ಈಗಾಗಲೇ ರೈತರ ಆತ್ಮಹತ್ಯೆ ಕುರಿತ ಅನೇಕ ಚಿತ್ರಗಳು ಬಂದಿವೆ. ಆದರೆ, ಕಾವೇರಿ ನೀರನ್ನು ಹೇಗೆಲ್ಲಾ ಕಾಪಾಡಬಹುದು ಎಂಬ ಬಗ್ಗೆ ಸಿನಿಮಾ ಬಂದಿರಲಿಲ್ಲ. ಅಂಥದ್ದೊಂದು ವಿಷಯ ಇಟ್ಟುಕೊಂಡು ಹೊಸಬರು
“ಕಾವೇರಿ ತೀರದ ಚರಿತ್ರೆ’ ಎಂಬ ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇಷ್ಟರಲ್ಲೇ ತೆರೆಗೆ ಬರಲು ರೆಡಿಯಾಗುತ್ತಿದೆ. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆಯೂ ನಡೆಯಿತು.
ನಿರ್ದೇಶಕ ಪ್ರವೀಣ್‌ಗೆ ಇದು ಮೊದಲ ಸಿನಿಮಾ. ಕಾವೇರಿ ಹುಟ್ಟಿದ ಚರಿತ್ರೆ, ಹರಿಯುವ ಜಾಗ ಸೇರಿದಂತೆ ನೀರನ್ನು ಯಾವ ರೀತಿ ಬಳಸಬೇಕು, ಹೇಗೆ ಉಳಿಸಬೇಕು ಎಂಬ ವಿಷಯ ಚಿತ್ರದ ಹೈಲೆಟ್. ಇಲ್ಲಿ ನೀರು ಪೋಲಾಗುವುದಕ್ಕೊಂದು ಪರಿಹಾರವೂ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಮಂಡ್ಯ, ಕೆ.ಆರ್.ಪೇಟೆ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಿಸಲಾಗಿದೆ ಎಂದು ವಿವರ ಕೊಟ್ಟರು ಪ್ರವೀಣ್.
ಚಿತ್ರಕ್ಕೆ ರೈತ ಪುಟ್ಟರಾಜು ನಿರ್ಮಾಪಕರು. ನಿರ್ಮಾಣಕ್ಕಿಳಿಯುವಷ್ಟು ಧೈರ್ಯ ಬಂದಿದ್ದು, ಕಥೆ ಕೇಳಿದ ಮೇಲಂತೆ. ಅವರ ಮಗ ನವೀನ್ ಗೌಡಗೆ ಸಿನಿಮಾ ಮಾಡುವ ಆಸೆ ಇತ್ತಂತೆ. ಒಂದಷ್ಟು ಕಥೆ ಕೇಳಿದಾಗ, ಯಾವುದೂ ಇಷ್ಟ ಆಗಲಿಲ್ಲವಂತೆ. ಕೊನೆಗೆ ಈ ಕಥೆ ಇಷ್ಟವಾಗಿದ್ದೇ ತಡ, ರೈತರಿಗೊಂದು ಸಂದೇಶ, ಕಾವೇರಿ ಪೋಲಾಗದಂತೆ ಒಂದು ಪರಿಹಾರ ಕುರಿತು ಸಿನಿಮಾ ಮಾಡಿದ್ದಾಗಿ ಹೇಳುತ್ತಾರೆ ಅವರು. ಚಿತ್ರದ ನಾಯಕ ನವೀನ್ ಗೌಡಗೆ ಇದು ಮೊದಲ ಸಿನಿಮಾವಂತೆ.
ಸಿನಿಮಾಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾಗಿ ಹೇಳುವ ನವೀನ್, ಇಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ಮೊದಲ ಚಿತ್ರವಾದ್ದರಿಂದ ಇಲ್ಲಿ ಒಂದಷ್ಟು ಎಡವಟ್ಟುಗಳಿವೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಎಂದರು ನವೀನ್.
ನಾಯಕಿ ಅಖೀಲಾ ನಾಯ್ಡುಗೆ ಇದು ಮೊದಲ ಚಿತ್ರ. ಈ ಹಿಂದೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ ಅನುಭವವೂ ಅವರಿಗೆ ಇದೆ. ಅವರಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರಂತೆ. ಇನ್ನು, ಚಿತ್ರದಲ್ಲಿ ಪ್ರೀತಿ ಎಂಬ ಬಾಲ ನಟಿ ಕೂಡ ನಟಿಸಿದ್ದು, ಕಾವೇರಿ ಸಮಸ್ಯೆಗೆ ಒಂದು ಪ್ರಾಜೆಕ್ಟ್ ರೆಡಿ ಮಾಡುವ ಹುಡುಗಿಯಾಗಿ ನಟಿಸಿದ್ದಾರಂತೆ. ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತವಿದೆ. ವಿಶೇಷವೆಂದರೆ, ನಿರ್ದೇಶಕರೇ ಇಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ, ಛಾಯಾಗ್ರಹಣ, ಕಲೆ, ಸಾಹಸ ಇತ್ಯಾದಿ ಇತ್ಯಾದಿ ಇತ್ಯಾದಿ ಮಾಡುವ ಮೂಲಕ “ಸಾಧಕ’ರಾಗಿದ್ದಾರೆ. ಆದರೆ, ಚಿತ್ರದ ಪ್ರೋಮೋ ನೋಡಿದಾಗಲಷ್ಟೇ ಅವರ ಸಾಧನೆಯಲ್ಲಿ ಎಷ್ಟೆಲ್ಲಾ ತಪ್ಪಿದ್ದವು ಅನ್ನೋದು ಗೊತ್ತಾಯ್ತು. ಅಲ್ಲಿಗೆ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೂ ತೆರೆಬಿತ್ತು.