ಧಾರವಾಡ: ಜ.7 ರಿಂದ 9ರವರೆಗೆ ನಿಗದಿಯಾಗಿದ್ದ ಅಖೀಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.4, 5 ಮತ್ತು 6 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ಸ್ಥಳ ಪರಿಶೀಲನೆ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನ ವ್ಯವಸ್ಥಿತವಾಗಿ ಸಂಘಟಿಸಲು ಅಂದಾಜು 12 ರಿಂದ 13 ಕೋಟಿ ಹಣ ಬೇಕಾಗುತ್ತದೆ. ಈ ಕುರಿತು ಪ್ರಸ್ತಾವನೆ ಸಿದ್ಧಗೊಳಿಸಲಾಗಿದ್ದು, ಶೀಘ್ರವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈಗಾಗಲೇ 14ಕಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿದ್ದು, ಜನಪ್ರತಿನಿಧಿ ಗಳು, ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿ ಧಿಗಳು ಮತ್ತು ಅ ಧಿಕಾರಿಗಳು ಸಮಿತಿ ಸದಸ್ಯರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮಿತಿಗಳನ್ನು ಅಂತಿಮಗೊಳಿಸಿ, ಬರುವ ಸೋಮವಾರದಿಂದ ಸಮಿತಿಗಳ ಸಭೆ ಜರುಗಿಸಲಾಗುವುದು. ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ. ಬರುವ ಅತಿಥಿಗಳಿಗೆ, ಸಾರ್ವಜನಿಕರಿಗೆ ಊಟ, ವಸತಿ, ಸಾರಿಗೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಯಾವುದೇ ಲೋಪವಾಗದಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಡಿಸಿ ದೀಪಾ ಅವರು, ವಾಹನ ಪಾರ್ಕಿಂಗ್, ಪುಸ್ತಕ ಪ್ರದರ್ಶನ ಮಳಿಗೆ, ಪುಸ್ತಕ ಮಾರಾಟ ಮಳಿಗೆ, ಊಟದ ವ್ಯವಸ್ಥೆ ಮಾಡಲು ಉದ್ದೇಶಿಸಿರುವ ಕೆಸಿಡಿ ಪಿಜಿಕ್ಸ್ ಗ್ರೌಂಡ್, ಯುನಿರ್ವಸಿಟಿ, ಪಬ್ಲಿಕ್ ಸ್ಕೂಲ್, ಡಯಟ್ ಆವರಣ ಮತ್ತು ಕೃಷಿ ವಿಶ್ವವಿದ್ಯಾಲಯ ಸಭಾಭವನ ವಿವಿಧ ಕಟ್ಟಡ, ಸ್ಥಳಗಳ ಪರಿಶೀಲನೆ ಮಾಡಿದರು.
ಜಿಪಂ ಸಿಇಒ ಡಾ|ಬಿ.ಸಿ.ಸತೀಶ್, ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ, ನಗರ ಉಪ ಪೊಲೀಸ್ ಆಯುಕ್ತರಾದ ಬಿ.ಎಸ್. ನೇಮಗೌಡ, ರವೀಂದ್ರ ಗಡಾದ, ಜಿಲ್ಲಾ ಉಪ ಪೊಲೀಸ್ ವರಿಷ್ಠಾ ಧಿಕಾರಿ ರಾಮನಗೌಡ ಹಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ವಿ.ಬಿ. ಯಮಕನಮರಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕೆ.ಎಚ್. ಚನ್ನೂರ, ಸಹಾಯಕ ನಿರ್ದೇಶಕ ಎಸ್.ಕೆ. ರಂಗಣ್ಣವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಲಿಂಗರಾಜ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮಹಾನಗರ ಪಾಲಿಕೆ ಸಹಾಯಕ ಆಯುಕ್ತರು ಇದ್ದರು.
ಇದಕ್ಕೂ ಮುನ್ನ ಡಿಸಿ ಕಚೇರಿಯಲ್ಲಿ ವಿವಿಧ ಇಲಾಖೆ ಅ ಧಿಕಾರಿಗಳ ಸಭೆ ಜರುಗಿಸಿದ ಜಿಲ್ಲಾಧಿಕಾರಿಗಳು, ಸ್ಥಳಗಳ ಆಯ್ಕೆ, ಅಲ್ಲಿ ಬೇಕಿರುವ ಸೌಲಭ್ಯಗಳು, ಅಗತ್ಯವಿರುವ ಅಂದಾಜು ಮೊತ್ತ ಸೇರಿದಂತೆ ಅಗತ್ಯ ಮಾಹಿತಿ ಪಡೆದರು.
ಸಾಹಿತ್ಯ, ಸಂಸ್ಕೃತಿಗಳ ತವರೂರು ಧಾರವಾಡದಲ್ಲಿ ಅನೇಕ ವರ್ಷಗಳ ನಂತರ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದನ್ನು ಸ್ಮರಣೀಯಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಆರಂಭಿಸಿದೆ. ಸಮ್ಮೇಳನ ಯಶಸ್ಸಿಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
– ದೀಪಾ ಚೋಳನ್, ಜಿಲ್ಲಾಧಿಕಾರಿ ಧಾರವಾಡ