ಧಾರವಾಡ: ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸಮ್ಮೇಳನ ಫೇಸ್ ಬುಕ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ..!ಹೌದು. ಧಾರಾನಗರಿಯಲ್ಲಿ ನಡೆಯುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ (ಲೈವ್ ಕವರೇಜ್) ಮಾಡಲು ಸಿದ್ಧತೆ ನಡೆದಿದ್ದು, ಇದರೊಂದಿಗೆ ಯುಟ್ಯೂಬ್‌ನಲ್ಲಿ ಸಮ್ಮೇಳನ ವೀಕ್ಷಿಸಲು ಅಗತ್ಯ ಸಿದ್ಧತೆ ಸಾಗಿದೆ. ಈ ದಿಸೆಯಲ್ಲಿ ತಾಂತ್ರಿಕ ತಂಡ ಕಾರ್ಯ ಪ್ರವೃತ್ತವಾಗಿದೆ. ಎಲ್ಲ ಸಾಹಿತ್ಯಾಸಕ್ತರಿಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಅವರಿಗೆ ಸಾಹಿತ್ಯ ಸಮ್ಮೇಳನ ಬಗ್ಗೆ ತೀವ್ರ ಆಸಕ್ತಿ ಇರುತ್ತದೆ. ಇಲ್ಲಿನ ಕಾರ್ಯಕ್ರಮ, ಗೋಷ್ಠಿಗಳನ್ನು ವೀಕ್ಷಿಸಬೇಕು, ಆಲಿಸಬೇಕೆಂಬ ಮಹದಾಸೆ ಇರುತ್ತದೆ. ಸಾಹಿತ್ಯ ಪ್ರೇಮಿಗಳ ಅಭಿಲಾಷೆಯನ್ನು ಮನಗಂಡು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ನೇರ ಪ್ರಸಾರ ಮಾಡಿದರೆ ವಿಶ್ವಾದ್ಯಂತ ಕನ್ನಡಿಗರು ಇಲ್ಲಿನ ಕಾರ್ಯಕ್ರಮಗಳನ್ನು ಆನಂದಿಸಬಹುದಾಗಿದೆ. ಅಲ್ಲದೇ ವೆಬ್ ಸೈಟ್‌ನಲ್ಲೂ ನೇರ ಪ್ರಸಾರ ಮಾಡುವ ಚಿಂತನೆ ನಡೆದಿದೆ. ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಲಿಂಗರಾಜ ಅಂಗಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿ ಆಸಕ್ತಿ ವಹಿಸಿದ್ದಾರೆ.
ರೇಡಿಯೋ ಕೇಂದ್ರಗಳ ಬಳಕೆ: ಧಾರವಾಡ ಜಿಲ್ಲೆಯಲ್ಲಿ ಕೆಎಲ್‌ಇ ಧ್ವನಿ, ರೆಡ್ ಎಫ್ ಎಂ ರೇಡಿಯೋ ಮಿರ್ಚಿ ಎಫ್ ಎಂ ಕೇಂದ್ರ ಆರಂಭಗೊಂಡ ನಂತರ ಶ್ರೋತೃಗಳ ಸಂಖ್ಯೆ ಹೆಚ್ಚಿದೆ. ರೇಡಿಯೋ ಮಾಧ್ಯಮವನ್ನು ಬಳಸಿಕೊಳ್ಳುವ ದಿಸೆಯಲ್ಲಿ ರೇಡಿಯೋ ಕೇಂದ್ರಗಳೊಂದಿಗೆ ಚರ್ಚಿಸಲಾಗಿದೆ. ಆಕಾಶವಾಣಿಯೊಂದಿಗೆ ಖಾಸಗಿ ರೇಡಿಯೋ ಕೇಂದ್ರಗಳು ಸಮ್ಮೇಳನದ ಗೋಷ್ಠಿಗಳನ್ನು ಪ್ರಸಾರ ಮಾಡಲು ಆಸಕ್ತಿ ತೋರಿವೆ. ಎಲ್ಲ ಕಾರ್ಯಕ್ರಮಗಳು ಬಿತ್ತರಗೊಳಿಸಲು ಕೋರಲಾಗಿದೆ.
ಪ್ರಚಾರಕ್ಕೆ ಕಲಾ ತಂಡ: ಧಾರವಾಡ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸಲು ಒಂದು ಕಲಾ ತಂಡ ರಚಿಸಲಾಗಿದೆ. ಗೂಡ್ಸ್ ವಾಹನವನ್ನು ಸಾಹಿತಿಗಳ, ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾವಚಿತ್ರದಿಂದ ಅಲಂಕರಿಸಿ ಹಳ್ಳಿಗಳಲ್ಲಿ ಸಂಚರಿಸಲಾಗುತ್ತದೆ. ಇದರಲ್ಲಿ ಕಲಾತಂಡದ ಕಲಾವಿದರು ಜನವರಿ 4, 5 ಹಾಗೂ 6ರಂದು ನಡೆಯುವ ಸಾಹಿತ್ಯ ಸಮ್ಮೇಳನ ಕುರಿತು ತಿಳಿಸಿಕೊಡಲಿದ್ದಾರೆ. ಸಮ್ಮೇಳನ ವಿಶೇಷತೆ, ಪಾಲ್ಗೊಳ್ಳುವ ಮಹನೀಯರು, ಗಣ್ಯರು, ಹಿರಿಯ ಸಾಹಿತಿಗಳ ಬಗ್ಗೆ ವಿವರಿಸಲಿದ್ದಾರೆ. ಅಲ್ಲದೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಸಾಧನೆ ಕುರಿತು ತಿಳಿಸಿಕೊಡಲಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಿದ್ದಾರೆ.
ಜಾಲತಾಣ ಬಳಕೆ
ಇಂದು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿದೆ. ಮೊಬೈಲ್‌ನಲ್ಲಿ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅವುಗಳ ಬಳಸುವ ಕನ್ನಡಿಗರು ಸಾಹಿತ್ಯ ಸಮ್ಮೇಳನವನ್ನು ವೀಕ್ಷಿಸಲು ಅನುಕೂಲವಾಗಲಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಸಾರ ಮಾಡುವ ಕುರಿತು ವ್ಯಾಪಕ ಪ್ರಚಾರ ಮಾಡಲು ಪ್ರಚಾರ ಸಮಿತಿ ತೀರ್ಮಾನಿಸಿದೆ.
ಯುವಜನರಿಗೆ ಸಾಹಿತ್ಯ ಬಗ್ಗೆ ಅಭಿರುಚಿ ಮೂಡಿಸುವುದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಸಾಹಿತ್ಯ ಸಮ್ಮೇಳನ ಕುರಿತು ಪ್ರಚಾರ ಮಾಡಲಾಗುವುದು. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರು ಸಾಮಾಜಿಕ ಜಾಲತಾಣಗಳಲ್ಲಾದರೂ ಕಾರ್ಯಕ್ರಮ ವೀಕ್ಷಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ಗಣ್ಯರು, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವ ಚರ್ಚೆಗಳು ಹೆಚ್ಚು ಜನರಿಗೆ ತಲುಪಬೇಕು.
ಡಾ|ಲಿಂಗರಾಜ ಅಂಗಡಿ,
84ನೇ ಸಾಹಿತ್ಯ ಸಮ್ಮೇಳನ ಪ್ರಚಾರ ಸಮಿತಿ ಅಧ್ಯಕ್ಷ
ವಿಶ್ವನಾಥ ಕೋಟಿ