ಉಡುಪಿ: ಉಡುಪಿಯು ಕರ್ನಾಟಕದ ಮಹತ್ವದ ಸಾಂಸ್ಕೃತಿಕ ಕೇಂದ್ರ. “ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಕವಿವಾಣಿಯಂತೆ ಪ್ರತೀ ಪ್ರಜೆಯೂ ಭಾವೈಕ್ಯ, ನಾಡ ಪ್ರೇಮ, ದೇಶಪ್ರೇಮ ಹೊಂದಿ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕರೆ ನೀಡಿದರು.
ಬೀಡಿನಗುಡ್ಡೆ ಮೈದಾನದಲ್ಲಿ ಗುರುವಾರ ನಡೆದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಸಂದೇಶ ನೀಡಿದ ಅವರು, ಉಡುಪಿಯ ಸಾಂಸ್ಕೃತಿಕ ಮಹತ್ವ ವಿವರಿಸಿದರು.
ಕನ್ನಡ ಕೇವಲ ನುಡಿಯಲ್ಲ, ಅದು ಜೀವನದರ್ಥ ಎಂಬಂತೆ ಇಲ್ಲಿನ ಭಾಷೆ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಗಳೆಲ್ಲವೂ ಕನ್ನಡಮಯ. ಇಲ್ಲಿ ಆಳಿದ ರಾಜ ಮನೆತನಗಳು, ಕನ್ನಡ ನಾಡಿನ ಶಿಲ್ಪ, ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಪರಂಪರೆಗಳನ್ನು ಪೋಷಿಸಿವೆ. ಪ್ರಜಾ ಸರಕಾರಗಳೂ ಈ ಪೋಷಣೆಯನ್ನು ಸಾಮಾಜಿಕ ಜವಾ ಬ್ದಾರಿ ಯಾಗಿ ನಿರ್ವಹಿಸುತ್ತ ಬಂದಿವೆ ಎಂದರು.
ಜಿಲ್ಲೆಯಲ್ಲಿ ಕನ್ನಡ, ತುಳು, ಕೊಂಕಣಿ ಮತ್ತಿತರ ಹಲವು ಭಾಷೆಗಳಿವೆ. ಎಲ್ಲ ಜಾತಿ, ಧರ್ಮದವರು ಸಹಬಾಳ್ವೆ ನಡೆಸುತ್ತಿದ್ದಾರೆ. ಕುಂದಾಪುರದ ಕನ್ನಡ ಜಿಲ್ಲೆಯ ವೈಶಿಷ್ಟ. ಕನಕದಾಸರಿಗೆ ಉಡುಪಿಯಲ್ಲಿ ಆಶ್ರಯ ನೀಡಿದ ಶ್ರೀ ವಾದಿರಾಜ ಸ್ವಾಮಿಗಳು ಹರಿದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕವಿ ಮುದ್ದಣನ ಹೆಸರಿನಲ್ಲಿ ಮುದ್ದಣ ಮಾರ್ಗವಿದೆ. ಜಿಲ್ಲೆಯ ಶಿವರಾಮ ಕಾರಂತ, ಅನಂತಮೂರ್ತಿ ಜ್ಞಾನಪೀಠ ಪುರಸ್ಕೃತರು. ಕವಿ ಗೋಪಾಲಕೃಷ್ಣ ಅಡಿಗರು, ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿ ಅಳವಡಿಸಿದ ಕೆ.ಪಿ. ರಾವ್ ಜಿಲ್ಲೆಯವರೆಂಬುದು ನಮಗೆ ಹೆಮ್ಮೆ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಹೊರರಾಜ್ಯ ಮತ್ತು ವಿದೇಶಗಳ ವಿದ್ಯಾರ್ಥಿಗಳು ಬರುತ್ತಿರುವುದು ಸಂತೋಷದ ವಿಷಯ ಎಂದು ಉಲ್ಲೇಖೀಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಜಿಲ್ಲಾ ಕ. ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
ಸರಳ ರಾಜ್ಯೋತ್ಸವ
ಚುನಾವಣ ನೀತಿ ಸಂಹಿತೆಯ ಕಾರಣ ಜನಪ್ರತಿನಿಧಿಗಳಾರೂ ವೇದಿಕೆ ಏರಲಿಲ್ಲ. ಶಾಸಕರ ಸಹಿತ ಪ್ರಮುಖ ಜನ ಪ್ರತಿನಿಧಿಗಳು ಮರಳು ಹೋರಾಟದಲ್ಲಿ ಪಾಲ್ಗೊಂಡಿರುವುದೂ ಜನ ಪ್ರತಿನಿಧಿಗಳ ಗೈರಿಗೆ ಇನ್ನೊಂದು ಕಾರಣ. ಮರಳು ಹೋರಾಟಗಾರರು ಧರಣಿ ಸ್ಥಳದಲ್ಲಿಯೇ ರಾಜ್ಯೋತ್ಸವ ಆಚರಿಸಿದರು. ಜಿಲ್ಲಾಧಿಕಾರಿ ಹೊಸ ಘೋಷಣೆಗಳಿಲ್ಲದ ರಾಜ್ಯೋತ್ಸವ ಸಂದೇಶ ನೀಡಿದರು.
ಜಿಲ್ಲಾಧಿಕಾರಿಗೆ ಅವಕಾಶ
ನೀತಿ ಸಂಹಿತೆ ಇರುವ ಕಾರಣ ಉಸ್ತುವಾರಿ ಸಚಿವರು ಇದ್ದರೂ ಈ ಬಾರಿ ಜಿಲ್ಲಾಧಿಕಾರಿ ಧ್ವಜಾರೋಹಣ ಮಾಡಿದರು. ಈ ಹಿಂದೆ ಹೇಮಲತಾ ಡಿಸಿ ಅಗಿದ್ದಾಗ ಧ್ವಜಾರೋಹಣ ಮಾಡಿದ್ದರು.