ವಿದೇಶಗಳಲ್ಲಿ ಈಗ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿರೋದೇನೂ ದೊಡ್ಡ ವಿಷಯವಲ್ಲ. ಬಹುತೇಕ ಸಿನಿಮಾಗಳು ಇಲ್ಲಿ ಬಿಡುಗಡೆಯಾದ ಒಂದೆರಡು ವಾರದೊಳಗಡೆ ವಿದೇಶಗಳಲ್ಲಿ ಬಿಡುಗಡೆಯಾಗುತ್ತವೆ. ಆದರೆ, ಟ್ರೇಲರ್ ಬಿಡುಗಡೆಯಾಗೋದು ಮಾತ್ರ ಅಪರೂಪ. ಅಂತಹ ಒಂದು ಅಪರೂಪಕ್ಕೆ ಈಗ ಕನ್ನಡ ಸಿನಿಮಾವೊಂದು ಸಾಕ್ಷಿಯಾಗಿದೆ. ಅದು “ರಾಜು ಕನ್ನಡ ಮೀಡಿಯಂ’.
ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡಿತ್ತು. ಈಗ ವಿದೇಶಗಳಲ್ಲೂ “ರಾಜು ಕನ್ನಡ ಮೀಡಿಯಂ’ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಯುಎಸ್‌ಎನಲ್ಲಿ “ಪುಷ್ಪಕ ವಿಮಾನ’ ಸಿನಿಮಾ ಜೊತೆಗೆ “ರಾಜು ಕನ್ನಡ ಮೀಡಿಯಂ’ ಟ್ರೇಲರ್ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ವಿದೇಶಗಳಲ್ಲಿರುವ ಕನ್ನಡಿಗರು ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವ ಮೂಲಕ ಅಲ್ಲೂ ಕನ್ನಡ ಸಿನಿಮಾಗಳು ಚೆನ್ನಾಗಿ ಹೋಗುತ್ತಿವೆ. ಅದರ ಜೊತೆಗೆ ಮುಂದೆ ಬಿಡುಗಡೆಯಾಗಲಿರುವ ಸಿನಿಮಾಗಳ ಬಗೆಗಿನ ಮಾಹಿತಿ ಅವರಿಗೆ ಸಿಕ್ಕರೆ ಸಿನಿಮಾಕ್ಕೆ ಮತ್ತಷ್ಟು ಸಹಾಯವಾಗುತ್ತದೆಂಬ ಉದ್ದೇಶದಿಂದ ಚಿತ್ರತಂಡ ವಿದೇಶಗಳಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಿದೆಯಂತೆ. ಈಗಾಗಲೇ “ರಾಜು ಕನ್ನಡ ಮೀಡಿಯಂ’ ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿರುವುದರಿಂದ ಚಿತ್ರತಂಡ ಖುಷಿಯಾಗಿದೆ.
ಅಂದಹಾಗೆ, ಈ ಚಿತ್ರವನ್ನು ನರೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾದ ನರೇಶ್ ಈಗ ಮತ್ತೂಮ್ಮೆ ಗುರುನಂದನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಗುರುನಂದನ್ ಕೂಡಾ “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ಮೂಲಕ ಗುರುತಿಸಿಕೊಂಡವರು. ಇನ್ನು, ಕೆ.ಎ.ಸುರೇಶ್ ಈ ಸಿನಿಮಾದ ನಿರ್ಮಾಪಕರು.
* ಯುಎಸ್‌ಎನಲ್ಲಿ “ಪುಷ್ಪಕ ವಿಮಾನ’ ಸಿನಿಮಾ ಜೊತೆಗೆ ರಾಜು ಕನ್ನಡ ಮೀಡಿಯಂ ಟ್ರೇಲರ್ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.