳೇ ಸಾಕ್ಷಿ. ಈ ಪುಣ್ಯ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಯಾಗಿ ಆಯೋಜಿಸುವ ಮೂಲಕ ಹೊರನಾಡಿನಲ್ಲಿ ಕನ್ನಡದ ಕಹಳೆ ಬಾರಿಸಲು ಎಲ್ಲರೂ ಕೂಡಿ ಶ್ರಮಿಸಬೇಕು
– ಗಿರೀಶ ಜಕಾಪುರೆ (ಯುವ ಸಾಹಿತಿ,ಮೈಂದರ್ಗಿ).
ಡಾ| ಪೂಜಾರಿ ಅವರು ಸೊಲ್ಲಾಪುರ ಭಾಗದಲ್ಲಿ ಮಾಡಿದ ಕನ್ನಡಪರ ಚಟುವಟಿಕೆಗಳು ಇಲ್ಲಿನ ಕನ್ನಡ ಹೋರಾಟಗಾರರಿಗೆ ಆದರ್ಶಪ್ರಾಯ. ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷ ಸ್ಥಾನ ಅವರಿಗೆ ಸಂದಿದ್ದು, ಅವರಪ್ರಾಮಾಣಿಕ ಸೇವೆಗೆ ಸಿಕ್ಕಿರುವ ಫಲ. ಅವರ ಅಧ್ಯಕ್ಷ ಸ್ಥಾನದಲ್ಲಿ ಹೊರನಾಡಿನ ಕನ್ನಡಿಗರ ಸಮಸ್ಯೆಗಳು ಬಗೆಹರಿಯಲಿ
-ಮಲಿಕಜಾನ್ ಶೇಖ್
(ಅಧ್ಯಕ್ಷ: ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ).