ಮೂರು ವಿಭಿನ್ನ ಗೆಟಪ್‌ಗ್ಳಲ್ಲಿ ಕಾಣುವ ನಾಯಕ ಮೂವರು ನಾಯಕಿಯರನ್ನೂ ಒಲಿಸಿಕೊಳ್ಳುತ್ತಾನೆ. ಮೂವರ ಜೊತೆಗೂ ಮಾತುಕತೆ, ಸಾಂಗ್, ಡ್ಯಾನ್ಸ್, ಕಾಮಿಡಿ ಎಲ್ಲವೂ ಆಗುತ್ತದೆ. ಈ ಮಧ್ಯೆಯಲ್ಲಿ ಹೀರೋ ಸೂಪರ್ ಮ್ಯಾನ್ ಆಗುತ್ತಾನೆ, ಬಾಬಾ ಆಗುತ್ತಾನೆ. ಅದಕ್ಕೆಲ್ಲ ಕಾರಣ 25 ವರ್ಷಗಳ ಹಿಂದಿನ ರಿವೇಂಜ್ ಸ್ಟೋರಿ. ಒಬ್ಬನೇ ವ್ಯಕ್ತಿ ಹೇಗೆ ಇಷ್ಟೆಲ್ಲ ಅವತಾರವೆತ್ತಿ ಎದುರಾಳಿಗಳಿಗೆ ಅವಾಂತರ ಮಾಡುತ್ತಾನೆ ಅನ್ನೋದು “ಅಬ್ಬರ’ ಸಿನಿಮಾದ ಕಥಾವಸ್ತು. ಅದು ತೆರೆಮೇಲೆ ಹೇಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಖಂಡಿತವಾಗಿಯೂ ಥಿಯೇಟರ್‌ನಲ್ಲಿ ಈ ವಾರ ತೆರೆಗೆ ಬಂದಿರುವ “ಅಬ್ಬರ’ಕ್ಕೆ ಮುಖಮಾಡಿ ಕೂರಬಹುದು.
“ಅಬ್ಬರ’ ಎಂಬ ಟೈಟಲ್ ಇಟ್ಟುಕೊಂಡ ಮೇಲೆ ಸಿನಿಮಾದಲ್ಲಿ ಎಲ್ಲವೂ “ಅಬ್ಬರ’ವಾಗಿರಬಹುದು ಎಂಬುದು ಪ್ರೇಕ್ಷಕರ ಸಾಮಾನ್ಯ ನಿರೀಕ್ಷೆ. ಆ ನಿರೀಕ್ಷೆಯನ್ನು ಈಡೇರಿಸಲು ನಿರ್ದೇಶಕ ರಾಮ್ ನಾರಾಯಣ್ ತಮ್ಮ ಶಕ್ತಿಮೀರಿ ಪರಿಶ್ರಮ ಹಾಕಿರುವುದು ತೆರೆಮೇಲೆ ಕಾಣುತ್ತದೆ. ನಾಯಕ ಪ್ರಜ್ವಲ್ ದೇವರಾಜ್‌ಗೆ ಮೂವರು ಹೀರೋಯಿನ್ಸ್, ನಾಲ್ಕಾರು ವಿಲನ್ಸ್, ಡಜನ್‌ನಷ್ಟು ಸಪೋರ್ಟಿಂಗ್ ಆರ್ಟಿಸ್ಟ್ ಹೀಗೆ ಬೃಹತ್ ಕಲಾವಿದರ “ಅಬ್ಬರ’ ಒಂದೆಡೆಯಾದರೆ, ಅದಕ್ಕೆ ತಕ್ಕಂತೆ ಬ್ಯಾಕ್ ಟು ಬ್ಯಾಕ್ ಫೈಟ್ಸ್, ಖಡಕ್ ಡೈಲಾಗ್ಸ್, ಮಾಸ್ ಸಾಂಗ್ಸ್, ಮಸ್ತ್ ಡ್ಯಾನ್ಸ್ “ಅಬ್ಬರ’ ಮತ್ತೂಂದು ಕಡೆ. ಇದಿಷ್ಟೂ “ಅಬ್ಬರ’ ಸಿನಿಮಾದ ಹೈಲೈಟ್ಸ್ ಎಂದರೂ ತಪ್ಪಾಗಲಾರದು.
ಇನ್ನು ನಾಯಕ ಪ್ರಜ್ವಲ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿಮಿಕಾ ರತ್ನಾಕರ್, ಲೇಖಾಚಂದ್ರ ಮತ್ತು ರಾಜಶ್ರೀ ಮೂವರೂ ಹೀರೋಯಿನ್ಸ್ ಕೂಡ ಅಂದ ಮತ್ತು ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಮೂವರಿಗೂ ಪ್ರತ್ಯೇಕ ಹಾಡು ಕೊಟ್ಟು ಪ್ರಜ್ವಲ್ ಜೊತೆ ಹೆಜ್ಜೆ ಹಾಕಲು “ಸಮಾನ’ ಅವಕಾಶ ನೀಡಿದ್ದಾರೆ ನಿರ್ದೇಶಕರು. ಖಳನಟನಾಗಿ ರವಿಶಂಕರ್, ಶೋಭರಾಜ್, ಕೋಟೆ ಪ್ರಭಾಕರ್ ತಮ್ಮ ಪಾತ್ರಕ್ಕೆ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಹಾಡುಗಳು ಕಿವಿಯಲ್ಲಿ ಹೆಚ್ಚು ಹೊತ್ತು ಕೂರದಿದ್ದರೂ, ಸಿನಿಮಾದ ಛಾಯಾಗ್ರಹಣ ಮತ್ತು ಸಂಕಲನ ತಾಂತ್ರಿಕ ಕಾರ್ಯಗಳು ಕಣ್ತುಂಬಿಕೊಳ್ಳುವಂತಿದೆ.
ಮಾಸ್ ಆಡಿಯನ್ಸ್‌ಗೆ ಒಪ್ಪುವಂಥ ಕಥೆಯ ಎಳೆಯೊಂದಿಗೆ ಪಕ್ಕಾ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಪ್ಯಾಕೇಜ್‌ನಂತಿರುವ “ಅಬ್ಬರ’ವನ್ನು ಒಮ್ಮೆ ನೋಡಿಬರಬಹುದು.
ಜಿ.ಎಸ್.ಕಾರ್ತಿಕ ಸುಧನ್