ಅನಗೊಂಡನಹಳ್ಳಿ: ಕರ್ನಾಟಕ ರಾಜ್ಯ ದೇಶದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಅಗ್ರಸ್ಥಾನ ಹೊಂದಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು ಎಂದುಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ನಗರದ ತಾಲೂಕು ಕಚೇರಿಯಲ್ಲಿ ನಡೆದ 65ನೇ ಕನ್ನಡ ರಾಜ್ಯೋತ್ಸವದಲ್ಲಿ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ಬಾವುಟ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪ್ರಾದೇಶಿಕ ಸೊಗಡು: ನಮ್ಮ ರಾಜ್ಯ ಇಡೀ ದೇಶದಲ್ಲಿ ಹೆಚ್ಚು ಸಂಪನ್ಮೂಲ ಹೊಂದಿದೆ. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಗೆ ದೊರೆತಿದೆ. ಐಟಿ, ಬಿಟಿ ತಂತ್ರಜ್ಞಾನ, ಸಂಪನ್ಮೂಲ ಹಾಗೂ ವಿದ್ಯೆಯಲ್ಲಿಯೂ ಹೆಚ್ಚಿನ ಸಾಧನೆ ಮಾಡಿ ವಿಶ್ವವೇ ನಮ್ಮ ಕರ್ನಾಟಕ ನಾಡಿನತ್ತ ತಿರುಗಿ ನೋಡುವಂತೆ ಬೆಳೆದಿದ್ದು, ಪ್ರಾದೇಶಿಕ ಸೊಗಡನ್ನು ಇನ್ನೂ ಉಳಿಸಿಕೊಂಡು
ಬಂದಿದೆ ಎಂದರು.
ಕೇಂದ್ರದ ನೀತಿಗಳು ಬದಲಾಗಲಿ: ಕೇಂದ್ರದ ನೀತಿಯಿಂದ ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸುಮಾರು 33 ಸಾವಿರ ಕೋಟಿ ರೂ. ಸಾಲ ಮಾಡುವ ಪರಿಸ್ಥಿತಿ ಬಂದಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ನೀಡುತ್ತೇವೆ. ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರವೇ ನಿಯಮಾವಳಿ ರೂಪಿಸಿ ಅದರಂತೆ ಆಡಳಿತ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ನಮ್ಮಲ್ಲಿರುವ ಸಂಪನ್ಮೂಲ ವಿಭಿನ್ನತೆ ನಮ್ಮ ಸೊಗಡನ್ನು ನಾವೇ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಅಧ್ಯಕ್ಷ ಜಯದೇವಯ್ಯ, ತಹಶೀಲ್ದಾರ್ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ನಗರಸಭೆ ಸದಸ್ಯರಾದ ಕೇಶವ್ ಮೂರ್ತಿ, ಗೌತಮ್, ರಾಕೇಶ್, ಮುಖಂಡರಾದ ವೆಂಕಟೇಶ್, ರಾಜಶೇಖರ್ ಮತ್ತಿತರರಿದ್ದರು.
ಗೈರಾದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ : ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸಂಬಳ ನೀಡುತ್ತೆ. ಜೀವನ ನೀಡಿ ಅವರ ಕುಟುಂಬಗಳನ್ನು ಪೋಷಣೆ ಮಾಡಿ ಎಲ್ಲಾ ಸೌಲಭ್ಯ ನೀಡಿದರೂ ರಾಜ್ಯದ ಹೆಮ್ಮೆಯ ಪ್ರತೀಕ ಕನ್ನಡ ರಾಜ್ಯೋತ್ಸವಕ್ಕೆ ಬಾರದೆ ಭಾನುವಾರದ ರಜೆಯನ್ನು ಮೋಜಿನಿಂದ ಕಳೆಯಲು ಮನೆಯಲ್ಲಿರುವ ನೀವುಗಳು ಮನುಷ್ಯರಾ?, ತಹಶೀಲ್ದಾರ್ ಅವರು ಆಹ್ವಾನ ಪತ್ರಿಕೆ ನೀಡಿದರೂ ಅವರ ಮಾತಿಗೂ ಗೌರವ ನೀಡದ ಅಧಿಕಾರಿಗಳು ನೀವು, ಏಕೆ ಸರ್ಕಾರದ ಸಂಬಳ ಪಡಿತೀರಾ. ಕಾರ್ಯಕ್ರಮಕ್ಕೆ ಯಾವ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆಯೋ ಅವರಿಗೆ ಕೂಡಲೇ ನೋಟಿಸ್ ನೀಡಿ. ಇದೇ ವಾರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಗೈರಾದ ಅಧಿಕಾರಿಗಳಿಂದ ಲಿಖೀತ ಹೇಳಿಕೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.