Advertisement

ಕೀನ್ಯಾ ದೇಶದ ಅಂಗಡಿಯಲ್ಲಿ ಕನ್ನಡ ನಾಮಫ‌ಲಕ!

12:22 AM Nov 01, 2021 | Team Udayavani |

ಕಾರ್ಕಳ: ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಹಾಡಿನ ಆಶಯವನ್ನು ವಿದೇಶದಲ್ಲಿಯೂ ಮೊಳಗುವಂತೆ ಮಾಡುತ್ತಿರುವ ಕಾರ್ಕಳದ ಕನ್ನಡಿಗರೊಬ್ಬರು ಕೀನ್ಯಾ ದೇಶದಲ್ಲಿದ್ದಾರೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.

Advertisement

ಇಲ್ಲೇ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಹಮ್ಮು -ಬಿಮ್ಮು ತೋರುವವರ ಮಧ್ಯೆ ವಿದೇಶಕ್ಕೆ ಕೆಲಸ ನಿಮಿತ್ತ ತೆರಳಿದ ಕಾರ್ಕಳದ ಈ ಯುವಕ ತಾನು ಕೆಲಸ ಮಾಡಿಕೊಂಡಿರುವ ಅಂಗಡಿಗೆ ಕನ್ನಡದ ನಾಮಫ‌ಲಕ ಅಳವಡಿಸಿ, 15 ವರ್ಷಗಳಿಂದ ವಿದೇಶದಲ್ಲಿ ಕನ್ನಡ ಭಾಷಾ ಪ್ರೇಮ ಮೆರೆಯುತ್ತಿದ್ದಾರೆ.

ಕಾರ್ಕಳದ ಜೋಡುಕಟ್ಟೆ ನಿವಾಸಿ ಮಾಧವ ಪ್ರಭು, ರತ್ನಾ ಪೈ ದಂಪತಿಯ ಪುತ್ರ ವಿಷ್ಣುಪ್ರಸಾದ್‌ ಪೈ ಹುಟ್ಟು ಕನ್ನಡಾಭಿಮಾನಿ. ತಂದೆ ತಾಯಿಯ ಕನ್ನಡದ ಪ್ರೀತಿ ಮಕ್ಕಳ ಮೇಲೂ ಅಚ್ಚೊತ್ತಿದೆ. ಮನೆಗೆ ಮೂರು ಕನ್ನಡ ಪತ್ರಿಕೆಗಳನ್ನು ಹೆತ್ತವರು ತರಿಸಿ ಅದನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಅದು ಮಾತೃಭಾಷೆ ಮೇಲೆ ಮಮತೆ ಸೃಷ್ಟಿಸಿದೆ. ಕನ್ನಡ ಚಿತ್ರಗಳು, ಕನ್ನಡ ಸಾಹಿತ್ಯದ ಕುರಿತು ಅಪಾರ ಪ್ರೀತಿಯೇ ವಿದೇಶದ ನೈರೋಬಿಯದಲ್ಲಿ ಕನ್ನಡದ ಕಂಪನ್ನು ಹೊರಸೂಸುವಂತೆ ಮಾಡಿದೆ.

ಕೀನ್ಯಾದ ರಾಜಧಾನಿ ನೈರೋಬಿಯದಲ್ಲಿ ಕಾರ್ಕಳದ ಉದ್ಯಮಿ ಮಂಜುನಾಥ ಪ್ರಭು-ಯೋಗಿಣಿಯವರು “ಫ‌ನ್‌ ಆ್ಯಂಡ್‌ ಶಾಪ್‌’ ಎಂಬ ಹೆಸರಿನಲ್ಲಿ ಸೂಪರ್‌ ಮಾರ್ಕೆಟ್‌ ಆರಂಭಿಸಿದ್ದರು. ಅಲ್ಲಿ ವಿಷ್ಣು ಮ್ಯಾನೇಜರ್‌ ಆಗಿ ಕೆಲ ಸಕ್ಕೆ ಸೇರಿಕೊಂಡರು. ಅಲ್ಲಿ ಅವ ರು ತಮ್ಮ ಅಂಗಡಿಯ ಸೂಪರ್‌ ಸಂಸ್ಥಾಪಕರ ಒಪ್ಪಿಗೆ ಪಡೆದು ಕನ್ನಡದ ನಾಮಫ‌ಲಕ ಅಳವಡಿಸಿದರು.

ಇಂಗ್ಲಿಷ್‌, ಹಿಂದಿ, ಸೊಹೆಲ್‌ ಹಾಗೂ ಇನ್ನಿತರ ಭಾಷೆ ಮಾತನಾಡುವ ನೈರೋಬಿಯಾದ ಮಾರ್ಕೆಟ್‌ನಲ್ಲಿ ಕನ್ನಡ ಬೋರ್ಡ್‌ ರಾರಾಜಿಸಿತು. ಅದ ರಲ್ಲಿ ಜೈ ಕರ್ನಾಟಕ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಎಲ್ಲಾದರೂ ಇರು ಹೇಗಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎನ್ನುವ ಬರಹಗಳು ಅಚ್ಚೊತ್ತಿಲ್ಪಟ್ಟಿದ್ದವು. ಅಂಗಡಿಗೆ ಬಂದವರೆಲ್ಲ ಮೊದಮೊದಲಿಗೆ ಅದ್ಯಾವ ಭಾಷೆ, ಅದೇನು ಬರೆದಿರುವುದು ಎಂದು ಪ್ರಶ್ನಿಸಲು ಆರಂಭಿಸಿದ್ದರೂ ಅನಂತರದಲ್ಲಿ ಅಲ್ಲಿನ ಪ್ರಜೆಗಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡಿ ಒಂದೊಂದೇ ಅಕ್ಷರ ಉಚ್ಚರಿಸುತ್ತ ಕನ್ನಡ ಕಲಿಯಲು ಆರಂಭಿಸಿದರು.

Advertisement

ಇದನ್ನೂ ಓದಿ:ಬಸವನಾಡಿನ ನಡೆದಾಡುವ ವಿಶ್ವವಿದ್ಯಾಲಯ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ

ಮಾರ್ಕೆಟ್‌ ಶಾಪ್‌ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಷ್ಣು ಕನ್ನಡ ಕಲಿಸಿದ್ದಾರೆ. ಅದರಲ್ಲೂ ರಿನ್ಸನ್‌ ಎನ್ನುವ ಕೀನ್ಯಾದ ಪ್ರಜೆಯೋರ್ವ ಕನ್ನಡ ಕಲಿತು ಕನ್ನಡದ ಬೆಳ್ಳಿ ಮೂಡಿತು… ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಾನಂತೆ. ಅಲ್ಲದೆ ಈಗ 10ಕ್ಕೂ ಹೆಚ್ಚು ನೈರೋಬಿಯಾದ ಜನರಿಗೆ ವಿಷ್ಣು ಕನ್ನಡ ಹೇಳಿಕೊಡುತ್ತಿದ್ದಾರೆ. 500ರಷ್ಟು ಮಂದಿ ಕನ್ನಡ ಮಾತನಾಡಲು ಶಕ್ತರಾಗಿದ್ದಾರೆ.

ಕೊರೊನಾದಿಂದ ಸೂಪರ್‌ ಮಾರ್ಕೆಟ್‌ ವ್ಯಾಪಾರ ವಹಿವಾಟು ಮೇಲೆ ಪರಿಣಾಮ ಬೀರಿದ್ದು, ಶೀಘ್ರವೇ ರೆಸ್ಟೋರೆಂಟ್‌ ತೆರೆದುಕೊಳ್ಳಲಿದೆ. ನೂತನವಾಗಿ ತೆರೆಯುವ ರೆಸ್ಟೋರೆಂಟ್‌ನ ಬೋರ್ಡ್‌ ಕೂಡ ಕನ್ನಡದಲ್ಲಿ ಇರಲಿದೆ. ಅಷ್ಟೇ ಅಲ್ಲ. ಮೆನು ಕೂಡ ಕನ್ನಡ ಭಾಷೆಯಲ್ಲಿ ಇರಲಿದೆ.

ಕನ್ನಡ ಹಾಡಿಗೆ ಹೆಜ್ಜೆ
ನೈರೋಬಿಯಾದ ಕನ್ನಡ ಪ್ರೇಮ ಎಷ್ಟಿದೆ ಎಂದರೆ ಕನ್ನಡದ ಧಾರಾವಾಹಿಗಳನ್ನು, ಸಿನೆಮಾಗಳನ್ನು ಯೂಟ್ಯೂಬ್‌ ನಲ್ಲಿ ವೀಕ್ಷಿಸಿ ಅದರ ಅರ್ಥ ತಿಳಿಸುವಂತೆ ವಿಷ್ಣು ಅವರಿಗೆ ಕೇಳುತ್ತಾರಂತೆ. ವಿಷ್ಣು ಕನ್ನಡ ಹಾಡು ಹಾಡುತ್ತಿದ್ದರೆ ಅಲ್ಲಿನ ಮಂದಿ ಅವರ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ. ಅಲ್ಲಿಯೂ ಕನ್ನಡ ಸಂಘ, ಮಂಗಳೂರಿನ ಅಸೋಸಿಯೇಶ‌ನ್‌ ಇದೆ. ಕರ್ನಾಟಕ ರಾಜ್ಯೋತ್ಸವ ಸಹಿತ ವಿಶೇಷ ದಿನಗಳ ಆಚರಣೆಗಳನ್ನು ನಡೆಸಿ, ಸಂಭ್ರಮಿಸುತ್ತಾರೆ.

ನೈರೋಬಿಯಾದಲ್ಲಿ
ಕರಾವಳಿಯ ರುಚಿ 
ನೈರೋಬಿಯದ ಸೂಪರ್‌ ಮಾರ್ಕೆಟ್‌ನಲ್ಲಿ ಗೋಳಿಬಜೆ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಪತ್ರೊಡೆ, ಬನ್ಸ್‌, ಬಜ್ಜಿ ಅಲ್ಲ ದೇ ಹಲಸಿನಕಾಯಿ, ಗುಳ್ಳ, ತೊಂಡೆಕಾಯಿಯ ಪದಾರ್ಥಗಳನ್ನು ಮಂಗಳೂರಿನಿಂದ ತಂದು ಮಾರಲು ಶುರುವಿಟ್ಟುಕೊಂಡರು. ಕರಾವಳಿಯ ತಿಂಡಿ ಮಾಡುವ ಪರಿಯನ್ನು ನೈರೋಬಿಯಾ ಮಂದಿಗೆ ಪರಿಚಯಿಸಿದ್ದಾರೆ.

ಕಲಿಸುವ ಆಸಕ್ತಿ
ಮಾತೃಭಾಷೆ ಕನ್ನಡದ ಕುರಿತು ನೈರೋಬಿಯನ್ನರು ಇರಿಸಿರುವ ಪ್ರೀತಿ ಅತೀವ ಸಂತಸ ತರಿಸುತ್ತಿದೆ. ಅವರಿಗಿರುವ ಕಲಿಯುವ ಹಂಬಲ ಕನ್ನಡ ಕಲಿಸುವ ಆಸಕ್ತಿಯನ್ನು ಹೆಚ್ಚಿಸಿದೆ.
-ವಿಷ್ಣು ಪ್ರಸಾದ್‌ ಪೈ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next