Advertisement

ಅಸ್ಸಾಂ ನಲ್ಲಿ ಮೊಳಗಿದ ಕನ್ನಡದ ಎನ್ಇಪಿ ಗೀತೆ

03:58 PM Nov 21, 2021 | Team Udayavani |

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ನಡೆದ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶದಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ. ಅವರು ಪಾಲ್ಗೊಂಡು, ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಗೊಳಿಸಿದ ಕುರಿತು ವಿಡಿಯೋ ಪ್ರಾತ್ಯಕ್ಷಿಕೆಯನ್ನು ಮಂಡಿಸಿದರು.

Advertisement

ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಆರಂಭದಲ್ಲಿ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗ್ಗೆ ಇನ್ನಿತರ ವಿಷಯಗಳನ್ನು ಅವರು ಹಂಚಿಕೊಂಡರು.

ಈ ಸಮಾವೇಶದಲ್ಲಿ ಈಶಾನ್ಯ ರಾಜ್ಯಗಳ ಶಿಕ್ಷಣ ಸಚಿವರು ಭಾಗವಹಿಸಿದ್ದರು. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ‌ಕಾರಣಕ್ಕೆ ಅಸ್ಸಾಂ ಸರ್ಕಾರವೇ ರಾಜ್ಯದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರನ್ನು ಆಹ್ವಾನಿಸಿತ್ತು.

ಆಯುಕ್ತರು, ಎನ್ ಇ ಪಿ ಕುರಿತು ಇಡೀ ಸಭೆಗೆ ಮಾಹಿತಿ ನೀಡಿದ ನಂತರ ಅದರ ಜನಜಾಗೃತಿಗೆ ಕನ್ನಡದಲ್ಲಿ ರಚಿಸಿರುವ ಗೀತೆಯನ್ನು ಅಲ್ಲಿ ಪ್ರಸಾರ ಮಾಡಲಾಯಿತು. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಪ್ಲೀನ್ ಕೋರ್ ವಿಷಯಗಳು, ಓಪನ್ ಎಲೆಕ್ಟೀವ್ಸ್, ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್, ರಾಷ್ಟ್ರೀಯ ಕೌಶಲ್ಯ ಅರ್ಹತಾ ರೂಪುರೇಷೆಗೆ ಅನ್ವಯಿಸಲಾದ ಪಠ್ಯಕ್ರಮ, ಅಧಿಕೃತ ಆನ್ ಲೈನ್ ಕೋರ್ಸ್ ಕುರಿತು ಅವರು ವಿವರಿಸಿದರು.

Advertisement

ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಖಾಗಿ ಕರ್ನಾಟಕದಲ್ಲಿ ಮಾಡಲಾಗಿರುವ ತಾಂತ್ರಿಕ ನೆರವುಗಳ ಕುರಿತು ಗಮನಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳ ಸ್ಥಾಪನೆ, ಡಿಜಿಟಲ್ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ತಿಳಿಸಿದರು.

ಇದನ್ನೂ ಓದಿ:ಜೋಳದ ಬೆಳೆ ನಷ್ಟ: ಪರಿಹಾರಕ್ಕೆ  ಒತ್ತಾಯ

ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿದ್ದು, ಇದಕ್ಕಾಗಿ ಅಮೆರಿಕದ ಪೆನ್ಸಿಲ್ವೇನಿಯಾದ ಮಾಂಟ್ಗೊಮೇರಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ರಾಜ್ಯದಿಂದ ಹಾಗೂ ಮಾಂಟ್ಗೊಮೇರಿ ವಿ.ವಿ.ಯಿಂದ ಟ್ವಿನ್ನಿಂಗ್ ಡಿಪ್ಲೊಮಾ ಪಡೆಯಲು ಅನುವು ಮಾಡಿಕೊಟ್ಟು, ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಈಗ ಸೈಬರ್ ಸೆಕ್ಯುರಿಟಿ ಮತ್ತು ಟ್ರಾವೆಲ್ & ಟೂರಿಸಂ ಕೋರ್ಸ್ ಗಳಲ್ಲಿ 48 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪ್ರತಿ ವಿದ್ಯಾರ್ಥಿಗೆ ತಗುಲುವ 20 ಲಕ್ಷ ರೂಪಾಯಿಗೂ ಹೆಚ್ಚಿನ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾವೇಶಗಳು ಹಾಗೂ ಕಾರ್ಯಾಗಾರಗಳನ್ನು ನಡೆಸುವ ಜೊತೆಗೆ ಸ್ವತಃ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ಬತ್ಥನಾತಾಯಣ ಅವರು ರಾಜ್ಯದೆಲ್ಲೆಡೆ ಸಂಚರಿಸಿ ಈ ಬಗ್ಗೆ ಆಸಕ್ತಿ ವಹಿಸಿದರು. ಜೊತೆಗೆ ಈ ಬಗ್ಗೆ ಸಮಾಜದ ಎಲ್ಲಾ ಸ್ತರಗಳಲ್ಲಿ ಅರಿವು ಮೂಡಿಸಲು ಪ್ರಚಾರಾಂದೋಲನಗಳನ್ನು ನಡೆಸಲು ಆದ್ಯತೆ ಕೊಡಲಾಯಿತು ಎಂದರು.

ವಿವಿಧ ರಾಜ್ಯಗಳು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಹಿತಾಸಕ್ತಿದಾರರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next