ಮದುವೆಯಾದ ನೂತನ ದಂಪತಿಗಳಿಗೆ ಫ್ರೆಂಡ್ಸ್ -ಫ್ಯಾಮಿಲಿ ಕಡೆಯಿಂದ “ವೆಡ್ಡಿಂಗ್ ಗಿಫ್ಟ್’ ಕೊಡುತ್ತಾರೆ. ಆದರೆ ಮದುವೆಯಾದ ಹೆಣ್ಣಿಗೆ, ಆಕೆಯ ರಕ್ಷಣೆಗಾಗಿ ಕಾನೂನು “498 ಎ’ ಎಂಬ ಸ್ಪೆಷಲ್ “ವೆಡಿಂಗ್ ಗಿಫ್ಟ್’ ಕೊಡುತ್ತದೆ. ಈ “ವೆಡ್ಡಿಂಗ್ ಗಿಫ್ಟ್’ ಅನ್ನು ತನಗೆ ಬೇಕಾದಾಗ ಉಪಯೋಗಿಸಿಕೊಳ್ಳುವ ಹಕ್ಕು ಮದುವೆಯಾಗುತ್ತಿದ್ದಂತೆ, ಆಕೆಗೆ ಸಿಗುತ್ತದೆ. ಆದರೆ ಹೀಗೆ ಸಿಕ್ಕ “ವೆಡಿಂಗ್ ಗಿಫ್ಟ್’ ಅನ್ನು ಮಹಿಳೆಯೊಬ್ಬಳು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡರೆ, ಅದರ ಪರಿಣಾಮಗಳು ಹೇಗಿರುತ್ತದೆ ಅನ್ನೋದನ್ನು ತೆರೆಮೇಲೆ ಹೇಳಿರುವ ಸಿನಿಮಾ “ವೆಡ್ಡಿಂಗ್ ಗಿಫ್ಟ್’.
ವಿಲಾಸ್ ರಾವ್ (ನಿಶಾನ್) ಯುವಜನರಿಗೆ ಸ್ಫೂರ್ತಿಯಾಗಿರುವ ಫಾರ್ಮಾಸಿಟಿಕಲ್ ಉದ್ಯಮಿ. ಇಂಥ ವ್ಯಕ್ತಿ ಅಕಾಂಕ್ಷಾ (ಸೋನು ಗೌಡ) ಎಂಬ ಯುವತಿಯ ಮೋಹಕ್ಕೆ ಸಿಲುಕಿ, ಮದುವೆ ಆಗುತ್ತಾನೆ. ಮದುವೆಯಾದ ಮೊದಲ ದಿನದಿಂದಲೇ ವಿಲಾಸ್ ವೈವಾಹಿಕ ಜೀವನದಲ್ಲಿ ಅನಿರೀಕ್ಷಿತ ಏಳು-ಬೀಳುಗಳು ಶುರುವಾಗುತ್ತದೆ. ಪ್ರೀತಿಸಿ ಮದುವೆಯಾದ ಪತ್ನಿಯೇ ವಿಲಾಸ್ ವಿರುದ್ಧ ಹಲ್ಲೆ ಆರೋಪ ಮಾಡಿ ಜೈಲು ಪಾಲಾಗುವಂತೆ ಮಾಡುತ್ತಾಳೆ. ಇದೆಲ್ಲ ಹೇಗೆ ನಡೆಯುತ್ತದೆ? ಈ ಎಲ್ಲ ಸಂಕಷ್ಟಗಳಿಂದ ವಿಲಾಸ್ ಹೇಗೆ ಹೊರಗೆ ಬರುತ್ತಾನೆ? ಈ ಸೆಕ್ಷನ್ 498ಎ ಏನು ಹೇಳುತ್ತದೆ ಎಂಬುದೇ “ವೆಡ್ಡಿಂಗ್ ಗಿಫ್ಟ್’ ಸಿನಿಮಾದ ಕಥಾ ಹಂದರ. ಅದು ಹೇಗೆ ನಡೆಯುತ್ತದೆ ಅನ್ನೋದನ್ನ ತೆರೆಮೇಲೆ ನೋಡುವುದು ಉತ್ತಮ.
ಇನ್ನು ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಆಗಾಗ್ಗೆ ಚರ್ಚೆಗೆ ಬರುವ 498 ಎ ವಿಷಯವನ್ನು ತಮ್ಮ ಚೊಚ್ಚಲ ಸಿನಿಮಾದಲ್ಲಿ ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ವಿಕ್ರಂ ಪ್ರಭು. 498 ಎ ಪ್ರಕರಣಗಳ ಹಿಂದಿನ ಆಯಾಮ, ಕಾಯ್ದೆಯ ದುರುಪಯೋಗವಾಗುವ ಸನ್ನಿವೇಶ, ಪುರುಷರ ಮೇಲಿನ ಶೋಷಣೆ, ಕೌಟುಂಬಿಕ ವ್ಯವಸ್ಥೆಯ ಮಹತ್ವ, ಹೈ-ಪ್ರೊಫೈಲ್ ಕೇಸ್‌ಗಳಿಗೆ ಸಿಗುವ ಮನ್ನಣೆ, ಕೋರ್ಟ್ ರೂಮ್ ಡ್ರಾಮಾ, ಸಾಮಾಜಿಕ ಅಭಿಪ್ರಾಯ ಎಲ್ಲವನ್ನೂ ಸೂಕ್ಷ್ಮವಾಗಿ ಜೋಡಿಸಿ ತೆರೆಮೇಲೆ ಹೇಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಚಿತ್ರವಿಮರ್ಶೆ: ವ್ಯವಸ್ಥೆಯೊಳಗೆ ‘ಹೋಪ್’ ಮೂಡಿಸುವ ಕಥೆ
ಮನರಂಜನೆಗೆಯ ಜೊತೆಗೆ, ಯೋಚನೆಗೂ ಒಡ್ಡುವ ವಿಷಯವನ್ನು ಟರ್ನ್-ಟ್ವಿಸ್ಟ್ ಗಳ ಜೊತೆಗೆ “ವೆಡ್ಡಿಂಗ್ ಗಿಫ್ಟ್’ನಲ್ಲಿ ಪ್ರೇಕ್ಷಕರ ಮುಂದಿಡಲಾಗಿದೆ. ನಟರಾದ ನಿಶಾನ್ ನಾಣಯ್ಯ, ಸೋನಿಗೌಡ, ಪ್ರೇಮಾ, ಅಚ್ಯುತ ಕುಮಾರ್ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ ಅಚ್ಚುಕಟ್ಟಾಗಿದ್ದು, ಒಂದೆರಡು ಹಾಡುಗಳು ಗಮನ ಸೆಳೆಯುತ್ತವೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಮಟ್ಟಿಗೆ ತುಂಬ ಅಪರೂಪ ಎನ್ನಬಹುದುದಾದ ಕಥಾಹಂದರ ಹೊಂದಿರುವ “ವೆಡ್ಡಿಂಗ್ ಗಿಫ್ಟ್’ ಅನ್ನು ಒಮ್ಮೆ ಫ್ಯಾಮಿಲಿ ಸಮೇತ ಹೋಗಿ ನೋಡಿ ಬರಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್