ಅಜೆಕಾರು: ಹೆಬ್ರಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 30ರಂದು ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಡಿ ಅಧಿಕಾರಿ ವೇದಿಕೆಯಲ್ಲಿ ನಡೆಯಿತು. ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ ಮುನಿಯಾಲು ಗಣೇಶ್ ಶೆಣೈ ವಹಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯ ಹೆಸರು ಗಳಿಸಿದ್ದರೂ ಪುಸ್ತಕೋದ್ಯಮ ಬಡಕಲಾಗಿದೆ. ಬರಹಗಾರರು ಬರೆದ ಕೃತಿ ಪುಸ್ತಕವಾಗಿ ಪ್ರಕಟಗೊಳ್ಳಲು ಸರಕಾರ, ಕನ್ನಡ ಅಭಿಮಾನಿಗಳು ಮುಂದಾಗಬೇಕು ಎಂದರು.
ಉಡುಪಿ ಜಿಲ್ಲೆಯನ್ನು ಆಯುರ್ವೇದ ವಲಯ ಎಂದು ಘೋಷಣೆ ಮಾಡಬೇಕು ಎಂದು ಸರಕಾರ ವನ್ನು ಒತ್ತಾಯಿಸಿದರು. ಜತೆಗೆ ಆಯುರ್ವೇದದ ಜನ್ಯವಿಶ್ವವಿದ್ಯಾನಿಲಯ ಆಗಬೇಕು. ಉಡುಪಿ ಜಿಲ್ಲಾ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಚಿವ ಸುನಿಲ್ ಕುಮಾರ್ ಮಾತನಾಡಿ, ಭಾಷೆ ಮರೆತರೆ ನಾಗರಿಕತೆ ಉಳಿಯುವುದು ಅಸಾಧ್ಯ. ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ರಾಜ್ಯದಲ್ಲಿ ವ್ಯವಸ್ಥಿತವಾದ ಸಾಹಿತ್ಯ ಸಮ್ಮೇಳನವಾಗಿದೆ ಎಂದರು. ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಉದ್ಘಾಟಿಸಿ, ಕವಿಗೆ ಪ್ರಸಾರ ಮತ್ತು ಪ್ರಚಾರದ ಅಗತ್ಯವಿದೆ. ಯುವ ಸಾಹಿತಿಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭ ಮಂಜುನಾಥ ಶಿವಪುರ ಅವರ ಹಕ್ಕಿ ಮತ್ತು ವೇದಾಂತ ಹಾಗೂ ಸವಿತಾ ರತ್ನಾಕರ ಪೂಜಾರಿಯವರ ಅದೃಷ್ಟ ರೇಖೆ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಸಲ್ಲಿಸಿ ಕನ್ನಡ ಶಾಲೆಗಳು ಉಳಿಸಲು ಮನಸ್ಸುಗಳು ಒಂದಾಗಬೇಕು ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಸಂಧ್ಯಾ ಶೆಣೈ ಮಾತನಾಡಿ, ಕನ್ನಡ ಮನೆ ಮಾತಾಗಿ ಬೆಳೆಸಬೇಕು ಎಂದರು. ಸಂಜೀವಿನಿ ಫಾರ್ಮ್ ನ ರಾಮಕೃಷ್ಣ ಆಚಾರ್ಯ ಪುಸ್ತಕ ಮಳಿಗೆ ಉದ್ಘಾಟಿಸಿದರು. ಮೆರವಣಿಗೆ ಉದ್ಘಾಟಿಸಿದ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಯುವ ಸಮುದಾಯ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹೆಬ್ರಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಹೆಬ್ಟಾರ್, ಜಿ.ಪಂ. ಮಾಜಿ ಸದಸ್ಯೆ ಜ್ಯೋತಿ ಹರೀಶ್, ಕಾರ್ಕಳ ಕ.ಸಾ.ಪ. ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಕ.ರಾ.ವೇ. ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಕಾರ್ಕಳ ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ರಮಾನಂದ ಶೆಟ್ಟಿ, ಉಡುಪಿ ಕ.ಸಾ.ಪ. ಸಂಘಟನ ಕಾರ್ಯದರ್ಶಿ ಆನಂದ ಸಾಲಿಗ್ರಾಮ, ಉಡುಪಿ ಕ.ಸಾ.ಪ. ಗೌರವಾಧ್ಯಕ್ಷ ಮನೋಹರ ಪಿ., ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಮುನಿಯಾಲು ಸುರೇಶ್ ಪೂಜಾರಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಾ. ಚಂದ್ರಯ್ಯ, ಮುನಿಯಾಲು ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಮಂಜುನಾಥ ಆಚಾರ್ಯ, ಗೋಧಾಮದ ಆಡಳಿತ ನಿರ್ದೇಶಕಿ ಸವಿತಾ ರಾಮಕೃಷ್ಣ ಆಚಾರ್, ಯೋಗೀಶ್ ಭಟ್, ಹರೀಶ್ ಶೆಟ್ಟಿ. ಲೀಲಾವತಿ ಉಪಸ್ಥಿತರಿದ್ದರು. ಗೋಪಿನಾಥ ಭಟ್ ಅಧ್ಯಕ್ಷರನ್ನು ಪರಿಚಯಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಪೈ ಸ್ವಾಗತಿಸಿದರು. ಪ್ರಕಾಶ್ ಪೂಜಾರಿ, ಸುಹಾಸ್ ಶೆಟ್ಟಿ, ರಂಜಿತಾ ನಿರೂಪಿಸಿದರು. ಮಂಜುನಾಥ ಕುಲಾಲ್ ವಂದಿಸಿದರು.
ಪ್ರಕೃತಿ ಆರಾಧಿಸುವುದು ನಮ್ಮ ಸಂಸ್ಕೃತಿ
ಸ್ವಾತಂತ್ರ್ಯ ಅನಂತರ ನಮ್ಮ ಇತಿಹಾಸವನ್ನು ಸಂಪೂರ್ಣ ತಿರುಚಿ ಬರೆದು ಇಲ್ಲಿನ ಸಂಸ್ಕೃತಿ ಯನ್ನು ಹೀಯಾಳಿಸಲಾಯಿತು. ಇದನ್ನೇ ನಮ್ಮ ಮಕ್ಕಳಿಗೆ ಹೇಳಿಕೊಟ್ಟು ಮಕ್ಕಳನ್ನು ದಾರಿತಪ್ಪಿಸಲಾಗುತ್ತಿದೆ. ಜಗತ್ತಿಗೆ ನಾಯಕತ್ವ ನೀಡುವ ಗುಣ ಇರುವುದು ಭಾರತಕ್ಕೆ ಮಾತ್ರ. ನಮ್ಮ ಪ್ರತಿಭೆಗಳು ವಿಶ್ವದಾದ್ಯಂತ ಸೇವೆ ಮಾಡುತ್ತಿದ್ದಾರೆ. ಭಾರತೀಯರು ಗುಲಾಮಿ ಸಂಸ್ಕೃತಿ ಬಿಟ್ಟು ನೈಜ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು ಎಂದು ಮುನಿಯಾಲು ಗಣೇಶ್ ಶೆಣೈ ಹೇಳಿದರು.