“ಭಾರೀ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ, ಒಂದು ಚೂರು ಬಯ್ಯೋದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ…’ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಶ್ಮಿಕಾ ಮಂದಣ್ಣ ಜೋಡಿಯಾಗಿ ಹೆಜ್ಜೆ ಹಾಕಿದ್ದ “ಅಂಜನಿಪುತ್ರ’ ಸಿನಿಮಾದ ಹಾಡನ್ನು ಈಗಲೂ ಅದೆಷ್ಟೋ ಮಂದಿ ಗುನುಗುತ್ತಲೇ ಇರುತ್ತಾರೆ. “ಚೆಂದ ಚೆಂದ ಚೆಂದ ನನ್° ಹೆಂಡ್ತಿ…’ ಅಂಥ ಗುನುಗುವ ಚೆಂದದ ಗೀತೆಯನ್ನು ಹೀಗೆ ಅಕ್ಷರದಲ್ಲಿ ಪೋಣಿಸಿದವರು ಗೀತ ಸಾಹಿತಿ ಪ್ರಮೋದ್ ಮರವಂತೆ.
ಕುಂದಾಪುರದ ಮರವಂತೆ ಮೂಲದ ಪ್ರಮೋದ್ ಓದಿದ್ದು ಮೆಕ್ಯಾನಿಲ್ ಇಂಜಿನಿಯರಿಂಗ್. ಆದರೂ ಕೈಯಲ್ಲಿ ಹಿಡಿದ್ದು ಪೆನ್ನು. ಉದ್ಯೋಗವನ್ನು ಅರಸಿ ಬೆಂಗಳೂರಿಗೆ ಬಂದ ಪ್ರಮೋದ್, ಒಂದೆರಡು ವರ್ಷ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ, ಬಳಿಕ ಮುಖ ಮಾಡಿದ್ದು ಚಿತ್ರರಂಗದತ್ತ. ಮೊದಲಿನಿಂದಲೂ ಸಾಹಿತ್ಯದ ಕಡೆಗಿದ್ದ ಆಸಕ್ತಿ, ಬರವಣಿಗೆಯ ಹುಚ್ಚು ಪ್ರಮೋದ್ ಅವರ ಒಳಗಿದ್ದ ಅಜ್ಞಾತವಾಸಿ ಸಾಹಿತಿಯನ್ನು ನಿಧಾನವಾಗಿ ಚಿತ್ರರಂಗದಲ್ಲಿ ಪರಿಚಯಿಸುತ್ತ ಹೋಯಿತು.
ಆರಂಭದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರ್ ಗರಡಿಯಲ್ಲಿ 2-3 ಚಿತ್ರಗಳಿಗೆ ಸಂಭಾಷಣಾ ಕಾರರಾಗಿ ಕೆಲಸ ನಿರ್ವಹಿಸಿದ್ದ ಪ್ರಮೋದ್, ಆನಂತರ ರವಿ ಬಸ್ರೂರು ಸಂಗೀತ ಸಂಯೋಜನೆಯ ಕೆಲ ಗೀತೆಗಳಿಗೆ ಸಾಲುಗಳನ್ನು ಬರೆಯುವ ಮೂಲಕ ಗೀತ ಸಾಹಿತಿಯಾದರು. ಒಂದಷ್ಟು ಗೀತೆಗಳನ್ನು, ಹನಿಗವನ, ಸಣ್ಣ ಕಥೆಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಮಂದಿಯ ಗಮನ ಸೆಳೆದಿದ್ದ ಪ್ರಮೋದ್ ಮರವಂತೆ ಅವರನ್ನು ಚಿತ್ರರಂಗದಲ್ಲಿ ದೊಡ್ಡದಾಗಿ ಗುರುತಿಸುವಂತೆ ಮಾಡಿದ್ದು, 2017ರಲ್ಲಿ ತೆರೆಕಂಡ “ಅಂಜನಿಪುತ್ರ’ ಸಿನಿಮಾದ “ಚೆಂದ ಚೆಂದ ಚೆಂದ ನನ್ ಹೆಂಡ್ತಿ…’ ಹಾಡು.
“ಅಂಜನಿಪುತ್ರ’ ಸಿನಿಮಾದ ಬಳಿಕ “ಮುಂದಿನ ನಿಲ್ದಾಣ’, “ಇನ್ಸ್‌ಸ್ಪೆಕ್ಟರ್ ವಿಕ್ರಂ’, “ಸಖತ್’, “ಡಿಯರ್ ಸತ್ಯ’, “ಮಾನ್ಸೂರ್ ರಾಗ’, “ದೂರದರ್ಶನ’, “ತಿಮ್ಮಯ್ಯ ತಿಮ್ಮಯ್ಯ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಾಲು ಸಾಲು ಗುನುಗುವ ಸುಮಾರು ನೂರಕ್ಕೂ ಹೆಚ್ಚು ಸಿನಿಮಾ ಮತ್ತು ಐವತ್ತಕ್ಕೂ ಹೆಚ್ಚು ಹಾಡುಗಳನ್ನು ನೀಡಿದ ಪ್ರಮೋದ್ ಅವರಿಗೆ ಮತ್ತೂಂದು ದೊಡ್ಡ ಬ್ರೇಕ್ ನೀಡಿದ್ದು “ಕಾಂತಾರ’ ಸಿನಿಮಾದ “ಸಿಂಗಾರ ಸಿರಿಯೇ…’ ಹಾಡು. “ಕಾಂತಾರ’ ಸಿನಿಮಾದಷ್ಟೇ ಸೂಪರ್ ಹಿಟ್ ಆಗಿರುವ ಈ ಹಾಡು ಪ್ರಮೋದ್ ಅವರನ್ನು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಗೀತ ಸಾಹಿತಿಗಳ ಸಾಲಿನಲ್ಲಿ ತಂದು ಕೂರಿಸಿದೆ.
ಸದ್ಯ “ಅಶೋಕ ಬ್ಲೇಡ್’, “ಗಣ’, “ಮಾಫಿಯಾ’, “ದಿ ಜಡ್ಜ್ಮೆಂಟ್’, “ಜಸ್ಟ್‌ಪಾಸ್’ ಹೀಗೆ ಪ್ರಮೋದ್ ಸಾಹಿತ್ಯದ ಡಜನ್‌ಗೂ ಹೆಚ್ಚು ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ.
ತಮ್ಮ ಜರ್ನಿಯ ಬಗ್ಗೆ ಮಾತನಾಡುವ ಪ್ರಮೋದ್, “ಯಾವುದೇ ಕ್ಷೇತ್ರವಾದರೂ ಅದರಲ್ಲಿ ಶೇಕಡ ನೂರರಷ್ಟು ಪ್ಯಾಷನ್ ಇದ್ದರೆ ಖಂಡಿತ ಆ ಕೆಲಸ ನಮ್ಮ ಕೈ ಹಿಡಿಯುತ್ತದೆ ಎಂಬುದು ನನ್ನ ನಂಬಿಕೆ’ ಎನ್ನುತ್ತಾರೆ.