Advertisement

ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿ

03:14 PM Nov 02, 2020 | Suhan S |

ತುಮಕೂರು: ಪೋಷಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದರೆ ಕಲಿಕಾ ಸಾಮರ್ಥ್ಯ ವೃದ್ಧಿಯಾಗಲಿದೆ ಹಾಗೂ ಅವರ ಚಿಂತನಾ ಸಾಮರ್ಥ್ಯವು ಹೆಚ್ಚಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Advertisement

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯಾವ ಮಗು ಮಾತೃಭಾಷೆಯನ್ನು ಸಮರ್ಥವಾಗಿ ಬಳಸಬಲ್ಲದೋ ಆ ಮಗು ಇತರೆ ಭಾಷೆಗಳನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಭಾಷೆ ಬಾಂಧವ್ಯ ಹೆಚ್ಚಿಸುತ್ತೆ: ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಮಾತೃಭಾಷಾ ಕಲಿಕೆಗೆ ಹೆಚ್ಚು ಒತ್ತು ನೀಡುವಂತೆ ಹೇಳಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಶಿಕ್ಷಣದ ವಿಷಯವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವು ಮಕ್ಕಳು ಮಾತೃಭಾಷೆ ಯಲ್ಲಿ ಕಲಿಯಬೇಕು ಎಂಬುದಕ್ಕೆ ಪೂರಕವಾಗಿದೆ. ಒಂದು ಭಾಷೆಯ ಬೆಳವಣಿಗೆಯ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಬೆಳವಣಿಗೆಯಾಗುತ್ತದೆ. ಭಾಷೆ ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಮಾತೃಭಾಷೆ ಕನ್ನಡವನ್ನು ಕಲಿಸುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ಜ್ಞಾನವಂತರನ್ನಾಗಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಹೆಮ್ಮೆಯ ವಿಷಯ: ಸರ್ವಜ್ಞರಂತಹ ಅನೇಕ ವಚನಕಾರರು ನಮ್ಮ ನಾಡಿಗೆ ಬೇಕಾದಷ್ಟು ವಚನಗಳನ್ನು ನೀಡಿ ನಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿದ್ದಾರೆ. ಜನಪದ, ಕಲೆ, ಸಾಹಿತ್ಯವನ್ನು ಬಿಂಬಿಸುವಂತಹ ನಾಡು, ಸಂಸ್ಕೃತಿ ನೆಲೆಗಟ್ಟಿನ ಬೀಡು ನಮ್ಮ ನಾಡು. ಅದರಲ್ಲೂ ನಮ್ಮ ತುಮಕೂರು ಜಿಲ್ಲೆ ಕಲೆ, ಶಿಕ್ಷಣಕ್ಕೆ ಹೆಸರುವಾಸಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

Advertisement

ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ.ವಂಸಿಕೃಷ್ಣ, ಜಿಪಂ ಸಿಇಒ ಶುಭಾ ಕಲ್ಯಾಣ್‌, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್‌ ಮೋಹನ್‌ ಕುಮಾರ್‌ ಇದ್ದರು.

ಕವಾಯಿತುನಲ್ಲಿ ಪೊಲೀಸ್‌ ಇಲಾಖೆಯ 7 ತುಕಡಿಗಳು ಭಾಗವಹಿಸಿದ್ದವು ಹಾಗೂ ಎಸ್‌.ಎಸ್‌. ಎಲ್‌.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 3 ಮಂದಿ ವಿದ್ಯಾರ್ಥಿಗಳನ್ನುಸನ್ಮಾನಿಸಲಾಯಿತು.

ಕೋವಿಡ್ ಬಗ್ಗೆ ಉದಾಸೀನ ಬೇಡ : ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೋವಿಡ್ ಬಗ್ಗೆ ಯಾರೂ ಉದಾಸೀನತೆ ತೋರಬೇಡಿ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ

ಜೆ.ಸಿ.ಮಾಧುಸ್ವಾಮಿ ಜಿಲ್ಲೆಯ ಜನತೆಗೆ ಮನವಿ

ಮಾಡಿದರು. ಕಳೆದ ಒಂದು ತಿಂಗಳಿನಿಂದ ಕೋವಿಡ್ ದಿಂದ ಬಳಲಿ ಸಾರ್ವಜನಿಕಾಗಿ ಕಾಣಿಸಿಕೊಂಡು ಇನ್ನೂ ಅದ ರಿಂದ ಹೊರಬರದ ರೀತಿಯಲ್ಲಿಯೇ ಇದ್ದ ಸಚಿವರು ಅದರಿಂದ ಆಗುವ ನೋವನ್ನು ತಮ್ಮ ಮಾತಿನಲ್ಲಿಯೇ ವ್ಯಕ್ತಪಡಿಸಿದರು.

ನೀವು ಉದಾಸೀನತೆ ಮಾಡಿದರೆ ನಮ್ಮ ಬದುಕನ್ನು ಬೇರೆ ದಿಕ್ಕಿನೆಡೆಗೆ ಕೊಂಡಯ್ಯಲಿದೆ. ನಮ್ಮ ಉದಾಸೀನತೆಯಿಂದ ಅಕ್ಕಪಕ್ಕದವರನ್ನು ಸಂಕಷ್ಟಕ್ಕೆ ಸಿಲುಕಿಸುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಕೋವಿಡ್ ನಿಯಂತ್ರಣ ದಲ್ಲಿದೆ. ಆಶಾ- ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೋವಿಡ್ ವಾರಿಯರ್ಸ್ ಗಳು ತಮ್ಮ ಜೀವನದ ಅಂಗುತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೂ ಹಾಗೂ ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಬೇಕು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next