Advertisement

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

01:20 PM May 21, 2022 | Team Udayavani |

ಯಾವುದೇ ಕ್ಷೇತ್ರದವಾದರೂ ಸರಿ, ಅಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಒಂದಷ್ಟು ಸೈಕಲ್‌ ಹೊಡೆಯಲೇಬೇಕು. ಅದರಲ್ಲೂ ತಾನು ಇಷ್ಟಪಟ್ಟು ಆರಿಸಿಕೊಂಡ ಕ್ಷೇತ್ರದಲ್ಲಿ ಕನಸು ನನಸು ಮಾಡಿಕೊಳ್ಳಲು ಹೊರಟವರು ಎಲ್ಲ ಕಷ್ಟ-ನಷ್ಟಗಳನ್ನೂ ಸಹಿಸಿಕೊಳ್ಳಬೇಕು. ಇನ್ನು ಸಿನಿಮಾ ರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡು ಅದರ ಬೆನ್ನೇರಿ ಹೊರಟವರ ಕಷ್ಟ-ಕಾರ್ಪಣ್ಯಗಳನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಕಟ್ಟಿಂಗ್‌ ಶಾಪ್‌’.

Advertisement

ಇಲ್ಲಿಯವರೆಗೆ ಸಿನಿಮಾ ಹೀರೋ ಆಗಬೇಕು, ಹೀರೋಯಿನ್‌ ಆಗಬೇಕು, ಡೈರೆಕ್ಟರ್‌ ಆಗಬೇಕು ಎಂದು ಕನಸು ಕಂಡವರ, ಅದರಲ್ಲಿ ಏಳು-ಬೀಳುಗಳನ್ನು ನೋಡಿದವರ ಹಲವು ಕಥೆಗಳು ಕನ್ನಡ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಆಗಿ ತೆರೆಗೆ ಬಂದಿದ್ದನ್ನು ನೀವು ನೋಡಿರಬಹುದು. ಆದರೆ ಸಿನಿಮಾದಲ್ಲಿ ಸಂಕಲನಕಾರನಾಗಬೇಕು ಎಂಬ ಕನಸನ್ನು ಹೊತ್ತ ಹುಡುಗನೊಬ್ಬ ಏನೇನು ಸವಾಲುಗಳನ್ನು ಎದುರಿಸುತ್ತಾನೆ, ಕೊನೆಗೆ ಅಂದುಕೊಂಡಿದ್ದನ್ನು ಸಾಧಿಸುತ್ತಾನಾ? ಇಲ್ಲವಾ? ಅನ್ನೋದು “ಕಟ್ಟಿಂಗ್‌ ಶಾಪ್‌’ ಸಿನಿಮಾದ ಕಥಾಹಂದರ.

ಬಹುಶಃ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ತೆರೆಹಿಂದೆ ಕೆಲಸ ಮಾಡುವ, ಒಂದು ಸಿನಿಮಾ ತೆರೆಮೇಲೆ ಅಂದವಾಗಿ ಕಾಣುವಂತೆ ಮಾಡುವ ಸಂಕಲನಕಾರನ ಬದುಕು-ಬವಣೆ, ವೇದನೆ-ಸಾಧನೆ ಎಲ್ಲವನ್ನೂ “ಕಟ್ಟಿಂಗ್‌ ಶಾಪ್‌’ ಸಿನಿಮಾದಲ್ಲಿ ತಿಳಿಹಾಸ್ಯದ ಮೂಲಕ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪವನ್‌ ಭಟ್‌.

ಇದನ್ನೂ ಓದಿ:ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಸಿನಿಮಾ ರಂಗದಲ್ಲಿ ಪ್ರತಿನಿತ್ಯ ನೋಡುವ ತೆರೆಮರೆಯ ಹೀರೋವನ್ನು ತೆರೆಮುಂದೆ ತಂದಿರುವ ಚಿತ್ರತಂಡ ಪ್ರಯತ್ನ ಪ್ರಶಂಸನಾರ್ಹ. ಇಡೀ ಸಿನಿಮಾದ ಮೊದಲರ್ಧ ಕಾಲೇಜು ಲೈಫ್, ಆಸೆ-ಆಕಾಂಕ್ಷೆಗಳನ್ನು ಬೆನ್ನತ್ತುವ ಹುಡುಕರ ಹುಡುಕಾಟ, ಪೋಷಕರ ತೊಳಲಾಟ ಎಲ್ಲವನ್ನೂ ನವಿರಾದ ಹಾಸ್ಯದ ಮೂಲಕ ಲೈವ್ಲಿಯಾಗಿ ಕಟ್ಟಿಕೊಡಲಾಗಿದೆ.

Advertisement

ಸಿನಿಮಾದ ದ್ವಿತೀಯಾರ್ಧ ಸ್ವಲ್ಪ ಗಂಭೀರ ವಾಗುತ್ತ, ತಿರುವುಗಳನ್ನು ಪಡೆದುಕೊಂಡು ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. “ಕಟ್ಟಿಂಗ್‌ ಶಾಪ್‌’ನಲ್ಲಿ ದ್ವಿತೀಯಾರ್ಧದ ಕೆಲ ಸನ್ನಿವೇಶಗಳಿಗೆ “ಕಟ್ಟಿಂಗ್‌’ ಅಗಿದ್ದರೆ, “ಶಾಪ್‌’ನಲ್ಲಿ ಚಿತ್ರಕಥೆ ಇನ್ನಷ್ಟು ವೇಗವಾಗಿ ಸಾಗುವ ಸಾಧ್ಯತೆಗಳಿದ್ದವು.

ಇನ್ನು ನಾಯಕ ಪ್ರವೀಣ್‌, ನಾಯಕಿ ಅರ್ಚನಾ, ದೀಪಕ್‌ ಭಟ್‌, ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ವತ್ಸಲಾ, ಉಮೇಶ್‌ ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತೆರೆಮೇಲೆ ಗಮನ ಸೆಳೆಯುತ್ತಾರೆ. ಒಂದಷ್ಟು ರಂಜನೆ, ಅಲ್ಲಲ್ಲಿ ಬೋಧನೆ ಜೊತೆಗೆ ತೆರೆಗೆ ಬಂದಿರುವ “ಕಟ್ಟಿಂಗ್‌ ಶಾಪ್‌’ನಲ್ಲಿ ಮಿನಿಮಂ ಮನರಂಜನೆ ಗ್ಯಾರಂಟಿ ಎನ್ನಲು ಅಡ್ಡಿಯಿಲ್ಲ.

ಜಿ. ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next