Advertisement

ಕನ್ನಡ ಭಾಷೆ ಕಡೆಗಣಿಸಬಾರದು

12:07 PM Nov 02, 2018 | Team Udayavani |

ಮೈಸೂರು: ಆಂಗ್ಲ ಭಾಷಾ ವ್ಯಾಮೋಹದಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಕಡೆಗಣಿಸಬಾರದು ಎಂದು ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು. 

Advertisement

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಗರದ ಕೆ.ಆರ್‌.ಕ್ಷೇತ್ರದ ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ-ಬೆಳೆಸುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡದಲ್ಲಿರುವ 49 ಅಕ್ಷರಗಳಿಗೂ ಒಂದೊಂದು ದೇವತೆಗಳಿದ್ದು, ಈ ರೀತಿ ಪ್ರತಿ ಅಕ್ಷರಕ್ಕೂ ಒಂದೊಂದು ದೇವತೆಗಳಿರುವ ಏಕೈಕ ಭಾಷೆ ಎಂದರೆ ಕನ್ನಡ ಮಾತ್ರ ಎಂದು ಹೇಳಿದರು. 

ಆಂಗ್ಲ ಮಾಧ್ಯಮದ ವ್ಯಾಮೋಹ, ವೃತ್ತಿ ಬದುಕಿಗೆ ಅಗತ್ಯವಿರುವ ಕಾರಣದಿಂದ ಆಂಗ್ಲ ಮಾಧ್ಯಮದತ್ತ ಒಲುವು ತೋರುತ್ತಿದ್ದಾರೆ. ಇದರಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆಯಾಗಿ ಕೆ.ಆರ್‌. ಕ್ಷೇತ್ರದ ಕೆಲವು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಡೆಯುವ ಜತೆಗೆ ಕ್ಷೇತ್ರದ ಸರ್ಕಾರಿ ಶಾಲೆಯ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫ‌ಲಿತಾಂಶ ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಆ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು. 

ಶಾಲಾ ದಾಖಲಾತಿ ವೇಳೆ ಶಿಕ್ಷಕರು ಮನೆಮನೆಗೆ ತೆರಳಿ ಪೋಷಕರಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸಬೇಕು. ಭಾಷೆ ಕುರಿತು ಮನವರಿಕೆ ಮಾಡಿಕೊಡಬೇಕು. ಶಾಲೆಗಳಲ್ಲಿ ಭಾಷೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತೆ ಆಕರ್ಷಕ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು. 

ಇದೇ ಸಂದರ್ಭದಲ್ಲಿ “ತಮ್ಮ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ಬೆಳೆಸಲು ಸಹಕಾರಿಯಾಗುತ್ತೇವೆ’ ಎಂದು ಪಾಲಿಕೆ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.  ಕಾರ್ಯಕ್ರಮದಲ್ಲಿ ಕೆ.ಆರ್‌. ಕ್ಷೇತ್ರದ ಬಿಜೆಪಿ ನಗರಪಾಲಿಕೆ ಸದಸ್ಯರು, ಸರ್ಕಾರಿ ಶಾಲೆ ಮಕ್ಕಳು, ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಪೋಷಕರು, ಸಂಘಟನೆಗಳೆಲ್ಲರ ಸಹಕಾರ ಮುಖ್ಯ. ರಾಜ್ಯದ ಅನೇಕ ಮಹನೀಯರು ಕನ್ನಡ ಮಾಧ್ಯಮದಲ್ಲಿ ಓದಿಯೇ ಉನ್ನತ ಸ್ಥಾನಕ್ಕೇರಿದವರು. ಹಾಗೆಯೇ ಇಂದಿನ ಮಕ್ಕಳು ಕನ್ನಡ ಭಾಷೆಯ ಜತೆಗೆ ಇತರೆ ಭಾಷೆಗಳನ್ನು ಕಲಿಯಬೇಕು.
-ರಾಮದಾಸ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next