ಮಲೆನಾಡನ ರಂಗಕರ್ಮಿ ರಮೇಶ ಬೇಗಾರ್ ನಿರ್ದೇಶಿಸಿರುವ “ವೈಶಂಪಾಯನ ತೀರ’ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಚಿತ್ರತಂಡ, ಜನವರಿ 6ಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ. ಸದ್ಯ ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚಿಗೆ “ವೈಶಂಪಾಯನ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ, ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ಪತ್ರಕರ್ತ ಎನ್. ಎಸ್ ಶ್ರೀಧರಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ “ವೈಶಂಪಾಯನ ತೀರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಯಿತು.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಮೇಶ್ ಬೇಗಾರ್, “ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ನಿರೂಪಿಸಲಾಗಿದೆ. ಇಡೀ ಸಿನಿಮಾವನ್ನು ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಮಲೆನಾಡ ಭಾಷೆ, ಜನಜೀವನ ಮತ್ತು ಸಂಸ್ಕೃತಿಯನ್ನು ತೆರೆಮೇಲೆ ತರಲಾಗಿದೆ’ ಎಂದು ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರ ಪಾತ್ರ ಮತ್ತು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
“ಸ್ವರಸಂಗಮ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಲ್ಲಿ ಆರ್. ಸುರೇಶ ಬಾಬು ನಿರ್ಮಿಸಿರುವ “ವೈಶಂಪಾಯನ ತೀರ’ ಸಿನಿಮಾದಲ್ಲಿ ವೈಜಯಂತಿ ಅಡಿಗ ನಾಯಕಿಯಾಗಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್ ಭಟ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್, ಸತೀಶ್ ಪೈ, ಸಂತೋಷ್ ಪೈ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ವೈಶಂಪಾಯನ ತೀರ’ ಸಿನಿಮಾದ ಹಾಡುಗಳಿಗೆ ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ವಿನು ಮನಸು ಹಿನ್ನೆಲೆ ಸಂಗೀತವಿದೆ. ಚಿತ್ರಕ್ಕೆ ಶಿಶಿರ ಛಾಯಾಗ್ರಹಣ, ಅವಿನಾಶ್ ಸಂಕಲನವಿದೆ.