ಮಾಸ್ ಪ್ರಿಯರಿಗೆ ಬೇಕಾದ ಆ್ಯಕ್ಷನ್, ಫ್ಯಾಮಿಲಿ ಆಡಿಯನ್ಸ್‌ಗೆ ಖುಷಿ ಕೊಡುವ ಸೆಂಟಿಮೆಂಟ್, ಒಂದು ಹೊಸದಾದ ಪರಿಸರ… ಇವೆಲ್ಲವೂ ಒಟ್ಟು ಸೇರಿದರೆ “ಗೌಳಿ’ಯಾಗುತ್ತದೆ. ಹೌದು, ಶ್ರೀನಗರ ಕಿಟ್ಟಿ ನಾಯಕರಾಗಿ ನಟಿಸಿರುವ “ಗೌಳಿ’ ಚಿತ್ರ ತೆರೆಕಂಡಿದೆ. ಒಂದು ಹೊಸ ಬಗೆಯ ಕಥೆಯೊಂದಿಗೆ ಕಿಟ್ಟಿ ಕಂಬ್ಯಾಕ್ ಮಾಡಿದ್ದಾರೆ
“ಗೌಳಿ’ ಒಂದು ಆ್ಯಕ್ಷನ್ ಸಿನಿಮಾ. ಹಾಗಂತ ಸುಖಾಸುಮ್ಮನೆ ಬಂದು ಹೋಗುವ ಆ್ಯಕ್ಷನ್ ಅಲ್ಲ. ಅದಕ್ಕೊಂದು ಕಾರಣವಿದೆ, ಪ್ರತೀಕಾರದ ಹಿಂದೆ ಒಂದು ನೋವಿದೆ.. ಹಾಗಾದರೆ “ಗೌಳಿ’ ಸಿನಿಮಾದ ಕಥೆಯೇನು? ತನ್ನ ಪ್ರೀತಿ- ಪಾತ್ರರನ್ನು ಉಳಿಸಿಕೊಳ್ಳಲು, ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಒಬ್ಬ ಮೃದು ಸ್ವಭಾವದ ವ್ಯಕ್ತಿ ಹೇಗೆ ಬದಲಾಗುತ್ತಾನೆ, ಆ ಬದಲಾವಣೆಯ ಪರಿಣಾಮ ಎಷ್ಟು ತೀವ್ರವಾಗಿರುತ್ತದೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ.
ಈ ಸಿನಿಮಾದ ಕಥೆಗೊಂದು ಪೂರಕವಾದ ಪರಿಸರವೊಂದನ್ನು ಕಟ್ಟಿಕೊಡಲಾಗಿದೆ. ಉತ್ತರ ಕನ್ನಡದ ಭಾಗದಲ್ಲಿ ನಡೆಯುವ ಕಥೆಯಾಗಿ “ಗೌಳಿ’ ಮೂಡಿಬಂದಿದೆ. ನಿರ್ದೇಶಕ ಸೂರ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಒಂದು ಆ್ಯಕ್ಷನ್ ಕಂ ಫ್ಯಾಮಿಲಿ ಡ್ರಾಮಾ ಚಿತ್ರವನ್ನು ನೀಟಾಗಿ ಕಟ್ಟಿಕೊಡಲು ಪ್ರಯ ತ್ನಿಸಿರುವುದು ಎದ್ದು ಕಾಣುತ್ತದೆ.
ಚಿತ್ರದಲ್ಲಿ ಖಡಕ್ ವಿಲನ್‌ಗಳಿದ್ದಾರೆ, ಅವರ ಅಬ್ಬರವಿದೆ, ಒಬ್ಬ ಮುಗ್ಧನ ಆಕ್ರಂದನವೂ ಇದೆ. ಜೊತೆ ಜೊತೆಗೆ ಒಂದು ರಿವೆಂಜ್ ಸ್ಟೋರಿಯೂ ಇದೆ. ಕಥೆಯ ಮೂಲ ಆಶಯದ ತೀವ್ರತೆಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ನೋಡುಗರ ಕುತೂಹಲ ಹೆಚ್ಚಿಸುವ ಉದ್ದೇಶದಿಂದ ಇಲ್ಲಿ “ದುಷ್ಟ’ ಶಕ್ತಿಗಳು ಸ್ವಲ್ಪ ಹೆಚ್ಚೇ ಅಬ್ಬರಿಸಿವೆ. ನೋಡ ನೋಡುತ್ತಲೇ ಸಿನಿಮಾ ಹೆಚ್ಚು ಗಂಭೀರವಾಗುತ್ತಾ ಸಾಗುತ್ತದೆ. ಆ ಮಟ್ಟಿಗೆ “ಗೌಳಿ’ ಎಂದು ನೀಟಾದ ಸಿನಿಮಾ.
ನಾಯಕ ನಟ ಶ್ರೀನಗರ ಕಿಟ್ಟಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ ಆಗಿ, ಜಿದ್ದಿಗೆ ಬಿದ್ದ ವ್ಯಕ್ತಿಯಾಗಿ ಕಿಟ್ಟಿ ಇಷ್ಟಾಗುತ್ತಾರೆ. ನಾಯಕಿ ಪಾವನಾ, ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನೆಗೆಟಿವ್ ಶೇಡ್‌ನಲ್ಲಿ ಶರತ್ ಲೋಹಿತಾಶ್ವ, ಯಶ್ ಶೆಟ್ಟಿ ಅಬ್ಬರಿಸಿದ್ದಾರೆ.
ರವಿಪ್ರಕಾಶ್ ರೈ