Advertisement

ಗದ್ದೆಗಳಿಗೆ ನುಗ್ಗುತ್ತಿರುವ ಉಪ್ಪುನೀರು : ರಿಂಗ್‌ ರೋಡ್‌ ನಿರ್ಮಾಣಕ್ಕೆ ಬೇಡಿಕೆ

01:31 AM Apr 03, 2021 | Team Udayavani |

ಹೆಮ್ಮಾಡಿ : ಕನ್ನಡಕುದ್ರು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಗದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗುತ್ತಿದ್ದು ಇದರಿಂದ ಸುಮಾರು 20 ಎಕರೆಗೂ ಮಿಕ್ಕಿ ಗದ್ದೆ ಪ್ರದೇಶಗಳಲ್ಲಿ ಮುಂಬರುವ ಮುಂಗಾರು ಹಂಗಾಮಿನ ಕೃಷಿಗೆ ತೊಡಕಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರವೆನ್ನುವಂತೆ ಕನ್ನಡಕುದ್ರು ಸುತ್ತಲೂ ಸುಮಾರು 3 ಕಿ.ಮೀ. ಉದ್ದದ ರಿಂಗ್‌ ರೋಡ್‌ ನಿರ್ಮಿಸಬೇಕು ಎನ್ನುವ ಬೇಡಿಕೆ ಇಲ್ಲಿನ ಜನರಿಂದ ವ್ಯಕ್ತವಾಗಿದೆ.

Advertisement

ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕನ್ನಡಕುದ್ರುವಿನಲ್ಲಿ ಸೌಪರ್ಣಿಕಾ ನದಿಯಲ್ಲಿ ಕಂಡು ಬಂದ ಉಬ್ಬರದಿಂದ ಇಲ್ಲಿನ ಗದ್ದೆ ಸಹಿತ ಇನ್ನಿತರ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದೆ. ಇದರಿಂದ 10 -15 ಮಂದಿ ರೈತರ ಸುಮಾರು 20 ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ಹಾನಿಯಾಗಿದೆ. ಇಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ.

ಅಧ್ಯಕ್ಷರ ಭೇಟಿ
ಕನ್ನಡಕುದ್ರು ಪರಿಸರಕ್ಕೆ ಉಪ್ಪು ನೀರು ನುಗ್ಗಿ ಹಾನಿಯಾದ ಬಗ್ಗೆ ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷೆ ಶೈನಿ ಕ್ರಾಸ್ತ, ಪಿಡಿಒ ಮಂಜು ಬಿಲ್ಲವ, ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಿಂಗ್‌ ರೋಡ್‌ನಿಂದ ಪರಿಹಾರ
ಕಟ್ಟು, ಬಂಟ್ವಾಡಿಯಲ್ಲಿ ಅಣೆಕಟ್ಟು ನಿರ್ಮಾಣವಾದ ಬಳಿಕ ಕನ್ನಡಕುದ್ರುವಿನಲ್ಲಿ ಉಪ್ಪು ನೀರಿನ ಅಂತರ್ಜಲ ಮಟ್ಟ ಜಾಸ್ತಿಯಾಗಿದ್ದು, ಅದೆಲ್ಲ ಕನ್ನಡಕುದ್ರುವಿನ ಕೃಷಿ ಭೂಮಿಗೆ ನುಗ್ಗುತ್ತಿದೆ. ಇದಕ್ಕೆ ಇಲ್ಲೊಂದು ಸಣ್ಣ ಕಿಂಡಿ ಅಣೆಕಟ್ಟು ಅಥವಾ ಇಡೀ ಕನ್ನಡಕುದ್ರುವಿಗೆ ರಿಂಗ್‌ ರೋಡ್‌ ಆದರೆ ಈ ಸಮಸ್ಯೆ ಇತ್ಯರ್ಥವಾಗಬಹುದು. ಇದರಿಂದ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. ಈ ಬಗ್ಗೆ ಪಂಚಾಯತ್‌ಗೆ ಮನವಿ ಮಾಡಿದ್ದೇವೆ.
– ಕಿರಣ್‌ ಕ್ರಾಸ್ತ, ಕೃಷಿಕರು, ಕನ್ನಡಕುದ್ರು

ಮನವಿ ಪತ್ರ ಸಿದ್ಧ
ಕನ್ನಡಕುದ್ರುವಿನಲ್ಲಿ ಪ್ರತೀ ವರ್ಷ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ್ಕಳಿಯಿಂದ ಕನ್ನಡಕುದ್ರು, ಮೂವತ್ತುಮುಡಿ, ಕಟ್ಟುವರೆಗೆ ರಿಂಗ್‌ ರೋಡ್‌ ಅಥವಾ ನದಿ ದಂಡೆ ನಿರ್ಮಿಸಬೇಕು ಎನ್ನುವ ಬಗ್ಗೆ ಮನವಿಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಶೀಘ್ರದಲ್ಲೇ ಶಾಸಕರು ಹಾಗೂ ಸಣ್ಣ ನೀರಾವರಿ ಇಲಾಖೆಯವರಿಗೆ ಸಲ್ಲಿಸಲಾಗುವುದು. ಸದ್ಯಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ತಾತ್ಕಾಲಿಕ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.

Advertisement

– ಸತ್ಯನಾರಾಯಣ, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು

ಡ್ಯಾಂನಿಂದ ಸಂಕಷ್ಟ
ಪ್ರತಿ ಹುಣ್ಣಿಮೆಯ ವೇಳೆ ನದಿ ನೀರು ಉಕ್ಕುವುದು ಮಾಮೂಲಿಯಾಗಿದ್ದರೂ, ಈಗೀಗ ಹುಣ್ಣಿಮೆ – ಅಮಾವಾಸ್ಯೆ ದಿನ ಉಕ್ಕೇರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕನ್ನಡಕುದ್ರು ಕೆಳಭಾಗದಲ್ಲಿದ್ದು, ಸಮುದ್ರದ ಅಂಚಿನಲ್ಲಿದೆ.
ಮೇಲ್ಭಾಗದಲ್ಲಿರುವ ಕಟ್ಟು, ಬಂಟ್ವಾಡಿ ಮತ್ತಿತರ ಕಡೆಗಳಲ್ಲಿ ಡ್ಯಾಂ ಆಗಿರುವುದರಿಂದ ಈಗ ಕೆಳ ಭಾಗದಲ್ಲಿರುವ ಕನ್ನಡಕುದ್ರುವಿಗೆ ಉಪ್ಪು ನೀರು ನುಗ್ಗುವ ಪ್ರಮಾಣ ಹೆಚ್ಚಾಗಿದೆ ಎನ್ನುವುದು ಇಲ್ಲಿನ ನಿವಾಸಿಗರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next