ಒಂದೆಡೆ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಿಗ್ ಬಜೆಟ್ ಸಿನಿಮಾಗಳು ದೊಡ್ಡದಾಗಿ ಸುದ್ದಿಯಾಗುತ್ತಿದ್ದರೆ, ಮತ್ತೂಂದೆಡೆ ಅವರದ್ದೇ ನಿರ್ಮಾಣದಲ್ಲಿ ಮೂಡಿಬಂದಿರುವ ಕಂಟೆಂಟ್ ಆಧಾರಿತ ಸಿನಿಮಾವೊಂದು ವಿದೇಶಗಳಲ್ಲಿ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ, ಸದ್ದಿಲ್ಲದೆ ಗಡಿಯಾಚೆಗೆ ಸುದ್ದಿಯಾಗುತ್ತಿದೆ.
ಹೌದು, “ರಿಷಭ್ ಶೆಟ್ಟಿ ಫಿಲಂಸ್’ ಬ್ಯಾನರಿನಲ್ಲಿ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಿಸಿರುವ, ಜೈ ಶಂಕರ್ ಆರ್ಯರ್ ಚೊಚ್ಚಲ ನಿರ್ದೇಶನದ “ಶಿವಮ್ಮ’ ಇಂಥದ್ದೊಂದು ಸುದ್ದಿ ಮಾಡುತ್ತಿರುವ ಸಿನಿಮಾ.
ಕೊಪ್ಪಳ ಜಿಲ್ಲೆಯ ಯಾರೇ ಹಂಚಿನಾಳ ಗ್ರಾಮದಿಂದ ಶುರುವಾದ “ಶಿವಮ್ಮ’ ಸಿನಿಮಾ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆ ಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾಗಿದೆ.
ಈಗಾಗಲೇ “ನ್ಯೂ ಕರೆಂಟ್ಸ್ ಪುರಸ್ಕಾರ’, “ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, 2022 ಯಂಗ್ ಜೂರಿ ಪುರಸ್ಕಾರ’, “ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್’, “ನಾಂಟೆಸ್ 2022 ಅತ್ಯುತ್ತಮ ನಿರ್ದೇಶಕ’, “ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ’, “ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋ ತ್ಸವ’, “ಚೀನಾ ಬ್ಲಾಕ್ ಮೂವಿ’, “ಸ್ವಿಟ್ಜರ್ಲ್ಯಾಂಡ್ ಫಜರ್ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ’, “ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’, “ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ’, ಮತ್ತಿತರ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಗೊಂಡು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ “ಶಿವಮ್ಮ’ ಸಿನಿಮಾವನ್ನು ಶೀಘ್ರದಲ್ಲಿಯೇ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.