ನವ ನಿರ್ದೇಶಕ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ, “ಯೋಗರಾಜ್ ಸಿನಿಮಾಸ್’ ಹಾಗೂ “ರವಿ ಶಾಮನೂರ್ ಫಿಲಂಸ್’ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ “ಪದವಿ ಪೂರ್ವ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ “ಫ್ರೆಂಡ್‌ಶಿಪ್ ಡೇ’ ಪ್ರಯುಕ್ತ “ಪದವಿ ಪೂರ್ವ’ ಸಿನಿಮಾದಲ್ಲಿ ಬರುವ ಫ್ರೆಂಡ್‌ಶಿಪ್ ಗೀತೆಯೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ಫ್ರೆಂಡ್ಸ್ ಇದ್ರೇನೆ ಜೀವನ…’ ಎಂಬ ಗೀತೆಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ವಿಜಯ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇದೇ ವೇಳೆ, ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, “ತಂದೆ-ತಾಯಿ ಬಳಿ ಹೇಳಿಕೊಳ್ಳಲಾಗದ ಅನೇಕ ವಿಷಯಗಳನ್ನು ಫ್ರೆಂಡ್ಸ್ ಬಳಿ ಹೇಳಿಕೊಳ್ಳುತ್ತೇವೆ. ಹಾಗಾಗಿ ನನ್ನ ಪ್ರಕಾರ ಸ್ನೇಹ ಸಂಬಂಧ ಎನ್ನುವುದು ಬಹಳ ದೊಡ್ಡದು. ಈ ಸಿನಿಮಾದಲ್ಲೂ ಸನ್ನಿವೇಶಕ್ಕೆ ತಕ್ಕಂತೆ, “ಫ್ರೆಂಡ್ಸ್ ಇದ್ರೇನೆ ಜೀವನ…’ ಎನ್ನುವ ಗೀತೆ ಬರೆದಿದ್ದೇನೆ. ನನ್ನ ಎಲ್ಲಾ ಸ್ನೇಹಿತರಿಗೆ ಈ ಹಾಡನ್ನು ಅರ್ಪಿಸುತ್ತೇನೆ. ಕೇಳುತ್ತಿದ್ದಂತೆ, ಎಲ್ಲರಿಗೂ ಇಷ್ಟವಾಗುವಂತೆ ಹಾಡು ಮೂಡಿಬಂದಿದೆ’ ಎಂದರು.
ಇದನ್ನೂ ಓದಿ:ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಹರಿಪ್ರಸಾದ್ ಜಯಣ್ಣ, “ಯೋಗರಾಜ್ ಭಟ್ಟರ ಬಳಿ ಕೆಲಸ ಮಾಡುತ್ತಿದ್ದಾಗ, ಅವರು ನನ್ನನ್ನು ಒಂದು ದಿನ ಕೂಡ ಅಸಿಸ್ಟೆಂಟ್, ಅಸೋಸಿಯೇಟ್ ಎನುತ್ತಿರಲಿಲ್ಲ. ಎಲ್ಲರಿಗೂ ನನ್ನ ಗೆಳೆಯ ಎಂದೇ ಪರಿಚಯಿಸುತ್ತಿದ್ದರು. ಈ ಸಿನಿಮಾ ಕೂಡ ಸ್ನೇಹದ ತಳಹದಿ ಮೇಲೆ, ಅನೇಕ ಸ್ನೇಹಿತರ ಸಹಕಾರದಿಂದ ನಿರ್ಮಾಣವಾಗಿದೆ. ಯೋಗರಾಜ್ ಭಟ್ ಸಿನಿಮಾದ ಕಥೆಗೆ ತಕ್ಕಂತ ಒಂದೊಳ್ಳೆ ಹಾಡನ್ನು ಕೊಟ್ಟಿದ್ದಾರೆ. “ಪದವಿ ಪೂರ್ವ’ 1995-96 ರ ಕಾಲಘಟ್ಟದ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಸೋಶಿಯಲ್ ಮೀಡಿಯಾ ಬರುವುದಕ್ಕಿಂತ ಮುಂಚಿನ ಸ್ನೇಹವನ್ನು ಈ ಸಿನಿಮಾದಲ್ಲಿ ನೋಡಬಹುದು. ಇದೇ ಅಕ್ಟೋಬರ್ ವೇಳೆಗೆ ಸಿನಿಮಾವನ್ನು ರಿಲೀಸ್ ಮಾಡುವ ಯೋಚನೆಯಿದೆ’ ಎಂದರು.
ನಿರ್ಮಾಪಕ ರವಿ ಶಾಮನೂರು, ನಾಯಕ ನಟ ಪೃಥ್ವಿ ಶಾಮನೂರು, ನಟರಾಜ್, ಛಾಯಾಗ್ರಹಕರ ಸಂತೋಷ್ ರೈ ಪಾತಾಜೆ, ಸಂಕಲನಕಾರ ಮಧು, ಕಾಸ್ಟಿಂಗ್ ಡೈರೆಕ್ಟರ್ ಯೋಗಿ, ನೃತ್ಯ ನಿರ್ದೇಶಕ ಧನು “ಪದವಿ ಪೂರ್ವ’ ಸಿನಿಮಾದ ಬಗ್ಗೆ ಮಾತನಾಡಿದರು. “ಗರಡಿ’ ಸಿನಿಮಾದ ನಾಯಕ ಯಶಸ್ ಸೂರ್ಯ, ನಾಯಕಿ ಸೋನಾಲ್ ಮೊಂತೆರೊ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.