ನಂಜನಗೂಡು: ಟಿಪ್ಪು ಆ ಕಾಲದಲ್ಲಿ ಕನ್ನಡದಲ್ಲೇ ಪತ್ರ ವ್ಯವಹಾರ ನಡೆಸುವಷ್ಟರ ಮಟ್ಟಿಗೆ ಮಾತೃಭಾಷಾ ಅಭಿಮಾನಿಯಾಗಿದ್ದು ಆತನ ಸಮುದಾಯದವರೂ ಕನ್ನಡದ ಅಭಿಮಾನಿಗಳಾಗಿ ಎಂದು ಶಾಸಕ ಕಳಲೆ ಕೇಶವಮೂರ್ತಿ ಕಿವಿಮಾತು ಹೇಳಿದರು. ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಹಾದೇಶ ಭಕ್ತನಾಗಿದ್ದ ಟಿಪ್ಪುವಿನ ಇತಿಹಾಸವನ್ನೆಲ್ಲಾ ಪ್ರೊ.ಡಾ.ನೈಮರ್ ರಹಮಾನ್ ತಿಳಿಸಿದ್ದಾರೆ. 17ನೇ ಶತಮಾನದಲ್ಲೇ ಅಚ್ಚ ಕನ್ನಡದಲ್ಲಿ ಪತ್ರ ಬರೆದಿರುವುದು ಟಿಪ್ಪುಗಿದ್ದ ಭಾಷಾ ಪ್ರೇಮ ತಿಳಿಸುತ್ತದೆ ಎಂದು ಹೇಳಿದರು. ಅಲ್ಲದೆ, ಟಿಪ್ಪು ಸಾಮಾನ್ಯ ಜನರ ಆರ್ಥಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ದ. ಆತ ರೇಷ್ಮೆಗೆ ಹೆಚ್ಚು ಮಹತ್ವ ನೀಡಿದ್ದ ಎಂದು ತಿಳಿಸಿದರು.
ಟಿಪ್ಪು ಒಬ್ಬ ಜನಪ್ರಿಯ, ಪ್ರಗತಿಪರ, ದೇಶಭಕ್ತ. ಆಗ್ಲರ ಎದೆ ನಡುಗಿಸಿದ ಮಹಾ ಸೇನಾನಿ. ಈಗ ಯಾರನ್ನೋ ಮೆಚ್ಚಿಸುವ ಸಲುವಾಗಿ ಕೆಲವರು ಆತನ ಇತಿಹಾಸವನ್ನು ತಿರುಚಿದ್ದಾರೆಂದರು. ಮೈಸೂರು ಮಹಾರಾಣಿ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ನೈಮರ್ ರೆಹಮಾನ್, ಟಿಪ್ಪು ಹಿಂದೂ, ಕನ್ನಡ ದ್ರೋಹಿಯಲ್ಲ ಎನ್ನುವುದಕ್ಕೆ ಆತ ಶೃಂಗೇರಿ ಮಠದ ಗುರುಗಳಿಗೆ ಕನ್ನಡದಲ್ಲೇ ಬರೆದ ಪತ್ರಗಳೇ ಸಾಕ್ಷಿ.
ಆತನ ಕಾಲದಲ್ಲೇ ಉಳುವವನೇ ಭೂ ಒಡೆಯ ಎಂಬ ಕ್ರಾಂತಿಕಾರಿ ಕಾನೂನು ಜಾರಿಯಾಗಿತ್ತು ಎಂದು ತಿಳಿಸಿದರು. ಮಹಿಳೆಯರು ಸೊಂಟದ ಮೇಲ್ಭಾಗದಲ್ಲೂ ವಸ್ತ್ರ ಧರಿಸುವಂತೆ ಕ್ರಾಂತಿಕಾರಕ ಬದಲಾವಣೆ ತಂದ ಆತನ ಧೋರಣೆಯನ್ನು ವಿರೋಧಿಸಿದ ನಾಯರ್ ಹಾಗೂ ನಂಬೂದರಿಗಳು ಆತನ ಬಗ್ಗೆ ತಪ್ಪು ಕಲ್ಪನೆ ಮೂಡಿಸಿದ್ದಾರೆಂದರು.
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಪಚ್ಚೆ ಲಿಂಗವನ್ನು ಪ್ರತಿಷ್ಟಾಪಿಸಿ ಹಕೀಂ ನಂಜುಂಡ ಎಂಬ ಬಿರುದು ನೀಡಿರುವವರು ಟಿಪ್ಪು ಆಗಿದ್ದು ಆತ ಹಿಂದೂ ವಿರೋಧಿಯೇ ಎಂದು ಪ್ರಶ್ನಿಸಿದರು. ತಹಶೀಲ್ದಾರ್ ದಯಾನಂದ, ಇಒ ರೇವಣ್ಣ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದಕುಮಾರ್,
-ಕೆಪಿಸಿಸಿ ಸದಸ್ಯ ಅಕರ್ ಅಲಿ, ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್‌ಖಾದರ್, ಜಿಪಂ ಸದಸ್ಯರಾದ ಲತಾ, ನಗರ ಸಭಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ದೊಡ್ಡ ಮಾದಯ್ಯ, ಮಂಜುನಾಥ್, ಚಂದ್ರಶೇಖರ್, ರಾಜೇಶ್, ಖಾಲಿದ್, ಮುಹೀರ್, ನೀಲಿಸಿದ್ದು ಮತ್ತಿತರರಿದ್ದರು.
ಇತ್ತ ಸಮಾಜದವರೂ ಇಲ್ಲ, ಅತ್ತ ಅಧಿಕಾರಿಗಳೂ ಇಲ್ಲ: ಶುಕ್ರವಾರ ನಮಾಜ್ ಇದ್ದರಿಂದ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಲಿಲ್ಲ. ಮೆರವಣಿಗೆಗೆ ಅನುಮತಿ ನೀಡದಿದ್ದರಿಂದ ಮುಸ್ಲಿ ಸಮುದಾಯದ ಬಹಳಷ್ಟು ಮಂದಿ ಸಮಾರಂಭದಿಂದ ದೂರವುಳಿದಿದ್ದರು. ಇನ್ನು ತಾಲೂಕು ಮಟ್ಟದ ನಾಲ್ಕಾರು ಅಧಿಕಾರಿಗಳನ್ನು ಹೊರತು ಪಡಿಸಿದರೆ ಬೇರಾವುದೇ ಅಧಿಕಾರಿಗಳು ಸಭೆಯತ್ತ ಮುಖಮಾಡಲಿಲ್ಲ.