ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕನ್ನಡ ಕಲಿಕೆಯಲ್ಲಿ ತೊಡಗಿದ್ದಾರೆ.
ಅಅಇಈ: ವಯಸ್ಕರ ಸಾಕ್ಷರತಾ ಕಾರ್ಯಕ್ರಮದಡಿ ಕಾರಾಗೃಹದಲ್ಲಿ ನಡೆಯುವ ತರಗತಿಗಳಿಗೆ ಹಾಜರಾಗುತ್ತಿರುವ ಅವರು ಕನ್ನಡ ವರ್ಣಮಾಲೆ, ಕನ್ನಡ ಓದಲು ಅನುಕೂಲವಾಗುವಷ್ಟು ಕಲಿಕೆ ಜತೆಗೆ ಉಚ್ಛಾರಣೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.
ಕಂಪ್ಯೂಟರ್ ಬೇಸಿಕ್: ಕನ್ನಡ ಓದು ಹಾಗೂ ಬರವಣಿಗೆ ಕಲಿಕೆ ಮಾತ್ರವಲ್ಲದೆ ಬೇಸಿಕ್ಸ್ ಕಂಪ್ಯೂಟರ್ ಕಲಿಕೆಯಲ್ಲಿ ಶಶಿಕಲಾ ತೊಡಗಿಸಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅವರ ಸಂಬಂಧಿ ಜೆ.ಇಳವರಿಸಿ ಕೂಡ ಶಶಿಕಲಾ ಅವರೊಂದಿಗೆ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿವೆ.
ಪ್ರಮಾಣಪತ್ರ: ತರಗತಿಗಳಿಗೆ ಹಾಜರಾದವರಿಗೆ ಮೌಖೀಕ ಮೌಲ್ಯಮಾಪನ ನಡೆಸುವ ವ್ಯವಸ್ಥೆ ಇದೆ. ಆದರೆ ಶಶಿಕಲಾ ಅವರು ಮೌನ ವ್ರತ ಮುಂದುವರಿಸಿರುವುದರಿಂದ ಮೌಖೀಕ ಮೌಲ್ಯಮಾಪನಕ್ಕೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಅವರ ಕನ್ನಡ ಬರವಣಿಗೆ ಕಲಿಕೆ ಉತ್ತಮವಾಗಿದೆ. ತರಗತಿಗೆ ಹಾಜರಾದವರಿಗೆ ಪ್ರಮಾಣಪತ್ರ ಕೂಡ ವಿತರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗ್ರಂಥಾಲಯ ಇಲಾಖೆಯು ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆಂದೇ ಆರಂಭಿಸಲಿರುವ ಗ್ರಂಥಾಲಯದಲ್ಲಿ ನಿತ್ಯ 91 ದಿನಪತ್ರಿಕೆ, ಮಾಸಿಕ/ ವಾರಪತ್ರಿಕೆ ಪೂರೈಕೆಗೆ 30,000 ರೂ. ವೆಚ್ಚ ಮಾಡಲಿದೆ. ಶಶಿಕಲಾ ಅವರ ಆಸಕ್ತಿ ಫಲವಾಗಿಯೇ ಪ್ರತ್ಯೇಕ ಗ್ರಂಥಾಲಯ ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಮಹಿಳಾ ಕೈದಿಗಳಿಗೂ ಪತ್ಯೇಕ ಗಂಥಾಲಯ: ಶಶಿಕಲಾ ಅವರಿಗೆ ಕನ್ನಡ ಕಲಿಕೆ ಮಾತ್ರವಲ್ಲದೇ ಪುಸ್ತಕ ಓದುವ ಆಸಕ್ತಿಯೂ ಹೆಚ್ಚಾಗಿದೆ. ಸದ್ಯ ಕಾರಾಗೃಹದಲ್ಲಿ ಪುರುಷ ಕೈದಿಗಳಿಗಷ್ಟೇ ಗ್ರಂಥಾಲಯ ಬಳಕೆಗೆ ಅವಕಾಶವಿದ್ದು, ಶಶಿಕಲಾ ಅವರ ಆಸಕ್ತಿ ಗಮನಿಸಿ ಮಹಿಳಾ ಕೈದಿಗಳಿಗೆ ಪ್ರತ್ಯೇಕ ಗ್ರಂಥಾಲಯ ಆರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ವಿಚಾರಣಾಧೀನ ಪುರುಷರಿಗೆ ಪ್ರತ್ಯೇಕ ಗ್ರಂಥಾಲಯ ತೆರೆಯಲು ಚಿಂತಿಸಲಾಗಿದೆ ಎಂದು ಮೂಲಗಳು ಹೇಳಿವೆ.