Advertisement

ಕನ್ನಡ ಸಾಹಿತ್ಯ ಲೋಕದ ಹಾಸ್ಯ ರಸವರ್ಷಿಣಿ ಭುವನೇಶ್ವರಿ

04:19 PM Nov 28, 2017 | |

ಮಲೆನಾಡ ಮಡಿಲಿಂದ ನಮ್ಮೂರಿಗೆ ಬಂದು ಹಾಸ್ಯರಸದಲ್ಲಿ ನಮ್ಮೆಲ್ಲರನು ತೋಯಿಸಿ ನಮ್ಮವರೇ ಆದವರು, ಸಾಹಿತಿ, ಗೆಳತಿ ಭುವನೇಶ್ವರಿ ಹೆಗ್ಡೆ. ನನ್ನ ಮಂಗಳೂರನ್ನು, ಅಲ್ಲಿನ ಭಾಷೆಯನ್ನು, ಜನರನ್ನು, ನಗರ ಸಾರಿಗೆಯ ಬಸ್‌ಗಳನ್ನು, ನೆರೆ ಕರೆಯನ್ನು, ವಿದ್ಯಾರ್ಥಿಗಳನ್ನು ತಮ್ಮದಾಗಿಸಿಕೊಳ್ಳುವ ಯತ್ನದಲ್ಲಿ ಆರಂಭದ ದಿನಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ರಂಜನೀಯ ಲೇಖನಗಳಿಗೆ ಮಾರು ಹೋದವಳು ನಾನು. ಅವನ್ನು ಆಸ್ವಾದಿಸಿ ಪ್ರತಿಕ್ರಿಯಿಸುತ್ತಿದ್ದ  ನನ್ನನ್ನು ಹೃದಯಕ್ಕೆ ಹತ್ತಿರವಾಗಿಸಿಕೊಂಡವರು ಭುವನೇಶ್ವರಿ ಹೆಗ್ಡೆಯವರು. ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ಲೇಖನಗಳನ್ನು ಓದಿದ ಬೆನ್ನಿಗೆ ನನ್ನಿಂದ ಅವರಿಗೆ ಮೆಚ್ಚುನುಡಿಯ ಕರೆ ಹೋಗುತ್ತಿತ್ತು. ಪತ್ರಗಳೂ ಹಿಂಬಾಲಿಸುತ್ತಿದ್ದುವು. ಪತ್ರಗಳಲ್ಲಿ ನಾವು ನಮ್ಮ ನಮ್ಮ ಮನದ ತುಡಿತಗಳನ್ನು ಹಂಚಿಕೊಳ್ಳುತ್ತಿದ್ದೆವು.

Advertisement

ನನ್ನೂರಲ್ಲಿ ಮರೆಯಾಗುತ್ತಾ ಹೋದ ನನ್ನ ಪ್ರಿಯ ನಾಗಸಂಪಿಗೆ ಹೂಗಳ ಮರಗಳ ಬಗ್ಗೆ ಪತ್ರವೊಂದರಲ್ಲಿ ಬರೆದ ನಾನು, ಅವರ ಕಾಲೇಜ್‌ ಗೇಟ್‌ನೆದುರಿರುವ ನಾಗಸಂಪಿಗೆ ಮರವನ್ನು ಹೇಗಾದರೂ ಉಳಿಸಿಕೊಳ್ಳ ಬೇಕೆಂದು ಕಳಕಳಿಯಿಂದ ಕೇಳಿಕೊಂಡಿದ್ದೆ. ಅಂತೆಯೇಆ ಮರ ಕಡಿದು ಉರುಳಿಸಲ್ಪಡಲಿದ್ದಾಗ, ತನ್ನವಿದ್ಯಾರ್ಥಿಗಳನ್ನು ಒಗ್ಗೂಡಿಸಿ ರಸ್ತೆಗಿಳಿದು, ಮುಂಬಯಿ ಯಿಂದ  ಶ್ಯಾಮಲಾ ಮರವನ್ನುಳಿಸಿಕೊಳ್ಳುವಂತೆ ಹೇಳಿದ್ದಾರೆ.  ಕಡಿಯಲು ಬಿಡೆವು ಎಂದು ಹಾಗೆಯೇ ಉಳಿಸಿಕೊಂಡವರು ನಮ್ಮ ಭುವನೇಶ್ವರಿಯವರು.

ಒಂದು ಶತಮಾನದಷ್ಟು ಇತಿಹಾಸವಿರುವ ಕನ್ನಡ ಹಾಸ್ಯ ಸಾಹಿತ್ಯ ಪರಂಪರೆಯಲ್ಲಿ ಭುವನೇಶ್ವರಿ ಅವರ ಯೋಗದಾನ ಕಳೆದ ನಾಲ್ಕು ದಶಕಗಳುದ್ದಕ್ಕೂ ವ್ಯಾಪಿಸಿದೆ. ತಾಜಾತನವುಳ್ಳ ಆಧುನಿಕ ಸಂವೇದನೆಯ ಅವರ ಬರಹಗಳು ಚಿಕಿತ್ಸಕ ಗುಣದಿಂದ ಕೂಡಿವೆ. ಸಾಮಾಜಿಕ ಸಂಬಂಧಗಳು, ಶಿಕ್ಷಣ, ಸಾಹಿತ್ಯ, ಪ್ರಕೃತಿ, ಪರಿಸರ ಎಲ್ಲವನ್ನೂ ತಮ್ಮ ವಿಡಂಬನಾತ್ಮಕ ಅಂತಃಚಕ್ಷುಗಳಿಂದ ಪರಾಂಬರಿಸಿ ರಸಗವಳವನ್ನು ಬಡಿಸುವ ಲೇಖಕಿಯ ಮೊನಚಾದ ಗ್ರಹಣಶಕ್ತಿ ಅವರ ಹಾಸ್ಯಸಾಹಿತ್ಯದಲ್ಲಿ ಅನಾವರಣಗೊಂಡಿದೆ.

ಏಕಾಂತ ಸುಖಕ್ಕಾಗಿ ಹಾರೈಸುವ, ಪ್ರೇಮ ಸಾಮ್ರಾಜ್ಯದಲ್ಲಿ ಹಣಿಕುವ, ಮೂಢನಂಬಿಕೆಗಳ ಬೀಡಿನಲ್ಲಿ ಆಸಕ್ತಿಯಿಂದ ಜಿಜ್ಞಾಸೆಗೆ ತೊಡಗುವ, ಮನವೆಂಬ ಮರ್ಕಟನ ಒಳಹೊರಗನ್ನು ಜಾಲಾಡುವ, ಶಿಶು ಮತ್ತು ಸಾಹಿತ್ಯವೆಂದು ಮಗುವನ್ನು ಲಾಲಿ ಹಾಡಿ ತೂಗುವಲ್ಲಿ ಜೋಗುಳಕ್ಕೆ ಅನರ್ಹವಾದ ಸ್ವರ ತನ್ನದೆಂದು ಸ್ವವಿಡಂಬನೆಗೆ ತೊಡಗುವ, ಎಂಥದು ಮಾರಾಯೆÅà ಎಂದು ದಕ್ಷಿಣ ಕನ್ನಡದ ಅಮೂಲ್ಯ ಪದಪುಂಜ ಪುರಾಣವನ್ನು ತೆರೆದಿಡುವ ಲೇಖಕಿ ನಮಗೆ ಬಹಳ ಆಪ್ತರಾಗುತ್ತಾರೆ. 1907ರಲ್ಲಿ ಪ್ರಕಟವಾದ  “ವಿಕಟ ಪ್ರತಾಪ’ ಕನ್ನಡದ ಮೊದಲ ಹಾಸ್ಯ ಪತ್ರಿಕೆಯೆಂದು ಗುರುತಿಸಲ್ಪಟ್ಟಿದೆ. ಶತಮಾನಕ್ಕೂ ಮೀರಿ ಹರಿದಿರುವ ಹೊಸ ಕನ್ನಡದ ಹಾಸ್ಯರಸದ ಹೊನಲಿನಲ್ಲಿ ಪುರುಷ ಪ್ರಭೃತಿಗಳ ನಡುವೆ ಮಹಿಳಾ ಲೇಖಕಿಯರಾಗಿ ಓದುಗರನ್ನು ರಂಜಿಸಿ ಮೆರೆದ ಟಿ. ಸುನಂದಮ್ಮನವರಂತೇ ಹಾಸ್ಯದ ಪ್ರಖರ ಬೆಳಕು ಬೀರಿಮೆರೆದವರು ಭುವನೇಶ್ವರಿಯವರು.

ಜನ್ಮಭೂಮಿಯಾದ ಮಲೆನಾಡ ಪ್ರಕೃತಿ ಪರಿಸರವೇ ಅವರನ್ನು ನಗುವಿನಿಂದ ಹರಸಿದೆ. ಈ ನಕ್ಕು, ನಗಿಸುವ ಸ್ವಭಾವ ಸಹಜ ಗುಣವೇ ಅವರ ಲೇಖನ ವ್ಯವಸಾಯವಾಗಿ ಸಾಗಿದೆ.  ಅವರ ಸುಶಿಕ್ಷಿತ ಬರಹಗಳ ಹಿಂದಿನ ವೈಜ್ಞಾನಿಕ ಮನೋಭಾವವೇ ಆಧುನಿಕ ಸಂವೇದನೆಯಾಗಿ ವ್ಯಕ್ತಗೊಂಡಿದೆ. ಸಹಜ ನಿರ್ಮಲ ನಗೆ ಹೊಮ್ಮಿಸುವ ಪರಿಶುದ್ಧ ಹಾಸ್ಯಲಹರಿ, ವಿಡಂಬನೆ, ಅಣಕುವಾಡುಗಳು ಅವರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ. ಸುತ್ತ ಕಾಣುವ ಬದುಕಿನ ಚಿತ್ರಗಳನ್ನು ಗ್ರಹಿಸಿ ಅರ್ಥೈಸಿಕೊಳ್ಳುವ ಪ್ರಬುದ್ಧತೆಯು ಅವರಲ್ಲಿದೆ. ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಜಾಣ್ಮೆಯೂ, ಕಲಾವಂತಿಕೆಯೂ ಅವರಲ್ಲಿದೆ. ಅಲ್ಲಿ ಕಾಣುವ ಭಾಷೆಯ ಧ್ವನ್ಯಾರ್ಥಗಳು ನಮಗೆ ಕಚಗುಳಿಯಿಡುತ್ತವೆ.
ಅತ್ಯಂತ ಸಲೀಸಾಗಿ ಭಾಷೆಯಲ್ಲಿ ಸರಸವಾಡಿನವನವೋನ್ಮೆàಷಶಾಲಿಯಾದ ಪದಗಳನ್ನು ಅವರು ಪೋಣಿಸಿಕೊಳ್ಳುತ್ತಾರೆ. ನಗುವುಕ್ಕಿಸುವ ಇಂತಹ ಪದ
ಪುಂಜಗಳು ಅವರ ಪ್ರತಿಭೆಗೆ ಸಾಕ್ಷಿ. ಅವರ ಏಕಾಂತ ಸುಖ ವಂತೂ ಅಷ್ಟೊಂದು ಕೌತುಕಮಯವಾಗಿದೆ. “ಜಗತ್ತಿನ ಜೀವಿಗಳೆಲ್ಲ ಹೇಗಾದರೂ ಇದ್ದುಕೊಂಡು ಹೋಗಲಿ; ನನಗೆ ಮಾತ್ರ ಅಳಲು, ನಗಲು, ಕುಣಿಯಲು, ಹಾಡಲು, ಮಲಗಲು ಶಿಷ್ಟಾಚಾರಕ್ಕಾಗಿ ಕಟ್ಟಳೆಯನ್ನು ಪಾಲಿಸಬೇಕಿಲ್ಲದ ಮುಕ್ತ ಸ್ವಾತಂತ್ರÂವನ್ನು ಒದಗಿಸುವ ಈ ಏಕಾಂತಕ್ಕಾಗಿ ನನ್ನದು ನಿತ್ಯ ಪ್ರಾರ್ಥನೆ’  ಎಂಬ ಅವರ ಮಾತಿಗೆ ತಥಾಸ್ತು ಎನ್ನಲೇ ಬೇಕು.

Advertisement

ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಅತ್ಯಂತ ವಿಡಂಬನಾತ್ಮಕವಾಗಿ ಹಾಸ್ಯಕವಿ ಡುಂಡಿರಾಜ್‌ರೊಡನೆ ಅವರು ನಡೆಸಿದ ಪತ್ರಸಂವಾದ “ಏರಿ ಬಾ ತಾಯಿ’  ಅತ್ಯಂತ ರೋಚಕವಾಗಿತ್ತು. ಮಂಗಳೂರು ಯೂನಿವರ್ಸಿಟಿ ಕಾಲೇಜ್‌ನಲ್ಲಿ ಅವರು ಬೋಧಿಸುವ ಅರ್ಥಶಾಸ್ತ್ರದ ನೀರಸ ವಿಷಯಕ್ಕೂ, ಈ ಹಾಸ್ಯರಸದೊರತೆಗೂ ಎತ್ತಣಿಂದೆತ್ತ ಸಂಬಂಧ ಎಂದು ನನಗೆ ಅಚ್ಚರಿ ಅನಿಸುತ್ತದೆ. ಆದರೆ ಅರ್ಥಶಾಸ್ತ್ರವನ್ನೂ ಅವರು ರಸವತ್ತಾಗಿಯೇ ಬೋಧಿಸುತ್ತಾರೆಂಬುದು ಕಾಲೇಜ್‌ನಲ್ಲಿ ಅವರು ಗಳಿಸಿರುವ ಜನಪ್ರಿಯತೆಯೇ ಸಾಕ್ಷಿ.

ಕದ್ರಿ ಮಾರ್ಕೆಟ್‌ನ ಎದುರಿನ ರತ್ನಾ ಅಪಾರ್ಟ್‌ಮೆಂಟ್‌ನ ಅವರ ಹಳೆ ವಾಸ್ತವ್ಯದಿಂದ ತೊಡಗಿ,ಇಂದಿನ ಆಳ್ವಾರಿಸ್‌ ರೋಡ್‌ನ‌ ನವೀನ ವಾಸ್ತವ್ಯಎಡೋನಿಯಾ ಅಪಾರ್ಟ್‌ಮೆಂಟ್‌ವರೆಗೂ ನಮ್ಮ ಪ್ರೀತಿಬಂಧ ಹಬ್ಬಿದೆ. ಹತ್ತು ತಿಂಗಳ ಮಗು ಆಭಾಳ ನಗುವ ಫೊಟೋ ನನ್ನ ಆಲ್ಬಮ್‌ನಲ್ಲಿಸೆಳೆಯುವಂತಿದ್ದರೆ, ಭುವನೇಶ್ವರಿ ಪತ್ರಗಳು ನನ್ನ ಪತ್ರ ಸಂಚಯ ಸೇರಿವೆ. ಸುದೀರ್ಘ‌ವೆಂಬ ಕಾರಣಕ್ಕೆ ಅಂಕಿತ ಪ್ರಕಾಶರು ನನ್ನ “ಜೇನ್‌ ಏರ್‌’ ಕೈ ಬಿಟ್ಟಾಗ, ತೇಜು ಪ್ರಕಾಶನದ  ಅಣಕು ರಾಮನಾಥರನ್ನು ತೋರಿದವರು ಗೆಳತಿ ಭುವನೇಶ್ವರಿ. ಅವರ  ಮಲೆನಾಡ ತವರು, ಈಗಿನ ಕಾಡಿನ ತೋಟದ ಮನೆ ಎಲ್ಲವೂ ನನಗೆ ಕೌತುಕ. 

 ಕೆಲಕಾಲ ಅನಾರೋಗ್ಯ ಕಾಡಿದ ಭುವನೇಶ್ವರಿ, ಈಗ ಮುಕ್ತರಾಗಿ ಓಡಾಡುತ್ತಾ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. “ಭಾಷಣ ಕೊರೆಕೊರೆದು ಸಾಕಾಯ್ತು; ವೃತ್ತಿಯಿಂದ ನಿವೃತ್ತಿಯಾದುದೇ ಭಾಷಣಕ್ಕಾಗಿ ಕರೆಗಳ ಜಾಲದಲ್ಲಿ ಸಿಲುಕಿದ್ದೇನೆ’ ಎಂದು ಪರಿತಪಿಸುತ್ತಿದ್ದಾರೆ. ಹಾಸ್ಯ ರಸ
ವರ್ಷದ ಅವರ ಮಾತುಗಳನ್ನಾಲಿಸುವುದು ಕೇಳುಗರ ಭಾಗ್ಯ. ಇನ್ನಷ್ಟು ರಸಯುಕ್ತ ಕೃತಿಗಳಿಂದ ಕನ್ನಡ ಸಾಹಿತ್ಯ
ಲೋಕ ಅವರ ಹಾಸ್ಯ ರಸ ವರ್ಷದಲ್ಲಿ ಮಿಂದು ಶೋಭಿಸುತ್ತಿರಲಿ.

Advertisement

Udayavani is now on Telegram. Click here to join our channel and stay updated with the latest news.

Next