Advertisement

ಶಾಂತಿ, ಸಹನೆಯಿಂದ, ಸಹೋದರರಂತೆ ಬದುಕುವುದು ಅಗತ್ಯ

02:35 PM Nov 02, 2020 | Suhan S |

ಕೋಲಾರ: ಕನ್ನಡಿಗರು ಸಹಬಾಳ್ವೆಯ ಬದುಕು ಕಟ್ಟಿಕೊಂಡು ಬದುಕುತ್ತಿರುವ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ಇಲ್ಲಿ ನಾವೆಲ್ಲರೂ ಶಾಂತಿ, ಸಹನೆ, ತಾಳ್ಮೆ, ಸಹೋದರರಂತೆ ಬದುಕ  ಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ ಹೇಳಿದರು.

Advertisement

ಭಾನುವಾರ ನಗರದ ಗಾಂಧಿವನದಲ್ಲಿ ಜಿಲ್ಲಾಡಳಿತ ಮತ್ತು ಭುವನೇಶ್ವರಿ ಕನ್ನಡ ಸಂಘದ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಡ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕನ್ನಡ ಭಾಷೆ ತನ್ನದೇ ಆದ ಭವ್ಯ ಇತಿಹಾಸ ಹೊಂದಿದೆ, ನಮ್ಮ ಸಾಹಿತ್ಯ ಇತರೆಲ್ಲಾ ಭಾಷೆಗಳ ಸಾಹಿತ್ಯಕ್ಕಿಂತ ಶ್ರೀಮಂತವಾಗಿದೆ ಎಂಬುದಕ್ಕೆ ನಮಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದೇ ಸಾಕ್ಷಿ ಎಂದರು.

ಅಭಿನಂದನೆ: ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವ ದಲಿತ ಸಾಹಿತಿ ಡಾ. ಮುನಿ  ವೆಂಕಟಪ್ಪ ಹಾಗೂ ಸಂಕೀರ್ಣ ಪ್ರಶಸ್ತಿಗೆ ಭಾಜ ನವಾಗಿರುವ ಡಾ.ಕೆ.ವಿ.ರಾಜು ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆಗಳು ಎಂದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆ.ಸಿ.ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬುತ್ತಿದ್ದು, ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಶಾಸಕ ಕೆ. ಶ್ರೀ ನಿವಾಸಗೌಡ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಜಿಪಂ ಸಿಇಒ ಎಂ.ಆರ್‌ ರವಿಕುಮಾರ್‌, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್‌. ತ್ಯಾಗರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಉಪವಿಭಾಗಾಧಿಕಾರಿ ಸೋಮಶೇಖರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ  ನಿರ್ದೇಶಕರಾದ ಜಯರಾಮರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ವಿಜಯ ಕುಮಾರ್‌, ತಹಶೀಲ್ದಾರ್‌ ಶೋಭಿತ, ನಗರಸಭೆಯ ಆಯುಕ್ತ ಶ್ರೀಕಾಂತ್‌ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ನಡೆ-ನುಡಿ, ಭಾಷೆ ಶಾಶ್ವತ: ಸಂಸದ  : ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, 65 ನೇ ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲಾಡಳಿತವು ಕಟ್ಟುನಿಟ್ಟಾಗಿ ಕ್ರಮ ವಹಿಸಿದ ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ತಡೆಗಟ್ಟಲು ಸಾಧ್ಯವಾಯಿತು. ರಾಜಕೀಯ ಶಾಶ್ವತವಲ್ಲ, ನಮ್ಮ ನಡೆ ನುಡಿ ಭಾಷೆ ಶಾಶ್ವತವಾಗಿದೆ. ಕನ್ನಡ ರಾಜ್ಯೋತ್ಸವವು ನಮ್ಮ ಮನಸ್ಸಲ್ಲಿವಿಜೃಂಭಣೆಯಿಂದ ಇರಬೇಕು ಎಂದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಕನ್ನಡ ಅನ್ನ ನೀಡುವ ಭಾಷೆಯಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನವರು ಉತ್ತರ ಭಾರತದವರಾಗಿದ್ದು, ಇವರು ತಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಕನ್ನಡಿಗರು ತಮ್ಮ ಮಾತೃಭಾಷೆ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರು ಯಾವುದೇ ಕೆಲಸವನ್ನು ಮಾಡುವ ಮನೋಧೋರಣೆ ಬೆಳೆಸಿಕೊಳ್ಳಬೇಕು. ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು ಎಂದರು

Advertisement

Udayavani is now on Telegram. Click here to join our channel and stay updated with the latest news.

Next