Advertisement

ಕನ್ನಡದ ಮೆರವಣಿಗೆ ಪಾಠ ತೆಗೆದು ಸಿದ್ಧಾರೂಢರ ಜಾತ್ರೆ ಸೇರ್ಪಡೆ

01:36 PM Jun 06, 2022 | Team Udayavani |

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿಯು 6ನೇ ತರಗತಿ ಕನ್ನಡ ಪಾಠದಲ್ಲಿ ಕನ್ನಡ ರಾಜ್ಯೋತ್ಸವ ಸಂಬಂಧಿಸಿದ “ಮೆರವಣಿಗೆ’ ಪಾಠವನ್ನು ಕೈಬಿಟ್ಟು ಹುಬ್ಬಳ್ಳಿಯ “ಸಿದ್ಧಾರೂಢ ಜಾತ್ರೆ’ ಪಾಠವನ್ನು ಸೇರ್ಪಡೆ ಮಾಡಿರುವುದು ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.

Advertisement

ಮೆರವಣಿಗೆ ಪಾಠದಲ್ಲಿದ್ದ ಕೆಂಪು, ಹಳದಿ ಬಣ್ಣದ ಕನ್ನಡ ಬಾವುಟ ತೆಗೆದು ಕೇಸರಿ ಬಣ್ಣವಿರುವ ಬಾವುಟ ಸೇರ್ಪಡೆ ಮಾಡಲಾಗಿದೆ. ಪಾಠದಲ್ಲಿ ಬರುವ ವಿದ್ಯಾರ್ಥಿಗಳ ಹೆಸರನ್ನು ಹಿಂದೂ-ಮುಸ್ಲಿಂ ಧರ್ಮೀಯರ ಹೆಸರು ಇಡಲಾಗಿದೆ. 6ನೇ ತರಗತಿಯ ಸಿರಿಗನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ 6ನೇ ಗದ್ಯವಾಗಿ “ಮೆರವಣಿಗೆ’ ಪಾಠ ವಿತ್ತು. ಈ ಪಾಠವು ಕನ್ನಡ ರಾಜ್ಯೋತ್ಸವಕ್ಕಾಗಿ ನಡೆಯುವ ಸಿದ್ಧತೆ ಕುರಿತು ಮಕ್ಕಳಿಗೆ ತಿಳಿಸುವ ಪಾಠವಾಗಿತ್ತು. ರಾಜ್ಯೋತ್ಸವದ ಮಹತ್ವ ತಿಳಿಸುವುದು, ತಾಯಿ ಭುವನೇಶ್ವರಿಯ ಆರಾಧನೆ, ಜಯಘೋಷ, ರಾಜ್ಯೋತ್ಸವ ಆಚರಣೆ ಹೇಗೆ? ಮೆರವಣಿಗೆ ಹೇಗೆ ನಡೆಯಲಿದೆ ಎಂಬ ವಿವರಗಳನ್ನು ಒಳಗೊಂಡಿತ್ತು.

ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ತಿಳಿಸುವುದಕ್ಕಾಗಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು “ಮೆರವಣಿಗೆ’ ಪಾಠವನ್ನು ಸೇರಿಸಿತ್ತು. ಆದರೆ, ಚಕ್ರತೀರ್ಥ ಸಮಿತಿಯು “ಸಿದ್ಧಾರೂಢರ ಜಾತ್ರೆ’ಯನ್ನು ಸೇರಿಸಿದ್ದಾರೆ. ಹುಬ್ಬ ಳ್ಳಿಯ ಸಿದ್ಧಾರೂಢ ಮಠದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆಯ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ.

ಕನ್ನಡ ಬಾವುಟ ತೆಗೆದು ಕೇಸರಿ ಬಾವುಟ:
ಪಾಠದಲ್ಲಿ ರುಸ್ತುಂ ಎಂಬ ಹುಡುಗ ಸಿದ್ಧಾರೂಢರ ಕುರಿತು ವಿವರಿಸು ತ್ತಾನೆ. ನಂತರ ಹಸೀನಾ ಎಂಬ ವಿದ್ಯಾರ್ಥಿನಿ ಮಠದ ಬಗ್ಗೆ ಕೇಳುತ್ತಾಳೆ. ಇಲ್ಲಿ ಕನ್ನಡ ಪಾಠವನ್ನು ತೆಗೆದು ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ಹೆಸರು ಸೇರಿಸಲಾಗಿದೆ. ಅಲ್ಲದೆ, ಮೆರವಣಿಗೆಯಲ್ಲಿದ್ದ ಕನ್ನಡ ಬಾವುಟವನ್ನು ತೆಗೆದು ಸಿದ್ಧಾರೂಢರ ಜಾತ್ರೆ ಪೋಟೋ ಹಾಕಲಾಗಿದ್ದು, ಜಾತ್ರೆಯಲ್ಲಿ ಜನರು ಕೇಸರಿ ಬಾವುಟ ಹಿಡಿದಿರುವ ಫೋಟೋಗಳನ್ನು ಸೇರ್ಪಡೆ ಮಾಡಲಾಗಿದೆ. ಈ ವಿಚಾರಗಳು ಪಠ್ಯಪುಸ್ತಕವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next