ಯುದ್ಧ ಮತ್ತು ನಿಶ್ಯಬ್ದ ಒಟ್ಟಿಗೆ ಇರಲು ಸಾಧ್ಯವೇ? ಇವೆರಡೂ ವಿರುದ್ಧ ಸಂಗತಿಗಳು. ಹೀಗಿರುವಾಗ ಎರಡೂ ಒಟ್ಟಿಗೆ ಇರಲು ಹೇಗೆ ಸಾಧ್ಯ ಎಂದರೆ, ಇಲ್ಲೊಂದು ತಂಡ ಎರಡೂ ಒಟ್ಟಿಗೆ ಇರಲು ಸಾಧ್ಯ ಎನ್ನುತ್ತಿದೆ. ಅದು ಹೇಗೆ ಅನ್ನೋದನ್ನ ತೆರೆಮೇರೆ ತೋರಿಸುತ್ತಿದೆ. ಹೌದು, ಯುದ್ಧ ಮತ್ತು ನಿಶ್ಯಬ್ದ ಎಂಬ ಎರಡು ವಿರುದ್ದ ಸಂಗತಿಗಳನ್ನೆ ಇಟ್ಟುಕೊಂಡು ಇಲ್ಲೊಂದು ಹೊಸಬರ ತಂಡ “ಒಮ್ಮೆ ಯುದ್ಧ ಒಮ್ಮೆ ನಿಶ್ಯಬ್ದ’ ಎನ್ನುವ ಹೆಸರಿನಲ್ಲಿ ಚಿತ್ರವನ್ನು ತೆರೆಗೆ ತರುತ್ತಿದೆ.
ಅಂದಹಾಗೆ, ಇಲ್ಲಿ ಯುದ್ದ ಮತ್ತು ನಿಶ್ಯಬ್ದ ಎಂದರೆ ಎಲ್ಲೋ ಹೊರಗಡೆ ನಡೆಯುವಂಥದ್ದಲ್ಲ. ಇದು ಮನುಷ್ಯನ ಮನಸ್ಸಿನೊಳಗೇ ನಡೆಯುವಂಥದ್ದು. ಮನಸ್ಸಿನ ಒಳಗೆ ನಡೆಯುವಂಥ ಇಂಥ ತಲ್ಲಣಗಳನ್ನು ಚಿತ್ರತಂಡ ಸೈಕಲಾಜಿಕಲ್ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ದೃಶ್ಯಗಳ ಮೂಲಕ ತೆರೆಮೇಲೆ ಹೇಳುತ್ತಿದೆ. ಇದೇ ವಾರ ಒಮ್ಮೆ ಯುದ್ಧ ಒಮ್ಮೆ ನಿಶ್ಯಬ್ದ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಚಿತ್ರತಂಡ ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿದೆ.
“ಮೂಕ ಮತ್ತು ಕಿವುಡು ಹುಡುಗಿಯೊಬ್ಬಳು ತನ್ನ ಬದುಕಿಗಾಗಿ, ಅಸ್ತಿತ್ವಕ್ಕಾಗಿ ಹೇಗೆ ಹೋರಾಡುತ್ತಾಳೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಸೈಕಲಾಜಿಕಲ್ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಸಾಗುವ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್ ಹೀಗೆ ಎಲ್ಲಾ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಕೂಡ ಇದೆ’ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಾಯಕ ನಟಿ ಸಂಯುಕ್ತ ಹೆಗ್ಡೆ ಮೂಕ ಮತ್ತು ಕಿವುಡು ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಪ್ರಭು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ರಾಮಕೃಷ್ಣ, ಸುಶ್ಮಿತಾ, ಅರವಿಂದ್ ರಾವ್ ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕಳೆದ ವರ್ಷ ನಿಧನರಾದ ಹಿರಿಯ ನಟ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಂಧ್ರ ಮೂಲದ ನಿರ್ಮಾಪಕ ಪ್ರವೀಣ್ ರಾಜ್ ಮತ್ತು ವಿ.ವಿ.ಎನ್.ವಿ ಸುರೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಕಿರಣ್ ವಾರಣಾಸಿ ಸಂಗೀತ ಸಂಯೋಜಿಸಿದ್ದು, ಕಾಂಚನ್ ಕೌಸ್ತುಭ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್ ಸೂಧ ಸಂಭಾಷಣೆ, ಕಲ್ಯಾಣ್ ಸಮಿ ಛಾಯಾಗ್ರಹಣ, ಸುರೇಶ್ ಕುಮಾರ್ ಸಂಕಲನವಿದೆ. ಚಿತ್ರದ ಸಾಹಸ ದೃಶ್ಯಗಳಿಗೆ ಕೌರವ ವೆಂಕಟೇಶ್ ಸಾಹಸ ಸಂಯೋಜಿಸಿದ್ದಾರೆ. ಚಿಕ್ಕಮಗಳೂರು, ಉಡುಪಿ, ಕೊಡಗು, ಹೈದರಬಾದ್ ಮೊದಲಾದ ಕಡೆಗಳಲ್ಲಿ ಒಮ್ಮೆ ಯುದ್ಧ ಒಮ್ಮೆ ನಿಶ್ಯಬ್ದ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಹಿಂದೆ ನಿತ್ಯ ಜೊತೆ ಸತ್ಯ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಾಗ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿತರಕ ವೆಂಕಟ್ ಚಿತ್ರದ ಬಿಡುಗಡೆಯ ಹೊಣೆಯನ್ನು ವಹಿಸಿಕೊಂಡಿದ್ದು, ಚಿತ್ರವನ್ನು ಸುಮಾರು 130 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರಲಾಗುತ್ತಿದೆ.
– ಜಿ.ಎಸ್.ಕಾರ್ತಿಕ ಸುಧನ್