ಯಾದಗಿರಿ: ಆದ್ಯ ವಚನಕಾರ ದೇವರ ದಾಸಿಮಯ್ಯ, ಸುರಪುರದ ಆನಂದ ದಾಸರು, ಕೆಂಭಾವಿ ಭೀಮೇಶ ದಾಸರು, ಚಂಡ್ರಿಕೆ ರಾಘವೇಂದ್ರ ದಾಸರು ಸೇರಿದಂತೆ ಹಲವಾರು ದಾಸರು ಜನ್ಮ ತಳೆದ ಪುಣ್ಯಭೂಮಿ ಕನ್ನಡ ನುಡಿ, ಸಾಹಿತ್ಯ ಹಾಗೂ ಇತಿಹಾಸಕ್ಕೆ ನೀಡುವ ಕೊಡುಗೆ ಅಮೋಘವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾವೈಕ್ಯತಾ ಸಮಿತಿ, ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯ ಹಿರಿಯ ಸಾಹಿತಿ, ಸಂಶೋಧಕ, ಆದರ್ಶ ಶಿಕ್ಷಕ ದೇವೇಂದ್ರಪ್ಪ ನಾಭಿರಾಜ್ ಅಕ್ಕಿ ಸೇವೆ ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಗೆ ಸಂದ ಹಿರಿಮೆ ಎಂದು ಹೇಳಿದರು. ಕರ್ನಾಟಕ ರಾಜ್ಯವು ಏಕೀಕರಣವಾಗಿ 64 ವರ್ಷಗಳು ಪೂರ್ಣಗೊಂಡಿರುವ ಶುಭಸಂದರ್ಭ ಇದಾಗಿದೆ. ಸಮಸ್ತ ನಾಡಿನಾದ್ಯಂತ, ಜಿಲ್ಲೆಯಾದ್ಯಂತ ಸುಖಶಾಂತಿ, ನೆಮ್ಮದಿ ನೆಲೆಸುವಂತಾಗಲಿ ಎಂದು ಪ್ರಾರ್ಥಿಸಿದರು.
ದೇಶಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಕನ್ನಡದ ಜಾನಪದ ಕಲೆಯೂ ಶ್ರೀಮಂತವಾಗಿದೆ. ಗ್ರಾಮೀಣ ಭಾಗದ ಮುಗ್ಧ ಜನಸಮುದಾಯದಿಂದಲೇ ಈ ಜನಪದ ಕಲೆ ಗಟ್ಟಿಯಾಗಿ ಬೇರೂರಿದೆ ಎಂಬುದು ವಿಶೇಷ ಸಂಗತಿಯಾಗಿದೆ ಎಂದು ತಿಳಿಸಿದರು. ಕನ್ನಡ ನುಡಿ, ಸಾಹಿತ್ಯ ಹಾಗೂ ಇತಿಹಾಸಕ್ಕೆ ಯಾದಗಿರಿ ಜಿಲ್ಲೆಯಕೊಡುಗೆ ಅನನ್ಯ. ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುವ ಈ ನಾಡು ಐತಿಹಾಸಿಕವಾಗಿಯೂ ಸುಪ್ರಸಿದ್ಧ ಎಂದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್. ರೊಟ್ನಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್. ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.