ಭಾಲ್ಕಿ: ಜಗತ್ತಿನ ಎಲ್ಲ ಭಾಷೆಗಳ ಕನ್ನಡ ಭಾಷೆ ತಾಯಿಯಾಗಿದೆ ಎಂದು ಉಡುಪಿಯ ಕನ್ನಡ ಉಪನ್ಯಾಸಕ ಸಂದೀಪ ಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕಿನ ದನ್ನೂರ (ಎಸ್) ಗ್ರಾಮದಲ್ಲಿ, ಕರ್ನಾಟಕ ಜಾಗೃತಿ ವೇದಿಕೆ, ಬಾಲಯೋಗಿನಿ ಸುವರ್ಣಾ ಮಾತಾಜಿ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೀದರ ಮತ್ತು ನ್ಯೂಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದರು.
ಆಂಗ್ಲದ ವ್ಯಾಮೋಹದಿಂದ ನಮ್ಮ ಕನ್ನಡ ಉಸಿರುಗಟ್ಟುತ್ತಿರುವುದು ಖೇದದ ಸಂಗತಿ. 2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಎಲ್ಲ ಭಾಷೆಗಳ ತಾಯಿ ಬೇರಾಗಿದೆ. ಕಪ್ಪು ಮಣ್ಣಿನ ನಾಡು ಕರುನಾಡು, ಅತಿಹೆಚ್ಚು ಆನೆಗಳನ್ನು ಹೊಂದಿದ ನಾಡು ನಮ್ಮದು. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ನಾಡು ನಮ್ಮದು. ಜಗತ್ತು ಕಂಡ ಏಕೈಕ ಹೆಮ್ಮೆಯ ಅಭಿಯಂತರ್ ಸರ್.ಎಂ. ವಿಶ್ವೇಶ್ವರಯ್ಯನವರು ನಮ್ಮವರು. ಇಂತಹ ಸುಂದರ ಸಮೃ ದ್ಧ ನಾಡಿನಲ್ಲಿರುವ ನಾವೆಲ್ಲರೂ ಧನ್ಯರು ಎಂದು ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲಬುರಗಿಯ ಪ್ರಾದೇಶಿಕ ನಿರ್ದೇಶಕ ಸಂಗಮೇಶ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲಯೋಗಿನಿ ಸುವರ್ಣಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಕ.ರಾ.ಪ್ರೌ.ಶಾ.ಶಿ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸಂಜೀವಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಶಿವರಾಜ ಕಪಲಾಪುರೆ, ಡಾ| ಭಗವಂತರಾವ್, ಲಿಂಗರಾಜ ಅರಸ್, ರವಿ ಹಾಸನಕರ, ರಮೆಶ ಬೆಲ್ದಾರ, ಶೇಖ್ ಮಹಬೂಬ್ ಪಟೇಲ, ಬಾಲಾಜಿ ಕಾಂಬಳೆ, ವಿಜಯಕಲಾ, ದತ್ತು ಕಾಟಕರ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಸಾಧಕರಾದ ಮಲ್ಲಿಕಾರ್ಜುನ ಹಲಮಂಡಗೆ, ನಿರಂಜಪ್ಪ ಪಾತ್ರೆ, ಜಯರಾಜ ಕೊಳ್ಳಾ, ರೌಫ್ ಪಟೇಲ್, ಜಯರಾಜ್ ದಾಬಶೆಟ್ಟಿ, ಸಂತೋಷ ಖಂಡ್ರೆ, ಮಂಜುನಾಥ ಬೆಳಕೇರೆ, ಡಾ| ಶರಣಯ್ಯ ಸ್ವಾಮಿ ಮುಂತಾದವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ರಾಮಕೃಷ್ಣರಿಂದ ಸಂಗೀತ ಸೇವೆ ನಡೆಯಿತು. ಅನಿಲಕುಮಾರ ಸಿರಮುಂಡೆ ಸ್ವಾಗತಿಸಿದರು. ದೇವಿಪ್ರಸಾದ ಕಲಾಲ ನಿರೂಪಿಸಿದರು. ಬಾಲಾಜಿ ಕಾಂಬಳೆ ವಂದಿಸಿದರು.