ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಸಂಬಂಧಿದಂತೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಪರಿಷತ್ತಿನ ನೂತನ ಕಾರ್ಯಾಕಾರಿಣಿ ನಡೆಯಿತು. ಆ್ಯಪ್ ಮೂಲಕ ಚುನಾವಣೆ ನಡೆಸಲು ಮುಂದಾಗಿರುವ ಸಾಹಿತ್ಯ ಪರಿಷತ್ ಅಧ್ಯಕ್ಷರ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.
ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಕಸಾಪದ ಎಲ್ಲಾ ಜಿಲ್ಲಾಧ್ಯಕ್ಷರುಗಳು ಭಾಗವಹಿಸಿದ್ದರು. ಗುರುವಾರ ಇಡೀ ದಿನ ನಡೆದ ಸಮಾಲೋಚನಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ಕಲಿಕಾ ಮಾನದಂಡ, ಆ್ಯಪ್ ಮೂಲಕ ಪರಿಷತ್ತಿನ ಚುನಾವಣೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾತಿದ್ದಪಡಿ ಸಂಬಂಧ ಕಾನೂನು ತಜ್ಞರ ಶಿಫಾರಸ್ಸುಗಳ ಬಗ್ಗೆ ಚರ್ಚೆ ನಡೆಸಿದರು. ಈ ಹಿಂದೆ ಸಮಾಲೋಚನಾ ಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರು ನೀಡಿದ ಸಲಹೆಗಳ ಬಗ್ಗೆ ಕೂಡ ಸಮಾಲೋಚನೆ ನಡೆಯಿತು.
ಇದೇ ವೇಳೆ ಆ್ಯಪ್ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಸುವ ಬಗ್ಗೆ ಕಾರ್ಯಾಕಾರಿಣಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹಲವು ಜಿಲ್ಲಾಧ್ಯಕ್ಷರು ಆ್ಯಪ್ ಬಳಕೆಯಿಂದ ಹಲವು ಸಮಸ್ಯೆಗಳು ಎದುರಾಗಬಹುದು ಆ ಹಿನ್ನೆಲೆಯಲ್ಲಿ ಆ್ಯಪ್ ಮೂಲಕ ಚುನಾವಣೆ ನಡೆಸುವ ನಿರ್ಧಾರಿಂದ ಹಿಂದೆ ಸರಿಯುವುದು ಒಳ್ಳೆಯದು ಎಂಬ ಸಲಹೆ ನೀಡಿದರು.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾಲೂಕು ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ತಾಲೂಕು ಘಟಕಗಳ ಅಧ್ಯಕ್ಷರ ನೇಮಕಲಾಗಿಲ್ಲ. ಈ ವಿಚಾರದಲ್ಲಿ ರಾಜ್ಯಾಧ್ಯಕ್ಷರ ಹಸ್ತಕ್ಷೇಪ ಒಳ್ಳೆಯದಲ್ಲ ಈ ಹಿಂದಿನ ಅಧ್ಯಕ್ಷರುಗಳು ಯಾವ ರೀತಿಯಲ್ಲಿ ನಡೆದು ಕೊಂಡಿದ್ದಾರೋ ಅದೇ ರೀತಿಯ ನಡೆದು ಕೊಳ್ಳಬೇಕು ಎಂದು ಕೆಲವು ಜಿಲ್ಲಾಧ್ಯಕ್ಷರುಗಳು ಸಭೆಯಲ್ಲಿ ಮನವಿ ಮಾಡಿದರು.
ಬೈಲಾ ಬದಲಾವಣೆಗೆ ಆತುರ ಏಕೆ?: ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಯ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂಬ ಮಾತು ಕೂಡ ಕಾರ್ಯಾಕಾರಿಣಿಯಲ್ಲಿ ವ್ಯಕ್ತವಾಯಿತು. ಈ ಹಿಂದೆ ಮನು ಬಳಿಗಾರ್ ಅವರ ನೇತೃತ್ವದಲ್ಲಿ ಕೆಲವು ತಿದ್ದುಪಡಿಗಳು ಆಗಿವೆ. ನಾವು ಇನ್ನೂ ಪರಿಷತ್ತಿಗೆ ಅಡಿಯಿಟ್ಟು ಕೆಲವೇ ಕೆಲವು ತಿಂಗಳುಗಳು ಕಳೆದಿವೆ.ಇಂತಹ ಸಮಯದಲ್ಲಿ ಆತುರದಿಂದ ಬೈಲಾ ತಿದ್ದುಪಡಿಗೆ ಕೈ ಹಾಕುವುದು ಒಳ್ಳೆಯದಲ್ಲ ಎಂಬ ಮಾತುಗಳು ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.
ಯಾವುದೇ ಹೊಸ ಯೋಜನೆಗಳನ್ನು ರೂಪಿಸದೆ. ಪರಿಷತ್ತಿನ ಅಭಿವೃದ್ದಿ ಬಗ್ಗೆ ಯೋಜನೆ ಜಾರಿಗೊಳಿಸದೆ ಕೇವಲ ಬೈಲಾ ತಿದ್ದಪಡಿಗೆ ಮುಂದಾಗಿರುವ ಕಸಾಪ ಕಾರ್ಯ ವೈಖರಿ ಬಗ್ಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಚರ್ಚೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಬದಿಗಿಟ್ಟು ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಆಲೋಚಿಸೋಣ ಎಂಬ ಸಲಹೆಯನ್ನು ಹಲವು ಜಿಲ್ಲಾಧ್ಯಕ್ಷರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲ ಇತ್ತೀಚೆಗೆ ಅಗಲಿದೆ ಸಾಹಿತಿಗಳಿಗೆ ಮತ್ತು ಕನ್ನಡಪರ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.