Advertisement

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

12:39 AM Mar 19, 2024 | Team Udayavani |

ಬೆಂಗಳೂರು: ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಜರಗಿಸಬಾರದು ಎಂದು ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿದೆ. ಇದೇ ವೇಳೆ, “ಕನ್ನಡ ನಾಮಫ‌ಲಕ ಹಾಕಲು ನಿಮಗೇನು ತೊಂದರೆ’ ಎಂದೂ ಹೈಕೋರ್ಟ್‌ ಮೆಟ್ಟಿಲೇರಿರುವ ಖಾಸಗಿ ವಾಣಿಜ್ಯ ಸಂಸ್ಥೆಗಳನ್ನು ನ್ಯಾಯಾಲಯ ಪ್ರಶ್ನಿಸಿದೆ.

Advertisement

ರಾಜ್ಯದ ವಾಣಿಜ್ಯ ಸಂಸ್ಥೆಗಳ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯ ಗೊಳಿಸಿ ಜಾರಿಗೊಳಿಸಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಮತ್ತು ಶೇ.60ರಷ್ಟು ಕನ್ನಡ ಬಳಸದ ಸಂಸ್ಥೆಗಳನ್ನು ಮುಚ್ಚುವುದಾಗಿ ತಿಳಿಸಿ 2024ರ ಫೆ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ರಿಟೇಲರ್ಸ್‌ ಅಸೋಸಿಯೇಶನ್‌ ಆಫ್ ಇಂಡಿಯಾ, ಟೈಟಾನ್‌ ಕಂಪೆನಿ ಲಿಮಿಟೆಡ್‌, ಮತ್ತು ಪಿವಿಆರ್‌ ಐನಾಕ್ಸ್‌ ಲಿಮಿಟೆಡ್‌ ಮತ್ತಿತರ ಬೃಹತ್‌ ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿವೆ.

ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸಸದಸ್ಯ ನ್ಯಾಯಪೀಠ, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚದಂತೆ ಮಧ್ಯಾಂತರ ಆದೇಶ ನೀಡಿ ವಿಚಾರಣೆಯನ್ನು ಮಾ.22ಕ್ಕೆ ಮುಂದೂಡಿತು.
ಅಲ್ಲದೆ, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಅನ್ನು ಯಾವ ದಿನದಿಂದ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಗೆಜೆಟ್‌ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆ ಕುರಿತು ಸರಕಾರ ಮಾಹಿತಿ ನೀಡಬೇಕು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಶೇ.60ರಷ್ಟು ಕನ್ನಡ ಬಳಕೆ ಮಾಡಲು ವಾಣಿಜ್ಯ ಸಂಸ್ಥೆಗಳಿಗೆ ಎಷ್ಟು ದಿನ ಕಾಲಾವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಇದೇ ವೇಳೆ ರಾಜ್ಯ ಸರಕಾರಕ್ಕೆ ನ್ಯಾಯಪೀಠ ಸೂಚಿಸಿದೆ.

ಕೋರ್ಟ್‌ ಹೇಳಿದ್ದೇನು?
ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದಾಗಿ ಸರಕಾರ ಹೇಳಿರುವುದು ಕಠಿನ ಕ್ರಮವಾಗಲಿದೆ. ದಂಡ ಹಾಕುವುದು ಅಥವಾ ಪರವಾನಿಗೆ ರದ್ದುಪಡಿಸುವ ಕ್ರಮವಾದರೆ ಸರಿ. ಆದರೆ ಸಂಸ್ಥೆಯನ್ನೇ ಮುಚ್ಚುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಕಾಯ್ದೆ ನಿಯಮಗಳನ್ನು ಸುತ್ತೋಲೆ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನಾಮಫ‌ಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವ (ಸೀಲ್‌ ಡೌನ್‌) ಬಲವಂತದ ಕ್ರಮ ಜರಗಿಸಬಾರದು. ಉಳಿದಂತೆ ಸುತ್ತೋಲೆಯಲ್ಲಿ ಉÇÉೇಖೀಸಿರುವ ಇತರೆ ಅಂಶಗಳು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಮಧ್ಯಾಂತರ ಆದೇಶದಲ್ಲಿ ತಿಳಿಸಿದೆ.

ಸರಕಾರದ ವಾದವೇನು?
ರಾಜ್ಯ ಸರಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದು ಸರಕಾರದ ಉದ್ದೇಶವಾಗಿಲ್ಲ. ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವ ನಿಯಮ ಜಾರಿ ಮಾಡುವುದಷ್ಟೇ ಸರಕಾರದ ಉದ್ದೇಶ. ಕಾಯ್ದೆ ಜಾರಿಗೊಳಿಸಿ 2024ರ ಫೆ.26ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ. ಕಾಯ್ದೆ ಜಾರಿಗೊಳಿಸಿಲ್ಲ ಎಂಬ ಅರ್ಜಿದಾರರ ವಾದ ಸರಿಯಲ್ಲ. ಅರ್ಜಿದಾರ ಕಂಪೆನಿಗಳು ಕಾಯ್ದೆಯನ್ನು ಪ್ರಶ್ನಿಸಿರು ವುದರಿಂದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಈ ವಿಚಾರದಲ್ಲಿ ಚಿಲ್ಲರೆ ವ್ಯಾಪಾರಿಗಳು ಮತ್ತು ವ್ಯಾಪಾರ ಸಂಸ್ಥೆಗಳು ವಿವರಣೆ-ಸ್ಪಷ್ಟನೆ ಕೋರಿದರೂ ಸರಕಾರ ನೀಡಲಿದೆ ಎಂದರು.

Advertisement

ಅರ್ಜಿದಾರರ ವಾದವೇನು?
ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಸೆಕ್ಷನ್‌ 17(6)ಕ್ಕೆ ರಾಜ್ಯ ಸರಕಾರ ತಿದ್ದುಪಡಿ ತಂದು ರಾಜ್ಯದ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸ‌ ಬೇಕು ಎಂದು ಸೂಚಿಸಿದೆ. ಈ ನಿಯಮವು ಸಂವಿಧಾನದ ಪರಿ ಚ್ಛೇದ 345ಕ್ಕೆ ವಿರುದ್ಧವಾಗಿದೆ. ಭಾಷಾ ನೀತಿಯನ್ನು ರೂಪಿಸಿ, ಜಾರಿಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ. ಖಾಸಗಿ ವ್ಯಕ್ತಿಗಳ ಮೇಲೆ ಭಾಷೆಯನ್ನು ಹೇರಲು ಸಂವಿಧಾನದ ಪರಿಚ್ಛೇದ 345 ನಿರ್ಬಂಧಿಸುತ್ತದೆ. ತಿದ್ದುಪಡಿ ಮೊದಲು ಕನ್ನಡ ಬಳಕೆ ಶೇ.50ರಷ್ಟಿತ್ತು, ಬಳಿಕ ಶೇ.60ರಷ್ಟಾಗಿದೆ. ಈ ತಿದ್ದುಪಡಿಯ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕಿದೆ ಎಂದು ಕೋರಿದರು.

ಕನ್ನಡ ಬಳಸಲು ನಿಮಗೇನು ತೊಂದರೆ?
ಶೇ.60ರಷ್ಟು ಕನ್ನಡ ಬಳಕೆಗೆ ನಿಯಮ ರೂಪಿಸಲಾಗಿದೆ. ಕಾಯ್ದೆಯ ನಿಯಮಗಳನ್ನು ನ್ಯಾಯಾಲಯ ಪರಿಶೀಲಿಸಲಿದೆ ಹಾಗೂ ಅದಕ್ಕೆ ಉತ್ತರವನ್ನೂ ನೀಡಲಿದೆ. ಕಾಯ್ದೆ ಬಗೆಗಿನ ಎಲ್ಲ ಅಂಶಗಳಿಗೆ ರಾಜ್ಯ ಸರಕಾರ ಸ್ಪಷ್ಟನೆ ನೀಡಲಿದೆ. ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆದರೆ ನಾಮಫ‌ಲಕದಲ್ಲಿ ಕನ್ನಡವನ್ನು ದೊಡ್ಡದಾಗಿ ಬಳಸಿದರೆ ನಿಮಗೆ ಯಾವ ಸಮಸ್ಯೆಯಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಬಳಕೆಗೆ ಸಮಯಾವಕಾಶ ಬೇಕಾದರೆ ಸರಕಾರ ಒದಗಿಸಲಿದೆ. ಕರ್ನಾಟಕದಲ್ಲಿ ನೀವು ವ್ಯಾಪಾರ ಮಾಡುತ್ತಿದ್ದೀರಿ. ಕನ್ನಡದಲ್ಲಿ ನಾಮಫ‌ಲಕ ಬಳಕೆ ಮಾಡುವುದರಿಂದ ನಿಮಗೆ ಏನು ತೊಂದರೆಯಾಗಲಿದೆ? ಹೆಸರುಗಳನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಹೇಳುತ್ತಿಲ್ಲ. ಸಂಸ್ಥೆಯಲ್ಲಿ ಪ್ರತಿ ಉದ್ಯೋಗಿಯೂ ಕನ್ನಡಿಗನಾಗಿರಬೇಕು ಎಂದು ನಿಯಮ ಹೇರುತ್ತಿಲ್ಲ. ಕನ್ನಡದಲ್ಲಿ ನಾಮಫ‌ಲಕ ಹಾಕುವಂತಷ್ಟೇ ಹೇಳುತ್ತಿದೆ. ಅದರಲ್ಲಿ ತಪ್ಪೇನಿದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next