2020ರ ಸಮಯದಲ್ಲಿ ಇಡೀ ದೇಶವೇ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು, ದೊಡ್ಡ ಸುದ್ದಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಮತ್ತು ಸರ್ಕಾರ ತನುಜಾಳಿಗೆ ನೀಟ್ ಪರೀಕ್ಷೆ ಬರೆಯಲು ಅನುಕೂಲ ಮಾಡಿತ್ತು. ಸಾಕಷ್ಟು ಅಡೆತಡೆಗಳನ್ನು ಎದುರಿಸಿ, ಕೊನೆಗೂ ಅಂದು ಕೊಂಡಂತೆ ತನುಜಾ ನೀಟ್ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಈಗ ಅದೇ ವಿಚಾರವನ್ನಿಟ್ಟುಕೊಂಡು “ತನುಜಾ’ ಚಿತ್ರ ತಯಾರಾಗಿದ್ದು, ಚಿತ್ರ ಫೆ.03ರಂದು ತೆರೆಕಾಣುತ್ತಿದೆ.
“”ತನುಜಾ’ ನಮ್ಮ ನಾಡಿನ ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳ ಸಾಧನೆಯ ನೈಜ ಘಟನೆಯಾಧರಿತ ಚಿತ್ರ. ಒಬ್ಬ ವಿದ್ಯಾರ್ಥಿ ಮನಸ್ಸು ಮಾಡಿದರೆ ಯಾವುದೇ ಅಡೆ ತಡೆ ಬಂದರು ಮೆಟ್ಟಿ ನಿಂತು ಹೇಗೆಲ್ಲಾ ಸಾಧನೆ ಮಾಡಬಹುದು, ತಾಯಿಯ ಇಚ್ಛಾಶಕ್ತಿಯಿಂದ ಮಕ್ಕಳ ಭವಿಷ್ಯ ಹೇಗೆಲ್ಲಾ ರೂಪಿಸಬಹುದು? ಶಿಕ್ಷಕರು ನಿರ್ಧಾರ ಮಾಡಿದರೆ ವಿಧ್ಯಾರ್ಥಿಗಳ ಗುರಿ ಮುಟ್ಟಲು ಹೇಗೆ ನೆರವಾಗಬಹುದು? ಒಂದು ಆಡಳಿತಾತ್ಮಕ ವ್ಯವಸ್ಥೆ ಸಾಮಾನ್ಯ ಜನರಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿದರೆ ಏನೆಲ್ಲಾ ಅಚ್ಚರಿ ನಡೆಯಬಹುದು? ಎನ್ನುವುದಕ್ಕೆ “ತನುಜಾ’ ಚಿತ್ರ ಒಂದು ಉತ್ತಮ ಉದಾಹರಣೆ. ಅನೇಕರಿಗೆ ಪ್ರೇರಣೆಯಾಗುವಂಥ ಅಪರೂಪದ ನೈಜ ಘಟನೆ ಈ ಸಿನಿಮಾದಲ್ಲಿದೆ’ ಎಂಬುದು ಚಿತ್ರದ ಬಗ್ಗೆ ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ಮಾತು.
ಇನ್ನು “ತನುಜಾ’ ಸಿನಿಮಾದಲ್ಲಿ ಸಪ್ತ ಪಾವೂರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ರಘುನಂದನ್ ಎಸ್.ಕೆ, ಸತೀಶ್, ಚಿತ್ಕಲಾ ಬಿರಾದಾರ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಚಿವ ಡಾ. ಕೆ. ಸುಧಾಕರ್, ಪತ್ರಕರ್ತ ವಿಶ್ವೇಶ್ವರ್ ಭಟ್ ಅತಿಥಿ ಕಲಾವಿದರಾಗಿ “ತನುಜಾ’ ಸಿನಿಮಾದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಶಿವಮೊಗ್ಗ, ಬೆಂಗಳೂರು ಸೇರಿದಂತೆ ಈ ಘಟನೆ ನಡೆದ ಸ್ಥಳಗಳಲ್ಲಿಯೇ ಸುಮಾರು 43 ದಿನಗಳ ಕಾಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ