Advertisement

ಕನ್ನಡ ಭಾಷೆ ಹೆತ್ತ ತಾಯಿಗೆ ಸಮಾನ; ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

04:29 PM Jan 25, 2021 | Team Udayavani |

ಹುಲಸೂರು: ಮಾತೃಭಾಷೆ ಅಂದರೆ ತಾಯಿಗೆ ಸಮನಾದ ಭಾಷೆ. ಅದಕ್ಕೆ ಆ ಭಾಷೆಗೆ ತಾಯಿಗೆ ಸಲ್ಲುವಷ್ಟೇ ಗೌರವ, ಪ್ರೀತಿ ದೊರಕಬೇಕು. ಕನ್ನಡದಲ್ಲಿ ಇತರೆ ಭಾಷೆ ಸೇರಿ ಸೌಹಾರ್ದತೆ ಮೂಡಿಸಿದೆ ಎಂದು ಬೆಂಗಳೂರು ಸಂಸ್ಕೃತ ವಿವಿ ಉಪ ನಿರ್ದೇಶಕ ಪ್ರೊ| ಸಂತೋಷ ಹಾನಗಲ್‌ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ ತಾಲೂಕು ಕಸಾಪ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಐತಿಹಾಸಿಕ ಹಿನ್ನೆಲೆ ಹೊಂದಿದೆ. ತಾಲೂಕಿನ ಗೋರ್ಟಾದಲ್ಲಿನ ನನೆಗುದಿಗೆ ಬಿದ್ದಿರುವ ಹುತಾತ್ಮರ ಸ್ಮಾರಕ ಹಾಗೂ ಸರದಾರ ವಲ್ಲಭಭಾಯಿ ಪಟೇಲರ ಮೂರ್ತಿ ನಿರ್ಮಾಣ ಕಾರ್ಯ ಶೀಘ್ರ ಈಡೇರಬೇಕು. ಈ ದಿಸೆಯಲ್ಲಿ ಸಂಸದರು ಪ್ರಯತ್ನಿಸಬೇಕು ಎಂದರು.

ತಹಶೀಲ್ದಾರ್‌ ಸಾವಿತ್ರಿ ಸಲಗರ ಮಾತನಾಡಿ, ಕನ್ನಡದ ಜ್ಞಾನೇಶ್ವರ ಮಿತಾಕ್ಷರ ಸಂಹಿತೆ ಇಂದು ಸಹ ನ್ಯಾಯಾಲಯದಲ್ಲಿ ಮಾದರಿಯಾಗಿದೆ. ಅದರಲ್ಲಿನ ವಿವರಣೆ ನೋಡಿ ನ್ಯಾಯ ನೀಡುವುದು ಕಾಣಬಹುದು ಎಂದು ಹೇಳಿ, ಹುಲಸೂರಿನಲ್ಲಿ ಕನ್ನಡ ಭವನಕ್ಕೆ ಒಂದು ತಿಂಗಳ ವೇತನ ದೇಣಿಗೆ ನೀಡಿದರು. ಸಮ್ಮೇಳನಾಧ್ಯಕ್ಷರಾದ ಚಂದ್ರಕಲಾ ಹಾರಕುಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯವೂ ಜಗತ್ತಿನ ಇತಿಹಾಸದಲ್ಲಿ ಶ್ರೀಮಂತ ಇತಿಹಾಸ
ನಿರ್ಮಾಣಕ್ಕೆ ಕಾರಣವಾಗಿದೆ. ಜಾನಪದದಿಂದ ಸಂಸ್ಕೃತಿಯ ಬೆಸುಗೆ ಸಾಧ್ಯವಿದ್ದು, ನನಗೂ ಮತ್ತು ಜಾನಪದಕ್ಕೂ ಅವಿನಾಭಾವ ಸಂಬಂಧ ಇದೆ.

ದೀನ-ದುರ್ಬಲರನ್ನು ಒಗ್ಗೂಡಿಸಿ ಜಾನಪದ ಹಾಡು ಹಾಡುವ ಕಲೆ ಕಿರಿಯ ವಯಸ್ಸಿನಿಂದಲೂ ಮೈಗೂಡಿಸಿಕೊಂಡಿದ್ದೇನೆ. ನನ್ನ ಜಾನಪದ ಹಾಡುಗಳಿಗೆ ಅನೇಕ ಪ್ರಶಸ್ತಿ, ಗೌರವ ಲಭಿಸಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಜಾಗತೀಕರಣದಿಂದ ಭಾಷೆಗೆ ಕುತ್ತು ಬರುತ್ತಿದೆ. ಇಂದು ಗಡಿ ಗಲಾಟೆ ಬಿಟ್ಟು, ಭಾರತದ ಗಡಿ ರಕ್ಷಣೆ ಚಿಂತನೆ ಮಾಡಬೇಕಾಗಿದೆ. ಹುಲಸೂರು ಕನ್ನಡ ಭವನಕ್ಕೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ 5 ಲಕ್ಷ ರೂ. ಘೋಷಿಸಿದ್ದು, ಭವನ ನಿರ್ಮಾಣಕ್ಕೆ ಸಮಿತಿ ರಚಿಸುವುದಾಗಿ ತಿಳಿಸಿದರು.

ಡಾ| ಶಿವಾನಂದ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಕಸಾಪ ಗೌರವಾಧ್ಯಕ್ಷ ಮಲ್ಲಪ್ಪ ಧಬಾಲೆ, ಸ್ವಾಗತ ಸಮಿತಿ ಅಧ್ಯಕ್ಷ ಸುಧೀರ್‌ ಕಾಡಾದಿ, ಅನಿಲ ಭೂಸಾರೆ, ಮಂಗಳಾ ಡೋಣಗಾವಕರ, ಲತಾ ಹಾರಕುಡೆ, ಸಂಗಮೇಶ ಕುಡಂಬಲೆ, ಸಿದ್ರಾಮಪ್ಪ ಕಾಮಣ್ಣ ಇತರರು ಇದ್ದರು. ಕಸಾಪ ತಾಲೂಕಾಧ್ಯಕ್ಷೆ ಡಾ| ಶಿವಲೀಲಾ ಮಡಪತಿ ಸ್ವಾಗತಿಸಿದರು. ಸಂಗೀತಾ ಹೂಗಾರ ನಿರೂಪಿಸಿದರು. ಶ್ರೀದೇವಿ ನಿಡೋದೆ ವಂದಿಸಿದರು.

Advertisement

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಮ್ಮೇಳನ ನಿಮಿತ್ತ ಅಲಂಕೃತ ವಾಹನದಲ್ಲಿ ಸರ್ವಾಧ್ಯಕ್ಷೆ ಚಂದ್ರಕಲಾ ಹಾರಕುಡೆ ದಂಪತಿಗಳ ಭವ್ಯ ಮೆರವಣಿಗೆ ನಡೆಯಿತು. ತಹಶೀಲ್ದಾರ್‌ ಸಾವಿತ್ರಿ ಸಲಗರ, ಸುಧಿಧೀರ್‌ ಕಾಡಾದಿ ಚಾಲನೆ ನೀಡಿದರು. ಕಲಾ ತಂಡಗಳು ಮೆರಗು ಹೆಚ್ಚಿಸಿದವು.

ವಿಭಿನ್ನ ಭಾಷೆ, ಉಡುಗೆ-ತೊಡುಗೆ ಹೊಂದಿರುವ ಕರ್ನಾಟಕ ಒಂದು ರಾಜ್ಯವಲ್ಲ, ಅದೊಂದು ದೇಶ. ಕನ್ನಡ ಭಾಷೆಯನ್ನು ಅಂದು ಅರಸರು ಉಳಿಸಿ ಪೋಷಿಸಿದರೆ, ನಂತರ ಮಠಗಳು ಈ ಕಾರ್ಯ ಮುನ್ನಡೆಸಿಕೊಂಡು ಬರುತ್ತಿವೆ. ಬೆಳಗಾವಿ ನಮ್ಮದು, ಅಷ್ಟೇ ಅಲ್ಲ ಮಹಾರಾಷ್ಟ್ರದ ಅಕ್ಕಲಕೋಟ್‌ ಸಹ ನಮಗೆ ಸೇರಿದ್ದು.
ಶ್ರೀ ನಿಜಗುಣಾನಂದ ಸ್ವಾಮಿಗಳು

Advertisement

Udayavani is now on Telegram. Click here to join our channel and stay updated with the latest news.

Next