Advertisement

ಅಮೆರಿಕ ಕ್ರಿಕೆಟ್‌ನಲ್ಲಿ ಕನ್ನಡಿಗ ನಾಸ್ತುಶ್‌

02:23 PM Apr 27, 2017 | Karthik A |

ಬೆಂಗಳೂರು: ಮೂಡಿಗೆರೆಯ ದಟ್ಟ ಕಾಡಿನ ಕೆಂಜಿಗೆ ಗುಡ್ಡ! ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ ಈ ಗುಡ್ಡದ ಹೆಸರು ಕಾಣಿಸುತ್ತದೆ. ಆ ಗುಡ್ಡದಲ್ಲಿನ 15 ಮನೆಯಲ್ಲಿ ಹುಡುಕಿದರೆ ಒಂದಿರಲಿ, ಅರ್ಧ ಕ್ರಿಕೆಟ್‌ ತಂಡಕ್ಕೆ ಆಗುವಷ್ಟೂ ಹುಡುಗರು ಸಿಗುವುದಿಲ್ಲ. ಕಾಫಿ ಎಸ್ಟೇಟ್‌ನ ಕೆಲಸಗಾರರನ್ನೆಲ್ಲ ಸೇರಿಸಿದರೆ ಒಂದು ಲಗಾನ್‌ ಟೀಮ್‌ ಮಾಡಬಹುದಷ್ಟೇ. ಸಿಕ್ಸರ್‌ ಹೊಡೆದರೆ ಚೆಂಡು ಹೋಗಿ ಬೀಳುವುದು ಪ್ರಪಾತಕ್ಕೇ (ಮತ್ತೆಚೆಂಡು ಸಿಗುವುದೇ ಕಷ್ಟ). ಇಂತಹ ಬೆಟ್ಟದ ಮೇಲಿನ ಪುಟ್ಟ ಹಳ್ಳಿಯಲ್ಲಿ ಕ್ರಿಕೆಟ್‌ ಕಲಿತ ಹುಡುಗ ನಾಸ್ತುಶ್‌ (26) ಈಗ ಅಮೆರಿಕ ಕ್ರಿಕೆಟ್‌ ತಂಡದ ಆಟಗಾರ!

Advertisement

ಹೌದು. ಅಮೆರಿಕ ಕ್ರಿಕೆಟ್‌ ತಂಡವು ‘ಐಸಿಸಿ ವಿಶ್ವಕಪ್‌- 2019’ರಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಅದಕ್ಕೆ ಅರ್ಹತೆ ಪಡೆಯಲು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುತ್ತಿದೆ. ಸದ್ಯ ಡಿವಿಜನ್‌-3 ವಿಭಾಗದಲ್ಲಿ ಅರ್ಹತಾ ಪಂದ್ಯ ಆಡಲು ಹೊರಟಿದೆ. ಮೇ 23ರಂದು ಉಗಾಂಡಾದಲ್ಲಿ ನಡೆಯುವ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಮೆರಿಕ ತಂಡದಲ್ಲಿ ಕನ್ನಡಿಗ, ಮೂಡಿಗೆರೆಯ ನಾಸ್ತುಶ್‌ ಕೆಂಜಿಗೆ ಆಡಲಿದ್ದಾರೆ. ನಾಸ್ತುಶ್‌ ಅಲ್ಲಿ ಪ್ರಮುಖ ಎಡಗೈ ಸ್ಪಿನ್ನರ್‌!

ಎಂ.ಟೆಕ್‌ ಟು ಕ್ರಿಕೆಟ್‌: ಎಂ.ಟೆಕ್‌ ತನಕ ಕರ್ನಾಟಕದಲ್ಲಿಯೇ ಓದಿದ ನಾಸ್ತುಶ್‌, ರಣಜಿ – ಐಪಿಎಲ್‌ನ ಕನಸು ಕಂಡವರು. ತೀವ್ರ ಪೈಪೋಟಿಯ ಕಾರಣಕ್ಕೆ ಕರ್ನಾಟಕದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಎಂ.ಟೆಕ್‌ ನಂತರವೂ ಆರೇಳು ತಿಂಗಳು ಕ್ರಿಕೆಟ್‌ ಗುಂಗಿನಲ್ಲೇ ಕಳೆದು, ಕೊನೆಗೆ ಕೆಲಸಕ್ಕಾಗಿ ಅಮೆರಿಕದತ್ತ ದೃಷ್ಟಿ ನೆಟ್ಟರು.

‘ಮಗನೆ, ಬ್ಯಾಟ್‌ ತಗೊಂಡು ಹೋಗೋ, ಅಲ್ಲಿ ಕ್ಲಬ್‌ ಕ್ರಿಕೆಟ್‌ ಇರುತ್ತಲ್ಲ’ ಎಂದು ಅಪ್ಪ- ಅಮ್ಮ ಹೇಳಿದಾಗ, ‘ಇಲ್ಲ, ಇನ್ನು ಕ್ರಿಕೆಟ್‌ ಆಡಲಾರೆ’ ಎಂದ ನಾಸ್ತುಶ್‌, ಸಪ್ಪೆ ಮೋರೆ ಹಾಕಿ ವಿಮಾನ ಏರಿದ್ದರು! ಆದರೆ, ಆತನಿಗೆ ಗೊತ್ತಿಲ್ಲದೆ ಬ್ಯಾಗಿನೊಳಗೆ ಅಪ್ಪ ಚೆಂಡನ್ನಿಟ್ಟಿದ್ದರು! ಕ್ರಿಕೆಟ್‌ ಕನಸು ಅಮೆರಿಕಕ್ಕೂ ಜಿಗಿಯಿತು. ನ್ಯೂಯಾರ್ಕಿಗೆ ಹೋದ ಮೇಲೆ ನಾಸ್ತುಶ್‌ಗೆ ಕ್ರಿಕೆಟ್‌ ನಿದ್ರಿಸಲು ಬಿಡಲಿಲ್ಲ. ಅಲ್ಲಿನ ಕ್ಲಬ್‌ ಪಂದ್ಯಗಳಿಗೆ ಆಡಿ, ಐಸಿಸಿ ಆರಿಸಿದ್ದ 30 ಆಟಗಾರರ ತಂಡದಲ್ಲಿ ಒಬ್ಬರಾಗಿ, ಅವರೀಗ ವಿಶ್ವಕಪ್‌ ಸ್ಕ್ವಾಡ್‌ನ‌ ಪ್ರತಿನಿಧಿ!

ಕಾನಿಟ್ಕರ್‌ ಜಾದೂ: ನಾಸ್ತುಶ್‌ ಕ್ರಿಕೆಟರ್‌ ಆಗಲು ಒಂದು ಲೆಕ್ಕದಲ್ಲಿ ಹೃಷಿಕೇಶ್‌ ಕಾನಿಟ್ಕರ್‌ ಸ್ಫೂರ್ತಿ! 1998ರ ‘ಇಂಡಿಪೆಂಡೆನ್ಸ್‌ ಕಪ್‌’ನ ಅಂತಿಮ ಪಂದ್ಯದಲ್ಲಿ ಭಾರತ – ಪಾಕ್‌ ಸೆಣಸಾಟ ಯಾರಿಗೂ ನೆನಪಿರುತ್ತೆ. ಭಾರತ 48 ಓವರ್‌ಗಳಿಗೆ 315 ರನ್‌ ಚೇಸ್‌ ಮಾಡಿ ಆ ಕಾಲಕ್ಕೆ ಇತಿಹಾಸ ನಿರ್ಮಿಸಿದ್ದ ಪಂದ್ಯ. ಭಾರತದ ಚೇಸಿಂಗ್‌ ನಡೆಯುವಾಗ ಕೆಂಜಿಗೆ ಗುಡ್ಡದ ಮನೆಯಲ್ಲಿ 4 ವರ್ಷದ ನಾಸ್ತುಶ್‌ ಒಂದೇ ಮನೆ ಹಠ ಮಾಡುತ್ತಿದ್ದ. ಅಷ್ಟರಲ್ಲೇ ಮನೆಗೆ ಅತಿಥಿಗಳು ಬಂದರು. ಹಠ ಮಾಡುತ್ತಿದ್ದ ಮಗನನ್ನು ತಂದೆ ಪ್ರದೀಪ್‌ ಕೆಂಜಿಗೆ ಟಿವಿ ಹಾಕಿ, ಪಂದ್ಯ ನೋಡಲು ಕೂರಿಸಿದ್ದರು. ಅತಿಥಿಗಳಿಗೆ ಇಡೀ ಕಾಫಿ ತೋಟ ಸುತ್ತಾಡಿಸಿ, ವಾಪಸು ಬರುವಾಗ 3 ತಾಸಿನ ಹಿಂದೆ ಟಿವಿಯೆದುರು ಮಗ ಹೇಗೆ ಕುಳಿತಿದ್ದನೋ, ಹಾಗೆಯೇ ಕುಳಿತ್ತಿದ್ದ ದೃಶ್ಯ ಪ್ರದೀಪ್‌ ಪಾಲಿಗೆ ಈಗಲೂ ಅಚ್ಚರಿ. ಯಾವತ್ತೂ ಕ್ರಿಕೆಟ್‌ ನೋಡದಿದ್ದ ಪುಟಾಣಿ ಅಂದು ಸಕ್ಲೇನ್‌ ಮುಷ್ತಾಕ್‌ನ ಚೆಂಡಿಗೆ ಹೃಷಿಕೇಶ್‌ ಕಾನಿಟ್ಕರ್‌ ಬೌಂಡರಿ ಹೊಡೆದು, ಗೆಲ್ಲಿಸುವ ತನಕ ಕಣ್ಣಿಟ್ಟುಕೊಂಡು ನೋಡಿದ್ದ!

Advertisement

ಐವರು ಭಾರತೀಯರು!: ಐಟಿ ಕ್ಷೇತ್ರವಷ್ಟೇ ಅಲ್ಲ, ಕ್ರಿಕೆಟ್‌ ವಿಚಾರದಲ್ಲೂ ಅಮೆರಿಕವು ಭಾರತವನ್ನೇ ನಂಬಿದೆ. ಯುಎಸ್‌ ಕ್ರಿಕೆಟ್‌ ತಂಡದಲ್ಲಿ ಐವರು ಭಾರತೀಯರಿದ್ದಾರೆ! ಗುಜರಾತಿನ ಮೃಣಾಲ್‌ ಪಟೇಲ್‌ ಹಾಗೂ ತ್ರಿಮಿಲ್‌ ಪಟೇಲ್‌, ಹೈದರಾಬಾದಿನ ಇಬ್ರಾಹಿಂ ಖಲೀಲ್‌, ಪಂಜಾಬ್‌ನ ಜೆಸ್ಸಿ ಸಿಂಗ್‌ ಇವರೆಲ್ಲ ರಣಜಿ ಆಡಿದ ಪ್ರತಿಭೆಗಳು. ಇವರೊಟ್ಟಿಗೆ ಪಾಕಿಸ್ತಾನದ ಮೂವರು ಆಟಗಾರರು ಇದ್ದಾರೆ. ಸ್ಟೀವನ್‌ ಟೇಲರ್‌ ಕ್ಯಾಪ್ಟನ್‌. ಎಲ್ಲ ಹೊರಗಿನವರೇ ಹೊರತು, ಮೂಲ ಅಮೆರಿಕನ್ನರು ಕ್ರಿಕೆಟ್‌ ತಂಡದಲ್ಲಿಲ್ಲ!

ಸಚಿನ್‌ಗೂ ಬೌಲಿಂಗ್‌ ಮಾಡಿದ್ದರು: ‘2011ರಲ್ಲಿ ಸಚಿನ್‌ ತೆಂಡುಲ್ಕರ್‌ 9 ಬಾರಿ ಬೌಲ್ಡ್‌ ಆಗಿ, ಫಾರ್ಮ್ ಕಳಕೊಂಡ ಸ್ಥಿತಿಯಲ್ಲಿದ್ದಾಗ ಚಿನ್ನಸ್ವಾಮಿ ಸ್ಟೇಡಿಯಮ್ಮಿಗೆ ನೆಟ್‌ ಅಭ್ಯಾಸಕ್ಕೆ ಬಂದಿದ್ದರು. ಆಗ ನಾನು ಅವರಿಗೆ 2 ಓವರ್‌ ಬೌಲಿಂಗ್‌ ಮಾಡಿದ್ದೆ. ನೆಟ್‌ ಅಭ್ಯಾಸದ ವೇಳೆ ದ್ರಾವಿಡ್‌, ಯುವಿ, ಕರುಣ್‌, ವೃದ್ಧಿಮಾನ್‌, ವಿಕೆಟ್‌ ಕಿತ್ತಿದ್ದೇನೆ. ಎಂದರು. ನಾಸ್ತುಶ್‌, ದ.ಆಫ್ರಿಕದ ಮಾಜಿ ಸ್ಪಿನ್ನರ್‌ ನಿಕ್ಕಿ ಬೋಯೆ ಸಲಹೆಯಲ್ಲಿ ಬೆಳೆಯುತ್ತಿದ್ದಾರೆ.

ಸ್ಕ್ವಾಷ್‌ನಲ್ಲೂ ನಂ.1: ತೇಜಸ್ವಿ ಜೊತೆಗೆ ‘ಪ್ಯಾಪಿಲಾನ್‌’ ಕೃತಿ ಬರೆದ ಪ್ರದೀಪ್‌ ಕೆಂಜಿಗೆ ಅವರು ಅಮೆರಿಕದಲ್ಲಿದ್ದಾಗ ನಾಸ್ತುಶ್‌ ಹುಟ್ಟಿದರು. ಈ ಕಾರಣ ನಾಸ್ತುಶ್‌ಗೆ ಅಲ್ಲಿನ ಪೌರತ್ವ ಸಿಕ್ಕಿದೆ. ನಂತರ ತಂದೆಯೊಟ್ಟಿಗೆ ರಾಜ್ಯಕ್ಕೆ ಬಂದಾಗ ಓದಿನ ಜತೆಗೆ ಸ್ಕ್ವಾಷ್‌, ಕ್ರಿಕೆಟನ್ನು ಅಪ್ಪಿಕೊಂಡರು. ನ್ಯೂಯಾರ್ಕಿಗೆ ಹೋದ ಮೇಲೆ ಅಲ್ಲೂ ನಾಸ್ತುಶ್‌ ಚಾಂಪಿಯನ್‌! ತೇಜಸ್ವಿ ಅವರಿಗೆ ಫಾಸ್ಟ್‌ ಬೌಲರ್‌ ಆಗುವ ಕನಸಿತ್ತು. ಆದರೆ, ಅದು ನನಸಾಗಿರಲಿಲ್ಲ. ಅವರ ದೂರದ ಸಂಬಂಧಿ ಈಗ ಜಾಗತಿಕ ಸ್ಪಿನ್ನರ್‌ ಎನ್ನುವುದು ಕರುನಾಡಿಗೂ ಒಂದು ಹೆಮ್ಮೆ!

ಅಮೆರಿಕ ಕ್ರಿಕೆಟ್‌ ಟೀಂ ಹೇಗಿದೆ?
– ಮೂಲ ಅಮೆರಿಕನ್ನರಾರೂ ತಂಡದಲ್ಲಿಲ್ಲ!

– ಭಾರತದ ಐವರು, ಪಾಕ್‌ನ ಮೂವರು, ಆಫ್ರಿಕಾ – ಕೆರಿಬಿಯನ್‌ ದೇಶದ ಆಟಗಾರರು ತಂಡದಲ್ಲಿದ್ದಾರೆ.

– ಸ್ಟೀವನ್‌ ಟೇಲರ್‌ ಕ್ಯಾಪ್ಟನ್‌. ಶ್ರೀಲಂಕಾದ ಪುಬ್ಬುಡು ದಸ್ಸನಾಯಕೆ ಕೋಚ್‌.

– ಡಿವಿಜನ್‌ 3ಯಲ್ಲಿರುವ ಸಿಂಗಾಪುರ, ಮಲೇಷ್ಯಾ, ಒಮನ್‌, ಕೆನಡಾ, ಉಗಾಂಡಾ ತಂಡಗಳನ್ನು ಮಣಿಸಿದರೆ ಅಮೆರಿಕ ವಿಶ್ವಕಪ್‌ಗೆ ಜಿಗಿಯಲಿದೆ.

– ಕೊಲರಾಡೋ ಸ್ಪ್ರಿಂಗ್ಸ್‌ನ ಒಲಿಂಪಿಕ್‌ ತರಬೇತಿ ಕೇಂದ್ರದಲ್ಲಿ ಕ್ರಿಕೆಟ್‌ ತಂಡಕ್ಕೆ ಕೆಲ ಕಾಲ ತರಬೇತಿ. ವಿಶ್ವದ ಯಾವುದೇ ಹವಾಮಾನವನ್ನು ಮರುಸೃಷ್ಟಿಸಿ ತರಬೇತಿ ಕೊಡುವ ಏಕೈಕ ತಾಣ ಇದು.

– ಯುಸಾಕಾ ಬೋರ್ಡ್‌ನ ಭ್ರಷ್ಟಾಚಾರದ ನಂತರ ಐಸಿಸಿಯೇ (ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಅಮೆರಿಕ ತಂಡದ ಹೊಣೆ ಹೊತ್ತಿದೆ.

ನಮ್ಮ ಕ್ರಿಕೆಟ್‌ ಅಭ್ಯಾಸಕ್ಕೆ ಅಮೆರಿಕ ಉತ್ಕೃಷ್ಟ ಸೌಲಭ್ಯ ಕಲ್ಪಿಸಿದೆ. ಡಿವಿಜನ್‌ 3ಯಲ್ಲಿ ನಮ್ಮ ತಂಡವೇ ಫೇವರಿಟ್‌. ವಿಶ್ವಕಪ್‌ ಆಡುವ ಕನಸನ್ನು ಈಡೇರಿಸಿಕೊಳ್ಳುತ್ತೇವೆ.
– ನಾಸ್ತುಶ್‌, ಅಮೆರಿಕದ ಕ್ರಿಕೆಟಿಗ 

– ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next