ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇತರ ಚುನಾವಣೆಗಿಂತ ಭಿನ್ನವಾಗಿಲ್ಲ. ಈ ವರ್ಷ ಸುಮಾರು 3,10,520 ಮಂದಿ ಮತದಾನ ಮಾಡಲು ಅರ್ಹರಿದ್ದು, ಆ ಹಿನ್ನೆಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ಖರ್ಚು-ವೆಚ್ಚಕ್ಕಾಗಿ ಸುಮಾರು 20 ರಿಂದ 25 ಲಕ್ಷ ರೂ. ಮೀಸಲಿಡಬೇಕಾಗಿದೆ.
2016ರಲ್ಲಿ ಸುಮಾರು 1,89,355 ಮಂದಿ ಅರ್ಹ ಮತದಾರರಿದ್ದರು. ಈಗ ಆ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಕೇಂದ್ರ ಚುನಾವಣಾಧಿಕಾರಿಗಳು ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಈ ವರ್ಷ 3,10,520 ಮಂದಿ ಮತದಾನ ಮಾಡಲು ಅರ್ಹರಿದ್ದಾರೆ. 2016ರ ಅಂಕಿ-ಅಂಶಕ್ಕೆ ಹೋಲಿಕೆ ಮಾಡಿದಾಗ ಮತದಾರರ ಸಂಖ್ಯೆಯಲ್ಲಿ ಅರ್ಧದಷ್ಟು ಹೆಚ್ಚಳವಾಗಿದೆ.
ಸುಮಾರು 1,21,165 ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಕೇಂದ್ರ ಸಾಹಿತ್ಯ ಪರಿಷತ್ತಿನ ಸ್ಪರ್ಧಾಳುಗಳು ಪರಿಷತ್ತಿನ ಮತದಾರರಿಗೆ ಪತ್ರ ಬರೆಯಲು ಸಲುವಾಗಿಯೇ ಸುಮಾರು 15 ರಿಂದ 18 ಲಕ್ಷ ರೂ. ವೆಚ್ಚ ಮಾಡಬೇಕಾಗಿದೆ. ಸೌಜನ್ಯಕ್ಕಾದರೂ ಪತ್ರ ಅನಿವಾರ್ಯ: ಹಲವು ವರ್ಷಗಳಿಂದ ನಾನು ಕಸಾಪದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಹೀಗಾಗಿ ಮತದಾರರಿಗೆ ಪರಿಚಿತನಾಗಿದ್ದೇನೆ. ಆದರೂ ಸೌಜನ್ಯಕ್ಕೆ ಮತದಾರರಿಗೆ ಪತ್ರ ಬರೆಯಲೇ ಬೇಕು. ಜಿಲ್ಲಾವಾರು, ತಾಲೂಕುವಾರು ಪ್ರವಾಸ ಮಾಡಬೇಕು. ಪರಿಷತ್ತಿನ ಮತದಾರ ಸಂಖ್ಯೆ 3 ಲಕ್ಷಕ್ಕೂ ಅಧಿಕವಿದ್ದು, ಒಂದು ಪತ್ರ ಬರೆಯಲು ಕನಿಷ್ಠ 5 ರೂ. ಆದರೂ ಬೇಕು ಎಂದು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶೇಖರಗೌಡ ಮಾಲಿಪಾಟೀಲ ಹೇಳುತ್ತಾರೆ.
ಕಸಾಪ ಚುನಾವಣೆ ಅಂದರೆ ಜಿಲ್ಲಾವಾರು, ತಾಲೂಕುವಾರು ಅಲೆದಾಟ ನಡೆಸಿ ಮತದಾರರನ್ನು ಸಂಪರ್ಕಿಸಲೇಬೇಕು. ಕೇವಲ ಅಂಚೆ ಖರ್ಚು- ವೆಚ್ಚಕ್ಕಾಗಿಯೇ ಸುಮಾರು 15 ರಿಂದ 18 ಲಕ್ಷ ರೂ.ಬೇಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಖರ್ಚಿನ ಪ್ರಮಾಣ ಹೆಚ್ಚಳವಾಗುತ್ತಲೇ ಹೋಗುತ್ತದೆ ಎಂದು ಅಧ್ಯಕ್ಷ ಸ್ಥಾನದ ಮತ್ತೂಬ್ಬ ಪ್ರತಿಸ್ಪರ್ಧಿ ಸಿ.ಕೆ.ರಾಮೇಗೌಡ ಹೇಳುತ್ತಾರೆ. ಸಂಖ್ಯೆ ಎಷ್ಟೇ ದೊಡ್ಡದಿದ್ದರೂ, ಕಡಿಮೆ ಖರ್ಚಿನಲ್ಲಿ ಮತದಾರರನ್ನ ತಲುಪಬೇಕಾಗಿದೆ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್‌ಅನ್ನು ಹೆಚ್ಚು ಆಶ್ರಯಿಸಿದ್ದೇನೆ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಮತದಾರರ ಪರಿಷ್ಕರಣೆ ಆಗಬೇಕು: ಸ್ಪರ್ಧಾಳುಗಳಚುನಾವಣಾ ಖರ್ಚು ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕಸಾಪ ಆಲೋಚನೆ ಮಾಡಬೇಕು. ಜತೆಗೆ ಈಗಾಗಲೇ ಮರಣಹೊಂದಿದವರೂ ಮತದಾರರ ಪಟ್ಟಿಯಲ್ಲಿದ್ದಾರೆ. ಅಂತವರನ್ನು ಪಟ್ಟಿಯಿಂದ ತೆಗೆದು ಹಾಕಲುವ ಕೆಲಸ ಆಗಬೇಕಾಗಿದೆ. ಪ್ರತಿ ವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕು ಎಂದು ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಾಳು ಸಂಗಮೇಶ ಬಾದವಾಡಗಿ ಹೇಳಿದ್ದಾರೆ. ಹಾಗೆಯೇ ಪರಿಷತ್ತಿನ ಪತ್ರಿಕೆಗಳಲ್ಲಿ ಚುನಾವಣಾ ಸ್ಪರ್ಧಾಳುಗಳ ಬಗ್ಗೆ ಪರಿಚಯ ಮಾಡಿಕೊಡುವ ನಿಟ್ಟಿನ ಕಾರ್ಯ ನಡೆಯಬೇಕಾಗಿದೆ ಎಂದಿದ್ದಾರೆ.
ಸ್ಪರ್ಧಾಳುಗಳು ಯಾರು? :
ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲಿಪಾಟೀಲ, ಮಹೇಶ್ ಜೋಶಿ, ಸಿ.ಕೆ. ರಾಮೇಗೌಡ, ವ.ಚ.ಚನ್ನೇಗೌಡ, ಮಾಯಣ್ಣ ಹಾಗೂ ಸಂಗೇಮೇಶ ಬಾದವಾಡಗಿ ಅವರು ಕಣಕ್ಕಳಿಯಲಿದ್ದಾರೆ. ಇದರಲ್ಲಿ ಮಹೇಶ್ ಜೋಶಿ ಅವರನ್ನು ಹೊರತು ಪಡಿಸಿದರೆ ಉಳಿದೆಲ್ಲ ಸ್ಪರ್ಧಾಳುಗಳು ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸಿದವರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರ ಸಂಖ್ಯೆ ದೊಡ್ಡದಿದೆ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಮತದಾರರನ್ನು ತಲುಪುವ ಕೆಲಸಮಾಡುತ್ತಿದ್ದೇನೆ. ಕಡಿಮೆ ಖರ್ಚಿನಲ್ಲಿ ಮತದಾರರ ಮನ ಮನೆ ತಲುಪುತ್ತೇನೆ.
–ವ.ಚ.ಚನ್ನೇಗೌಡ, ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
–ದೇವೇಶ ಸೂರಗುಪ್ಪ