Advertisement

ಕೋಟ ಹೋಬಳಿಯಲ್ಲಿ ಆರಂಭವಾದ ಪ್ರಥಮ ಶಾಲೆಗೀಗ 139 ವರ್ಷ

11:13 PM Dec 08, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕೋಟ: ಕೋಟ ಹೋಬಳಿಯಲ್ಲಿ ಪ್ರಥಮವಾಗಿ ಆರಂಭವಾದ ಪ್ರೌಢ ಪ್ರಾಥಮಿಕ ಶಾಲೆ ಎನ್ನುವ ಕೀರ್ತಿ ಕಾರ್ಕಡ ಶಾಲೆಗಿದೆ. 1880ರಲ್ಲಿ ಐರೋಡಿ ಸೀತಾರಾಮ್‌ ಉಡುಪರು ಐಗಳ ಮಠವಾಗಿ ಈ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಈಗಿನ ಕಾರ್ಕಡ ರಸ್ತೆಯಲ್ಲಿ ನೂರು ಮೀಟರ್‌ ದೂರದಲ್ಲಿ ಹುಲ್ಲಿನ ಛಾವಣಿಯ ಪರ್ಣಕುಟೀರದಂತಹ ವಾತಾವರಣದಲ್ಲಿ ಶಾಲೆ ಕಾರ್ಯಾರಂಭಗೊಂಡಿತ್ತು. ಅನಂತರ 14 ವರ್ಷಗಳ ಬಳಿಕ ಗುಂಡ್ಮಿ ಕೃಷ್ಣ ಐತಾಳರ ಜಾಗಕ್ಕೆ ಶಾಲೆ ಸ್ಥಳಾಂತರಗೊಂಡಿತ್ತು ಹಾಗೂ 1892ರಲ್ಲಿ ಪ್ರಾಥಮಿಕ ಬೋರ್ಡ್‌ಶಾಲೆಯಾಗಿ ಮಾನ್ಯತೆ ಪಡೆದಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರ ಕನ್ನಡ ಗುರುಗಳಾಗಿದ್ದ ದಿ| ಐರೋಡಿ ಶಿವರಾಮಯ್ಯನವರು 1885ರಲ್ಲಿ ಈ ಶಾಲೆಗೆ ಸುವ್ಯ ವಸ್ಥಿತ ಕಟ್ಟಡವನ್ನು ಕಟ್ಟಿದ್ದರು. 18 ಗ್ರಾಮದ ಸಾವಿರಾರು ಮಕ್ಕಳು ಇಲ್ಲಿ ವಿದ್ಯಾರ್ಜನೆಗಾಗಿ ಬರುತ್ತಿದ್ದರು.

ಪ್ರಸ್ತುತ ಚಿತ್ರಣ
ಅಂದಿನ ಶಿಕ್ಷಕರಾದ ಜಿ. ಮಾದಪ್ಪಯ್ಯ ಮಯ್ಯ, ಪಿ.ವೆಂಕಪ್ಪಯ್ಯ ಮಧ್ಯಸ್ಥ, ಕೆ.ನಾಗಪ್ಪ ಉಪಾಧ್ಯ, ಪಿ. ಕೃಷ್ಣ ಉಪಾಧ್ಯ, ಶಿವರಾಮ ಮಧ್ಯಸ್ಥ, ಐ.ಕೃಷ್ಣ ಉಡುಪ, ಆನಂತಯ್ಯ ಹೊಳ್ಳ, ವಾಮನ ಪಡಿಯಾರು, ಶಿವರಾಮ ನಾವುಡ, ಗಂಗಾಧರ ಐತಾಳ, ಮೋನಪ್ಪ ಶೆಟ್ಟಿ ಮುಂತಾದವರು ಪ್ರಸಿದ್ಧ ಶಿಕ್ಷಕರಾಗಿದ್ದರು ಹಾಗೂ ಐತ ನಾೖರಿ, ಸುಬ್ರಾಯ ಭಟ್‌, ಹರಿಕೃಷ್ಣ ಮಯ್ಯ, ಪ್ರೇಮಾಕ್ಷಿ, ವೀಣಾ, ರಂಗಯ್ಯ ಅಡಿಗ, ರಾಮಚಂದ್ರ ಐತಾಳ, ಚಂದ್ರಶೇಖರ ಶೆಟ್ಟಿ, ಶ್ರೀಮತಿ ಟೀಚರ್‌, ಜಯರಾಮ ಶೆಟ್ಟಿ, ಸಂಜೀವಿನಿ, ಲೀಲಾವತಿ, ಮಂಜುನಾಥ ನಾೖಕ್‌, ಲಿಲ್ಲಿ ಮಂತಾದವರು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಶಾಲೆಯಲ್ಲಿ ಪ್ರಸ್ತುತ 62 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಮೂವರು ಶಿಕ್ಷಕಿಯರು, ಓರ್ವ ಗೌರವ ಶಿಕ್ಷಕಿ, ಅತಿಥಿ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಮ್ಮೆಯ ಹಳೆವಿದ್ಯಾರ್ಥಿಗಳು
ಕಂಪ್ಯೂಟರ್‌ ಶಿಕ್ಷಣ, ವಾಹನ ವ್ಯವಸ್ಥೆ ಇಲ್ಲಿದೆ ಹಾಗೂ ಅರುಣ್‌ ಅಡಿಗರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಲೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಾಮಚಂದ್ರ ಉಡುಪ, ಯು.ನಾಗಪ್ಪ ಐತಾಳ, ಪಿ.ಸುಬ್ರಹ್ಮಣ್ಯ ಉಪಾಧ್ಯ, ಎಚ್‌.ಶ್ರೀಧರ ಹಂದೆ, ಕೆ.ಶ್ರೀನಿವಾಸ ಉಡುಪ, ಜಿ.ವಿಷ್ಣುಮೂರ್ತಿ ಭಟ್‌ ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಜತೆಗೆ ಶಿಕ್ಷಣದ ಕ್ಷೇತ್ರದ ಸಾಧಕ ಪ್ರೊ| ಕೆ.ಆರ್‌.ಹಂದೆ, ಮಹಾಬಲೇಶ್ವರ ಹೊಳ್ಳ, ಎಂ.ಟಿ.ಆರ್‌.ಸಂಸ್ಥೆಯ ಸ್ಥಾಪಕ ಯಜ್ಞಮಯ್ಯ, ಡಿವೈನ್‌ಪಾರ್ಕ್‌ನ ಮುಖ್ಯಸ್ಥ ಡಾ| ಚಂದ್ರಶೇಖರ್‌ ಉಡುಪ, ಡಾ| ವಿವೇಕ ಉಡುಪ, ಕರ್ನಾಟಕ ಸರಕಾರದ ಅಂಕಿಅಂಶ ವಿಭಾಗದ ನಿರ್ದೇಶಕರಾಗಿದ್ದ ಕೆ.ವಿ.ಸುಬ್ರಹ್ಮಣ್ಯ ಸೋಮಯಾಜಿ, ಉದ್ಯಮಿ ಸಿ.ಎಂ.ಎ. ಪೈ , ಬೆಂಗಳೂರು ಶೇಖರ್‌ ಆಸ್ಪತ್ರೆಯ ಡಾ|ಪಿ.ವಿಷ್ಣುಮೂರ್ತಿ ಐತಾಳ ಸೇರಿದಂತೆ ವಿವಿಧ ಕ್ಷೇತ್ರಗಳ ಸಾವಿರಾರು ಮಂದಿ ಸಾಧಕರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

Advertisement

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತರು ವಾಸವಿದ್ದ ಸಾಲಿಗ್ರಾಮದ ಸುಹಾಸ ಮನೆಯ ಎದುರುಗಡೆಯೇ ಈ ಶಾಲೆ ಇದೆ. ಹೀಗಾಗಿ ಕಾರಂತರು ಸದಾ ಶಾಲೆಗೆ ಭೇಟಿ ನೀಡುತ್ತಿದ್ದರು. ಹೀಗಾಗಿ 1998ರಲ್ಲಿ ನಡೆದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮಿತಿಯ ಗೌರವಾಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದರು. ಅವರು ಶಾಲೆಯ ಆವರಣದಲ್ಲಿ ನೆಟ್ಟ ಸಸಿಯೊಂದು ಈಗ ಬೆಳೆದು ಹೆಮ್ಮರವಾಗಿದೆ.

ಶತಮಾನ ಕಂಡ ಶಾಲೆಯಾಗಿದ್ದು ಇದೀಗ ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು, ಊರಿನವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಮುಂದೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
-ಲಲಿತಾ, ಮುಖ್ಯ ಶಿಕ್ಷಕಿ

ಸರಳ ಭಾಷೆಯಲ್ಲಿ ಜೀವನ ಮೌಲ್ಯ ಕಲಿಸಿ ಕೊಟ್ಟ ಶಾಲೆ ಇದು. ನಮಗೆ ಕಲಿಸಿದ ಗುರುಗಳು ಸದಾ ಪ್ರಾತಃಸ್ಮರಣೀಯರು. ಇಲ್ಲಿನ ಹಳೆ ವಿದ್ಯಾರ್ಥಿ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ..
-ಡಾ| ಚಂದ್ರಶೇಖರ್‌ ಉಡುಪ ಡಿವೈನ್‌ಪಾರ್ಕ್‌,
ಹಳೆ ವಿದ್ಯಾರ್ಥಿ

-  ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next