ಕುಷ್ಟಗಿ: ಕೋವಿಡ್-19 ಎರಡನೇ ಅಲೆ ಹಿನ್ನೆಲೆ ಹನುಮಸಾಗರದಲ್ಲಿ ಮುಂದೂಡಿಕೆಯಾಗಿದ್ದ 2ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ 4 ಮತ್ತು5 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲಾ ಕಸಾಪ ಹಿಂದಿನ ಅಧ್ಯಕ್ಷ ರಾಜಶೇಖರ ಅಂಗಡಿ ನೇತೃತ್ವದಲ್ಲಿ 2021, ಏಪ್ರಿಲ್ 1 ಹಾಗೂ 2ರಂದು ನಡೆಸಲು ನಿರ್ಧರಿಸಲಾಗಿತ್ತು. ಅಂತೆಯೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಮಾಹಿತಿ ತಂತ್ರಜ್ಞಾನದ ಸಲಹೆಗಾರ ಡಾ. ಉದಯ ಪುರಾಣಿಕ ಅವರನ್ನು ನೇಮಿಸಿತ್ತು. ಆದರೆ ಆ ಸಂದರ್ಭದಲ್ಲಿ ಕೋವಿಡ್ 2ನೇ ಅಲೆ ತೀವ್ರತೆ ಗಂಭೀರವಾಗಿ ಪರಿಗಣಿಸಿದ್ದರಿಂದ ಜಿಲ್ಲಾಡಳಿತ ಈ ಸಮ್ಮೇಳನವನ್ನು ಮುಂದೂಡಿತು.
ನಂತರ 2021ರ ನವೆಂಬರ್ ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ಹೊಸ ಅಧ್ಯಕ್ಷ ಶರಣಗೌಡ ಪಾಟೀಲ ಹೇರೂರು ಅಧ್ಯಕ್ಷರಾದ ಮೇಲೆ ಅರ್ಧಕ್ಕೆ ನಿಂತ ಸಮ್ಮೇಳನ ನಡೆಸಲು ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರಿಂದ ಅನುಮತಿ ಸಿಗಲಿಲ್ಲ.
ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳಿಕ ಹನುಮಸಾಗರ 9ನೇ ಜಿಲ್ಲಾ ಸಮ್ಮೇಳನ ಆಯೋಜಿಸಲು ಇದೀಗ ಸಮ್ಮತಿ ಸಿಕ್ಕಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಸಮ್ಮೇಳನ ಆಯೋಜಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರನ್ನು ಭೇಟಿ ಮಾಡಿದ್ದು, ಅದರಂತೆ ಅವರು ಮಾರ್ಚ್ 4,5 ರಂದು ದಿನಾಂಕ ಸೂಚಿಸಿದ್ದು, ಅದೇ ದಿನಾಂಕ ಆಯೋಜಿಸುವ ಸಾದ್ಯತೆಗಳಿವೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ, ಜಿಲ್ಲಾ ತಾಲೂಕು ಅಧ್ಯಕ್ಷ ಹನುಮಸಾಗರ ಹೋಬಳಿ ಘಟಕ ಅಧ್ಯಕ್ಷರು ಹಾಜರಿದ್ದರು.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹನುಮಸಾಗರ ಹೋಬಳಿ ಕಸಾಪ ಘಟಕದವರು ಫೆ.3ರಂದು ಹನುಮಸಾಗರದಲ್ಲಿ ಸ್ಥಳೀಯ ಗ್ರಾ.ಪಂ. ಸ್ಥಳೀಯರು ಹಾಗೂ ಜಿಲ್ಲಾ ಕಾರ್ಯಕಾರಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಸಮ್ಮೇಳನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಯೋಜಿಸಲು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಹನುಮಸಾಗರಕ್ಕೆ 2ನೇ ಜಿಲ್ಲಾ ಸಮ್ಮೇಳನ ಭಾಗ್ಯ
ಹನುಮಸಾಗರದಲ್ಲಿ ಇದು ಎರಡನೇ ಜಿಲ್ಲಾ ಕಸಾಪ ಸಮ್ಮೇಳನ ಇದಾಗಿದೆ. ಕುಷ್ಟಗಿ ತಾಲೂಕಿನಲ್ಲಿ, ಜಿಲ್ಲಾ ಸಮ್ಮೇಳನ ಆಯೋಜನೆ 3 ನೇ ಬಾರಿ ಎನಿಸಿದೆ.
ಕಳೆದ 2007 ರಲ್ಲಿ ಡಿ.29 ಹಾಗೂ 29 ರಂದು ಡಾ. ಮಹಾಂತೇಶ ಮಲ್ಲನಗೌಡ್ರು ಆಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ನಡೆದಿತ್ತು. 16 ವರ್ಷಗಳ ಬಳಿಕ ಇದೀಗ 9ನೇ ಸಮ್ಮೇಳನದ ಇದೇ ಗ್ರಾಮದಲ್ಲಿ ಆಯೋಜನೆ ಆಗುತ್ತಿದೆ.
ಈ ನಡುವೆಯೂ ಒಂದೇ ಗ್ರಾಮಕ್ಕೆ ಎರಡು ಜಿಲ್ಲಾ ಸಮ್ಮೇಳನ ಆಯೋಜನೆ ಭಾಗ್ಯ ಎನ್ನುವ ವಿಶೇಷತೆ ಇದೆ. ಕೆಲ ಸಾಹಿತಿಗಳು ಒಂದೇ ಊರಲ್ಲಿ ಎರಡು ಬಾರಿ ಸಮ್ಮೇಳನ ಬೇಡ ಬೇರೆ ಊರಲ್ಲಿ ನಡೆಸಿ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
-ಮಂಜುನಾಥ ಮಹಾಲಿಂಗಪುರ ಕುಷ್ಟಗಿ