ನೋಡ ನೋಡುತ್ತಲೇ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಈ ಎಂಟು ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 150 ಸಿನಿಮಾಗಳು ಬಿಡುಗಡೆಯಾಗಿವೆ. ಇಂದು ತೆರೆಕಾಣುತ್ತಿರುವ 5 ಸಿನಿಮಾಗಳನ್ನು ಸೇರಿಸಿದರೆ ಇಲ್ಲಿವರೆಗೆ 152 ಸಿನಿಮಾ ಬಿಡುಗಡೆಯಾಗಿವೆ. ಇದು ಸಣ್ಣ ಸಂಖ್ಯೆಯೇನಲ್ಲ. ಪ್ರತಿ ವಾರ ಹೊಸ ಕನಸುಗಳೊಂದಿಗೆ ಸಿನಿಮಾ ರಿಲೀಸ್ ಆಗುತ್ತಲೇ ಬಂದಿವೆ. ಪರಭಾಷಾ ಸಿನಿಮಾಗಳ ಸವಾಲು, ಚಿತ್ರಮಂದಿರ ಸಮಸ್ಯೆ, ಮಲ್ಟಿಪ್ಲೆಕ್ಸ್‌ಗಳ ಕಡೆಗಣ್ಣಿನ ನೋಟ, ಪ್ರೇಕ್ಷಕರ ಅಭಾವ, ಮಳೆ, ಗುಡುಗು, ಚಳಿ… ಹೀಗೆ ಎಲ್ಲವನ್ನು ಈ 150 ಪ್ಲಸ್ ಸಿನಿಮಾಗಳು ಸಹಿಸಿಕೊಂಡಿವೆ. ಇವೆಲ್ಲದರ ಮಧ್ಯೆ ಸಿನಿಮಾ ಗೆಲ್ಲಬೇಕು ಎಂಬ ಪ್ರಯತ್ನ ಮುಂದುವರೆದಿದೆ.
ಸಿನಿಮಾ ರಂಗವೇ ಹಾಗೆ. ಇಲ್ಲಿ ಅನಿಶ್ಚಿತತೆಯೇ ಹೆಚ್ಚು. ಅಂದುಕೊಂಡದ್ದು ಆಗುವುದಕ್ಕಿಂತ ಅಂದುಕೊಳ್ಳದೇ ಇರುವುದು ಆಗುವುದೇ ಹೆಚ್ಚು. ಅದೇ ಕಾರಣದಿಂದ ಕೆಲವು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಅಥವಾ ನಿರ್ಮಾಪಕರಿಗೆ ಲಾಭ ತಂದುಕೊಡಬಹುದು ಎಂದುಕೊಂಡ ಸಿನಿಮಾಗಳು ಹೇಳಹೆಸರಿಲ್ಲದಂತೆ ಸೋತಿವೆ. ಈ ಸೋಲು ಆ ಸಿನಿಮಾ ನಿರ್ಮಾಪಕರಿಗೆ ಮಾತ್ರವಲ್ಲ, ಅನೇಕರ ವಿಶ್ವಾಸವನ್ನು ಆ ಸಮಯಕ್ಕೆ ಕುಗ್ಗಿಸಿದ್ದು ಸುಳ್ಳಲ್ಲ.
ಎಂಟು ತಿಂಗಳಲ್ಲಿ ತೆರೆಕಂಡ 150 ಸಿನಿಮಾಗಳಲ್ಲಿ ಯಾವ ಸಿನಿಮಾ ಗೆದ್ದಿದೆ, ಯಾವ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂದು ಕೇಳಿದರೆ ಉತ್ತರ ಅಸ್ಪಷ್ಟ. ಏಕೆಂದರೆ ಇವತ್ತು ಗೆಲುವಿನ ಮಾನದಂಡ ಬದಲಾಗಿದೆ. ಸಿನಿಮಾ ಚಿತ್ರ ಮಂದಿರದಲ್ಲೇ ಗೆದ್ದು ನಿರ್ಮಾಪಕರು ನಗೆ ಬೀರುವ ಸಮಯವೊಂದಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಕೆಲವು ನಿರ್ಮಾಪಕರು ತಮ್ಮ ಶ್ರಮ, ವೈಯಕ್ತಿಕ ವರ್ಚಸ್ಸು, ಸಂಪರ್ಕದಿಂದಾಗಿ ಓಟಿಟಿ, ಸ್ಯಾಟ್‌ಲೈಟ್ ಡಬ್ಬಿಂಗ್ ನಿಂದ ಮೊದಲೇ ಸೇಫ್ ಆಗುತ್ತಿದ್ದಾರೆ. ಹಾಗಾಗಿ, ಚಿತ್ರಮಂದಿರದ ಕಲೆಕ್ಷನ್ ನಲ್ಲೇ ಗೆಲುವು ನಿರ್ಧರಿಸುವುದು ಕಷ್ಟ. ಆದರೆ, ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಓಟಿಟಿ, ಸ್ಯಾಟ್‌ಲೈಟ್ ಕೂಡಾ ಧೋರಣೆ ಬದಲಿಸಿ, ಮೊದಲು ನಿಮ್ಮ ಸಾಮರ್ಥ್ಯವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಿ ಆ ನಂತರ ನಮ್ಮತ್ರ ಬನ್ನಿ ಎಂದಿರುವುದರಿಂದ ಈಗ ಮತ್ತೆ ಚಿತ್ರಮಂದಿರವೇ ಪುಣ್ಯಪಾದ ಆಗಿದೆ.
ಭೀಮನಿಂದ ಓಪನಿಂಗ್
ಸತತ ಏಳು ತಿಂಗಳಿನಿಂದ ಒಂದು ಗೆಲುವಿಗಾಗಿ ಎದುರು ನೋಡುತ್ತಿದ್ದ, ಭರ್ಜರಿ ಓಪನಿಂಗ್ ಅನ್ನು ನೋಡಲು ಕಾಯುತ್ತಿದ್ದ ಸಿನಿಮಾ ರಂಗಕ್ಕೆ ಆಶಾಕಿರಣವಾಗಿದ್ದು “ಭೀಮ’. ವಿಜಯ್ ಕುಮಾರ್ ನಟನೆ, ನಿರ್ದೇಶನದ “ಭೀಮ’ ಚಿತ್ರ. ಚಿತ್ರ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಸಿನಿ ಮಂದಿ ಮೊಗದಲ್ಲಿ ನಗು ಮೂಡಿಸಿತು. ಆ ನಂತರ ಬಂದ ಶ್ರೀನಿವಾಸರಾಜು ನಿರ್ದೇಶನದ “ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಕೂಡಾ ತಕ್ಕಮಟ್ಟಿಗೆ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯಿತು.
ಇನ್ನಷ್ಟು ಗೆಲುವು ಬೇಕಿದೆ
ಎರಡು ಚಿತ್ರಗಳ ಗೆಲುವು ಇಡೀ ಸ್ಯಾಂಡಲ್‌ವುಡ್‌ನ ಮಾನದಂಡವಾಗಲ್ಲ ಅನ್ನೋದನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗಿದೆ. ಏಕೆಂದರೆ ಎರಡು ಚಿತ್ರಗಳು ಗೆದ್ದ ಕೂಡಲೇ ಸ್ಯಾಂಡಲ್‌ವುಡ್ ಮಿಂಚುತ್ತಿದೆ, ಮತ್ತೆ ಗೆಲುವಿನ ಹಾದಿಯಲ್ಲಿದೆ ಎಂದು ಎದೆಯುಬ್ಬಿಸಿದರೆ ಅದು ಮೂರ್ಖತನವಾದೀತು. ಹಾಗಾಗಿ, ಕನ್ನಡ ಚಿತ್ರಗಳು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಸಿನಿಮಾ ಗೆದ್ದ ಕೂಡಲೇ ಮತ್ತೆ ಪ್ರೇಕ್ಷಕರು ಸಿನಿಮಾ ಮೂಡ್‌ಗೆ ಬಂದಿದ್ದಾರೆಂದು ಭಾವಿಸಿಕೊಂಡು ಯಾವುದೇ ಪೂರ್ವತಯಾರಿ ಇಲ್ಲದೇ ಸಿನಿಮಾ ಬಿಡುಗಡೆ ಮಾಡಿದರೆ ಕೈ ಸುಟ್ಟು ಕೊಳ್ಳಬೇಕಾದೀತು. ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕು. “ಭೀಮ’ ಸ್ಟಾರ್ ಸಿನಿಮಾವಾದರೂ ಆ ಚಿತ್ರದ ಮಾಡಿದ ಪ್ರಮೋಶನ್ ಕಡಿಮೆಯದ್ದಲ್ಲ. ವಿಜಯ್ ತಮ್ಮ ಚಿತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದರು. ಮುಖ್ಯವಾಗಿ ತಮ್ಮ ಸಿನಿಮಾದ ಟಾರ್ಗೇಟ್ ಆಡಿಯನ್ಸ್ ಯಾರು ಎಂಬುದು ಇಬ್ಬರು ನಟರಿಗೂ ಗೊತ್ತಿತ್ತು. ಆ ನಿಟ್ಟಿನಲ್ಲೇ ಅವರ ಪ್ರಚಾರವೂ ಇತ್ತು. ಆ ಪ್ರಚಾರ ಟಿಕೆಟ್ ಆಗಿ ಪರಿವರ್ತನೆಯಾಗುವ ಮೂಲಕ ಸಿನಿಮಾ ಗೆದ್ದಿದೆ. ಈ ನಿಟ್ಟಿನಲ್ಲಿ ಸಿನಿಮಾ ತಂಡಗಳು ಗಮನಹರಿಸಬೇಕಿದೆ.
ನಾಲ್ಕು ತಿಂಗಳ ನಿರೀಕ್ಷೆ ಜೋರು
ಈ ಎಂಟು ತಿಂಗಳಿನಲ್ಲಿ ಕನ್ನಡದಲ್ಲಿ 150 ಪ್ಲಸ್ ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳಲ್ಲಿ ಗೆಲುವು ಕಂಡವು ಕೆಲವೇ ಕೆಲವು. ಮುಂದಿನ ನಾಲ್ಕು ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬರಲಿವೆ. ಸ್ಟಾರ್‌ಗಳ ಸಿನಿಮಾದಿಂದ ಹೊಸಬರ ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಸುದೀಪ್ “ಮ್ಯಾಕ್ಸ್’, ಶಿವರಾಜ್‌ಕುಮಾರ್ “ಭೈರತಿ ರಣಗಲ್’, ಉಪೇಂದ್ರ “ಯು-ಐ’, ಧ್ರುವ ಸರ್ಜಾ “ಮಾರ್ಟಿನ್’ ಸೇರಿದಂತೆ ಹೊಸ ಸಿನಿಮಾಗಳಿವೆ. ಈ ಸಿನಿಮಾಗಳು ಮುಂಬರುವ ದಿನಗಳಲ್ಲಿ ಎಚ್ಚರದ ಹೆಜ್ಜೆ ಇಟ್ಟು, ಸೂಕ್ತ ತಯಾರಿಯೊಂದಿಗೆ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಬೇಕಿವೆ.
ರವಿಪ್ರಕಾಶ್ ರೈ