Advertisement
ಬೆಲೆ ಕುಸಿತದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಈಗಿರುವ ಬೆಲೆಯನ್ನೂ ಕಡಿತಗೊಳಿಸಿ ಹಾಲು ಖರೀದಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Related Articles
Advertisement
ಹೈನುಗಾರಿಕೆಯಲ್ಲಿ ನಿಜವಾಗಿ ನಷ್ಟದಲ್ಲಿ ಇರುವುದು ರೈತರು. ಹಾಲು ಉತ್ಪಾದನೆ ವೆಚ್ಚ ದುಪ್ಪಟ್ಟಾಗಿದೆ. ಹಸು, ಎಮ್ಮೆಗಳ ಬೆಲೆ ಹೆಚ್ಚಿದೆ. ಪಶು ಆಹಾರ ಬೆಲೆಯೂ ದುಪ್ಪಟ್ಟಾಗಿ ಸಾಕಾಣಿಕೆ ದುಬಾರಿಯಾಗಿದೆ. ಇತ್ತ ನ್ಯಾಯಯುತ ದರವೂ ದಕ್ಕುತ್ತಿಲ್ಲ ಎಂದು ಸಚಿವ ಜೋಶಿ ಹೇಳಿದ್ದಾರೆ.
2013-14ರಲ್ಲಿ ನಂದಿನಿ ಹಾಲಿನ ಬೆಲೆ ಲೀಟರ್ ಗೆ 29 ರೂ. ಇತ್ತು, 2024ರಲ್ಲಿ ಅರ್ಧ ಲೀಟರ್ ಹಾಲಿಗೆ ಇಷ್ಟು ಬೆಲೆಯಿದೆ. ಅಂದರೆ ಹತ್ತು ವರ್ಷದಲ್ಲಿ ಗ್ರಾಹಕರಿಗೆ ಶೇ.100ರಷ್ಟು ಬೆಲೆಯ ಹೊರೆ ಹೇರಲಾಗಿದೆ. ಆದರೆ ರೈತರಿಗೆ ಶೇ.10 ರಷ್ಟೂ ಬೆಲೆ ಹೆಚ್ಚಿಲ್ಲ. ಈಗಲೂ 2014ರಲ್ಲಿ ಇದ್ದಷ್ಟೇ ಇದೆ. ಅತ್ಯಂತ ಕನಿಷ್ಠ ದರ 26 ರಿಂದ 29 ರೂ.ಲೀಟರ್ ಗೆ ದಕ್ಕುತ್ತಿದೆ ಎಂದು ಸಚಿವರು ವಿಷಾದಿಸಿದ್ದಾರೆ.
ಸರ್ಕಾರ 2 ತಿಂಗಳ ಹಿಂದೆ 2 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಬರೆ ಎಳೆದಿತ್ತು. ಈಗ ಖರೀದಿ ಬೆಲೆ ಕಡಿತಗೊಳಿಸಿ ಉತ್ಪಾದಕರಿಗೂ ಬರೆ ಎಳೆದಿದೆ ಎಂದಿದ್ದಾರೆ.
ಹಾಲಿನ ಗುಣಮಟ್ಟದ ನೆಪದಲ್ಲಿ ಐದಾರು ರೂಪಾಯಿ ಪ್ರೋತ್ಸಾಹ ಧನಕ್ಕೂ ಕೊಕ್ ಹಾಕುತ್ತಿದೆ. ರಾಜ್ಯ ಸರ್ಕಾರ, ಈ ರೀತಿ ಪ್ರೋತ್ಸಾಹ ಧನ ಉಳಿಕೆ, ಖರೀದಿ ದರ ಕಡಿತ, ಮಾರಾಟ ದರ ಹೆಚ್ಚಳ ರೂಪದಲ್ಲಿ ಲೀಟರ್ ಹಾಲಿನ ಮೇಲೆ ಹತ್ತಾರು ರೂಪಾಯಿ ಹೆಚ್ಚುವರಿ ಆದಾಯದ ಮಾರ್ಗ ಕಂಡುಕೊಂಡಿದೆ. ಹೀಗಿರುವಾಗ ನಷ್ಟ ಹೇಗೆಂದು ಸಚಿವ ಜೋಶಿ ಪ್ರಶ್ನಿಸಿದ್ದಾರೆ.
ಹಾಲು ಒಕ್ಕೂಟಗಳು ನಷ್ಟದಲ್ಲಿ ಇದ್ದರೆ ಮೊದಲು ಹಾಲು ಒಕ್ಕೂಟ, ಶೀತಲೀಕರಣ ಘಟಕ ಹಾಗೂ ಹಾಲು ಸಂಗ್ರಹ ಕೇಂದ್ರಗಳಲ್ಲಿ ಆಗುತ್ತಿರುವ ಸೋರಿಕೆಯನ್ನೇ ತಡೆ ಗಟ್ಟಿದರೆ ಸಾಕು. ಒಂದೆಡೆ ಮೇವು, ಪಶು ಆಹಾರ ಬೆಲೆ ಹೆಚ್ಚಳ, ಇನ್ನೊಂದೆಡೆ ಹಾಲು ಒಕ್ಕೂಟಗಳು ಮತ್ತು ಸರ್ಕಾರದಿಂದ ವಂಚನೆ. ಹೀಗಾಗಿ ರಾಜ್ಯದ ಅನೇಕ ಗ್ರಾಮಗಳಲ್ಲಿ ಇಂದು ಸಣ್ಣಪುಟ್ಟ ರೈತರು ಹೈನುಗಾರಿಕೆಯಿಂದಲೇ ವಿಮುಖರಾಗುವಂತಾಗಿ, ಹೈನುಗಾರಿಕೆ ಪ್ರಭಾವಿಗಳ ಸ್ವತ್ತಾಗಲಿದೆ ಎಂದು ಜೋಶಿ ಎಚ್ಚರಿಸಿದ್ದಾರೆ.
ನಮ್ಮದು ರೈತಪರ ಸರ್ಕಾರ, ಜನಪರ ಸರ್ಕಾರ ಎನ್ನುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದು, ನಾಚಿಕೆಯಾಗಬೇಕು. ರಾಜ್ಯ ಸರ್ಕಾರ ಕೂಡಲೇ ಬೆಲೆ ಕಡಿತದ ಆದೇಶ ಹಿಂಪಡೆಯಬೇಕು. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ.