ಬೆಂಗಳೂರು: ರಾಜ್ಯದ ಎಲ್ಲ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನದಲ್ಲಿ ಇರಲೇಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮೂರು ದಿನಗಳ ಶುದ್ಧ ಕನ್ನಡ ನಾಮಫಲಕ ಅಭಿಯಾನಕ್ಕೆ ಮಂಗಳವಾರ ಕಮರ್ಷಿಯಲ್ ಸ್ಟ್ರೀಟ್ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಮಾಯಾವಾಗುತ್ತಿದೆ. ಕನ್ನಡ ಅಕ್ಷರದ ಬದಲಾಗಿ ಬೇರೆ-ಬೇರೆ ಭಾಷೆಯ ಅಕ್ಷರಗಳು ದೊಡ್ಡದಾಗಿ ಕಾಣಿಸುತ್ತಿವೆ.ಇದನ್ನು ಯಾವುದೇ ಕಾರಣಕ್ಕೂ ಪ್ರಾಧಿಕಾರ ಸಹಿಸುವುದಿಲ್ಲ. ರಾಜ್ಯದ ಎಲ್ಲಾ ಅಂಗಡಿ-ಮುಂಗಟ್ಟಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೆ ಇರಲೇಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ:ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಸಾರ್ವಜನಿಕ ಅಂಗಡಿ ಮುಂಗಟ್ಟುಗಳು ಶುದ್ಧ ಕನ್ನಡವನ್ನು ನಾಮಫಲಕದಲ್ಲಿ ಬಳಕೆ ಮಾಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ರಾಜ್ಯಾದ್ಯಂತ ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಚೇರಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡ ನಾಮಫಲಕ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಮನವರಿಕೆ ಮಾಡಲಾಗುವುದು ಎಂದರು.
ಕೆಲವು ಕಡೆಗಳಲ್ಲಿ ಕನ್ನಡ ನಾಮಫಲಕ ಕಡೆಗಣೆ ಮಾಡಿರುವುದು ಹಾಗೂ ಚಿಕ್ಕದಾಗಿ ಹಾಕಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ ಕನ್ನಡ ಹಕ್ಕೊತ್ತಾಯದ ಮನವಿ ಪತ್ರವನ್ನು ಮಾಲೀಕರಿಗೆ ನೀಡಲಾಗುವುದು. ಈ ನೆಲದ ಸವಲತ್ತುಗಳನ್ನು ಬಳಸಿಕೊಂಡು ವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳ ಮಾಲೀಕರಿಗೆ ಸರ್ಕಾರದ ಭಾಷಾನೀತಿಯನ್ನು ಪಾಲಿಸುವಂತೆ ಸೂಚಿಸಲಾಗುವುದು ತಿಳಿಸಿದರು.
ಜಾಗೃತಿ ಅಭಿಯಾನದಲ್ಲಿ ಕನ್ನಡ ಜಾಗೃತಿ ಪಡೆಯ ಸದಸ್ಯರಾದ ಮಮತಾ ಅಶೋಕ್, ಗಿರೀಶ್ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಜಾಗೃತಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕನ್ನಡ ಕಾಯಕ ಪಡೆಯ ಸದಸ್ಯರು, ಕನ್ನಡಪರ ಚಿಂತಕರು ಇದ್ದರು.