Advertisement

Panaji: ಕನ್ನಡಿಗರು ಸಮಸ್ಯೆಯಲ್ಲಿದ್ದರೆ ಕೂಡಲೇ ಸಹಾಯಹಸ್ತ ನೀಡಬೇಕು

12:17 PM Oct 23, 2023 | Team Udayavani |

ಪಣಜಿ: ಕರ್ನಾಟಕ ರಕ್ಷಣಾ ವೇದಿಕೆ ಗೋವಾದಲ್ಲಿ ಸ್ಥಾಪನೆಯಾಗಿರುವುದು ಗೋವಾದಲ್ಲಿರುವ ಕನ್ನಡಿಗರನ್ನು ರಕ್ಷಣೆ ಮಾಡಲು ಎಂದು ಗೋವಾದ ಹೊಟೇಲ್ ಉದ್ಯಮಿ, ಗೋವಾ ಬಿಜೆಪಿ ಕರ್ನಾಟಕ ಸೆಲ್‍ನ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ಕರೆ ನೀಡಿದರು.

Advertisement

ಗೋವಾದಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರ ಪೈಕಿ ಹೆಚ್ಚಿನ ಕನ್ನಡಿಗರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವವರು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿಯೂ ರಕ್ಷಣಾ ವೇದಿಕೆ ಕೆಲಸ ನಿರ್ವಹಿಸಬೇಕು. ಒಗ್ಗಟ್ಟಿನ ಮಂತ್ರವನ್ನು ನಾವೆಲ್ಲರೂ ಜಪಿಸಬೇಕು. ಹಗಲು ರಾತ್ರಿ ಯಾವುದೇ ಸಂದರ್ಭವಾಗಿದ್ದರೂ ಕೂಡ ಕನ್ನಡಿಗರು ಸಮಸ್ಯೆಯಲ್ಲಿದ್ದರೆ ನಾವು ಕೂಡಲೇ ಧಾವಿಸಿ ಸಹಾಯಹಸ್ತ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಕ್ಷಣಾ ವೇದಿಕೆ ಗೋವಾ ರಾಜ್ಯ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವಾಸ್ಕೊ ಜುವಾರಿನಗರದ ಸೈಕ್ಲೋನ್ ಹಾಲ್‍ನಲ್ಲಿ ಆಯೋಜಿಸಿದ್ದ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮಾವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜುವಾರಿನಗರ ಘಟಕದ ಉಧ್ಘಾಟನೆ ನೆರವೇರಿಸಲಾಯಿತು.

ಕನ್ನಡಿಗರು ಎಂಬ ಮಾತು ಬಂದಾಗ ಜಾತಿ ವಿಷಯ ಬರಲೇಬಾರದು. ನಾವು ಹೊರ ರಾಜ್ಯದಲ್ಲಿರುವವರು. ಗೋವಾದಲ್ಲಿ ನಾವು ಒಗ್ಗಟ್ಟಿನ ಮೂಲಕ ನಮ್ಮ ಎಲ್ಲ ಕೆಲಸ ಮಾಡಿಕೊಳ್ಳಲು ಸಾಧ್ಯ. ಗೋವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸೇವೆ ಸಲ್ಲಿಸುವ ಮೂಲಕ ಉತ್ತಮ ಹೆಸರು ಮಾಡಲಿ ಎಂದು ಮುರಳಿ ಮೋಹನ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾತನಾಡಿ, ಗೋವಾದಲ್ಲಿ ಸುಮಾರು 4 ಲಕ್ಷ ಜನ ಕನ್ನಡಿಗರಿದ್ದಾರೆ. ಗೋವಾದ ವಿವಿದೆಡೆ ನೆಲೆಸಿದ್ದರೂ ನಾವೆಲ್ಲರೂ ಒಗ್ಗಟ್ಟಾಗಿರುವುದು ಮುಖ್ಯ. ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ಇದು ಕನ್ನಡಿಗರ ವೇದಿಕೆ. ಗೋವಾದಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸಲು ನಾವೆಲ್ಲರೂ ಒಗ್ಗಟ್ಟಾಗಿರುವುದು ಮುಖ್ಯ. ಗೋವಾದ ಕನ್ನಡಿಗರ ಸಮಸ್ಯೆಯನ್ನು ರಕ್ಷಣಾ ವೇದಿಕೆ ಹೋರಾಟ ನಡೆಸಿ ಸಮಸ್ಯೆ ಬಗೆಹರಿಸಲಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಮಾಪ್ಸಾ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಗೋವಾ ಬಿಜೆಪಿ ಕರ್ನಾಟಕ ಸೆಲ್ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಪಡದಯ್ಯ ಹಿರೇಮಠ, ವಾಸ್ಕೊ ಕನ್ನಡ ಸಂಘದ ಅಧ್ಯಕ್ಷ ಬಿ.ಆರ್.ಜಗ್ಗಲ್, ಲಂಬಾಣಿ ಸಮಾಜದ ಅಧ್ಯಕ್ಷ ಸುರೇಶ್ ರಜಪೂತ, ಕರ್ನಾಟಕ ರಕ್ಷಣಾ ವೇದಿಕೆಯ ಜುವಾರಿನಗರ ಘಟಕದ ಗೌರವ ಅಧ್ಯಕ್ಷ ರುದ್ರಯ್ಯಸ್ವಾಮಿ ಹಿರೇಮಠ, ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಮುಖ್ಯಾಪಕರಾದ ಪಿ.ವಿ. ಪಾಟೀಲ್, ಕರವೇ ಜುವಾರಿ ನಗರ ಘಟಕದ ಅಧ್ಯಕ್ಷ ಬಸವರಾಜ್ ಗೌಡರ್, ಸಾಖಳಿ ಸಿರಗಂಧ ಕನ್ನಡ ಸಂಘದ ಅಧ್ಯಕ್ಷ ಎಸ್.ಎಚ್.ಪಾಟೀಲ್, ಕರವೇ ರಾಜ್ಯ ಘಟಕದ ಕಾರ್ಯದರ್ಶಿ ಶಿವಾನಂದ ಮಸಬಿನಾಳ, ಮಹಾಂತೇಶ ಕಾರಿಗೇರಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಾಲ್ಮೀಕಿ, ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಕಿಂಗ್, ಮಹಿಳಾ ಸಂಘಟನೆ ಮುಖಂಡ ಪಾರ್ವತಿ ಛಲವಾದಿ, ಸೇರಿದಂತೆ ಕರವೇ ಗೋವಾ ರಾಜ್ಯ ಘಟಕ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಕನ್ನಡಿಗರು ಉಪಸ್ಥಿತರಿದ್ದರು.

ಪರಶುರಾಮ ಪೂಜಾರಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶ್ರೀ ಬಸವೇಶ್ವರ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ನಾಡಗೀತೆ ಮತ್ತು ಸ್ವಾಗತ ಗೀತೆ ಹಾಡಿದರು. ವೀಣಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ರುದ್ರಯ್ಯಸ್ವಾಮಿ ಹಿರೇಮಠ ವಂದನಾರ್ಪಣೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next