Advertisement

ಶೀಘ್ರದಲ್ಲೇ ನಾಲ್ಕನೇ ಹಂತದ ಕನ್ನಡ ಕಲಿ ಕಾರ್ಯಕ್ರಮಕ್ಕೆ ಸಿಗಲಿದೆ ಚಾಲನೆ

04:36 PM Feb 20, 2021 | Team Udayavani |

“ಕನ್ನಡಿಗರು ಯುಕೆ’ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣವೇ ಆಂಗ್ಲನಾಡಿನ ಕನ್ನಡಿಗರನ್ನೆಲ್ಲ ಒಂದೇ ಸೂರಿನಡಿಯಲ್ಲಿ ತಂದು ಒಗ್ಗಟ್ಟಿನಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಣಬಡಿಸಿ ಇದರ ಮೇಲಿರುವ ಒಲವನ್ನು ಪ್ರಚರಪಡಿಸುವುದಾಗಿತ್ತು. ಆ ಒಂದು ಸದುದ್ದೇಶದೊಂದಿಗೆ 16 ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದೇ “ಕನ್ನಡಿಗರು ಯುಕೆ’ ಎನ್ನುವ ಯಾವುದೇ ಫ‌ಲಾಪೆಕ್ಷೆಯಿಲ್ಲದ ಅಪ್ಪಟ ಕನ್ನಡಿಗರ ಸಂಸ್ಥೆ.

Advertisement

ಮೂಲ ಉದ್ದೇಶ ಮತ್ತು ಬಯಕೆಯಂತೆ ಆ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿ ಎಲ್ಲರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತ ನಾಲ್ಕೈದು ವರ್ಷಗಳ ಸತತ ಪರಿಶ್ರಮದಿಂದ ಒಂದು ಹಂತಕ್ಕೆ ಬಂದಾಗ ಮೂಡಿದ್ದು ಮುಂದೇನೂ ಎನ್ನುವ ಪ್ರಶ್ನಾರ್ಥಕ ಚಿಹ್ನೆ.

ಆ ಪ್ರಶ್ನೆಯ ಮೂಲವನ್ನು ಹುಡುಕುವ ಉದ್ದೇಶದಿಂದ ಚಿಂತನೆಯನ್ನು ಆರಂಭಿಸಿ ಉತ್ತರಕ್ಕಾಗಿ ಕಾರ್ಯಕಾರಿ ಸಮಿತಿಯ ಬೈಠಕ್‌ಗಳಲ್ಲಿ ಮಂಥನವನ್ನು ನಡೆಸಿದಾಗ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ “ವಿರುಪಾಕ್ಷಪ್ರಸಾದ’ ಅವರು ಯೋಚನೆಯಲ್ಲಿ ಸವಿಸ್ತಾರವಾದ ರೂಪುರೇಷೆಗಳೊಂದಿಗೆ ಮೂಡಿಬಂದದ್ದು ನಮ್ಮ ಮುಂದಿನ ಪೀಳಿಗೆಗೆ ಕನ್ನಡವನ್ನು ಕಲಿಸುವ ಅತ್ಯಂತ ಜಟಿಲವಾದ ಮತ್ತು ಸವಾಲುದಾಯಕವಾದಂತ ಕಾರ್ಯಕ್ರಮ “ಕನ್ನಡ ಕಲಿ’.

ಸಂಸ್ಥೆ ಸರ್ವ ಸದಸ್ಯರ ಮತ್ತು ಪೋಷಕರ ಸಹಕಾರದ ಮಧ್ಯೆಯೂ ಹಲವಾರು ಸವಾಲುಗಳನ್ನು ಎದುರಿಸುತ್ತಾ ಆಂಗ್ಲನಾಡಿನಾದ್ಯಂತ ನೆಲೆಸಿರುವ ಮಕ್ಕಳಿಗೆ ಕನ್ನಡ ಕಲಿಸುವ ಅಭಿಯಾನವನ್ನು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.

Advertisement

ಕಳೆದ ವರ್ಷದಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ವಿಶ್ವವೇ ನರಳುತ್ತಿರುವ ಸಂದರ್ಭದಲ್ಲಿಯೂ ಪರಿಸ್ಥಿತಿಗೆ ಅನುಗುಣವಾಗಿ 10ಕ್ಕೂ ಹೆಚ್ಚು  ಸ್ಥಳೀಯ ಕೇಂದ್ರಗಳಲ್ಲಿನ ಕನ್ನಡ ಕಲಿಸುವ ವ್ಯವಸ್ಥೆಯನ್ನು ಮಾರ್ಪಡಿಸಿ ಅಂತರ್ಜಾಲದ (ವರ್ಚುವಲ್‌ ಕ್ಲಾಸ್ ರೂಮ್) ಮೂಲಕ ಮೂನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸುವ ಪ್ರಯತ್ನವನ್ನು ಅರವತ್ತ(60)ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಶಿಕ್ಷಕ ಶಿಕ್ಷಕಿಯ ಮೂಲಕ ಶ್ರಮಿಸುತ್ತಿದ್ದಾರೆ.

ಕಳೆದ ವರ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಪರಿಚಯವಾದ “ಕನ್ನಡ ಅಕಾಡೆಮಿ’ ಸಂಸ್ಥೆಯೊಂದಿಗೆ ಹಲವಾರು ಸುತ್ತಿನ ಮಾತುಕತೆ ಮೂಲಕ ಅವರು ಸಿದ್ಧಪಡಿಸಿರುವ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಈಗಾಗಲೇ ಕಲಿಸುಗರು ಅಳವಡಿಸಿಕೊಂಡು ಮಕ್ಕಳಿಗೆ ಕಲಿಸುತ್ತಿರುವುದು “ಕನ್ನಡ ಕಲಿ’ ಕಾರ್ಯಕ್ರಮಕ್ಕೆ ಭದ್ರ ಬುನಾದಿಯನ್ನು ಒದಗಿಸಿದ್ದಲ್ಲದೆ ಜತೆಗೆ ಆನೆ ಬಲ ಬಂದಂತಾಗಿದೆ.

ಸಂಸ್ಥೆಯ ಹಲವಾರು ವರ್ಷಗಳ ನೇತೃತ್ವ, ಸ್ವಯಂ ಸೇವಕರ ಶ್ರದ್ಧೆ ಮತ್ತ ಅವಿರತವಾದ ಶ್ರಮಾದಾನ, ಯಶಸ್ವಿಯಾಗಿ “ಕನ್ನಡ ಕಲಿ’ ಕೇಂದ್ರಗಳನ್ನು ಮುನ್ನಡಿಸಿಕೊಂಡು ಬಂದುದ್ದರ ಫ‌ಲವಾಗಿ ಇಂದು ಯಶಸ್ವಿಯಾಗಿ ಮೂರು ಹಂತಗಳನ್ನು ಮುಗಿಸಿ ನಾಲ್ಕನೇ ಹಂತದ “ಕನ್ನಡ ಕಲಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡವನ್ನು ಕಲಿಯಲು 50ಕ್ಕೂ ಹೆಚ್ಚು ಮಕ್ಕಳು ನೋಂದಾಯಿಸಿಕೊಂಡು ಕಾಯುತ್ತಿರುವುದು ಸಂಸ್ಥೆಯ ಮತ್ತು ಸ್ವಯಂಸೇವಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು “ಕನ್ನಡಿ ಕಲಿ’ ಕಾರ್ಯನಿರ್ವಾಹಕ ತಂಡ ಆದಷ್ಟು ಶೀಘ್ರದಲ್ಲಿ ನಾಲ್ಕನೇ ಹಂತದ ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸುವ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡು ಒಮ್ಮತದ ನಿರ್ಧಾರದೊಂದಿಗೆ ದಿನಾಂಕವನ್ನು ಘೋಷಿಸಲು ಕಾತುರದಿಂದ ಕಾಯುತ್ತಿದೆ.

 

ಗೋವರ್ಧನ್ಜೋಶಿ, ಕನ್ನಡ ಕಲಿ ಶಿಕ್ಷಕ

ಕನ್ನಡಿಗರು ಯುಕೆ

 

 

 

Advertisement

Udayavani is now on Telegram. Click here to join our channel and stay updated with the latest news.

Next