Advertisement

ಕನ್ನಡಕ್ಕಿದೆ ಬದುಕು ರೂಪಿಸುವ ಶಕ್ತಿ: ಗಂಗಾಧರ

06:09 PM Nov 19, 2022 | Team Udayavani |

ಬಾಗಲಕೋಟೆ: ಕನ್ನಡ ನಾಡಿನ ನೆಲ, ಜಲ, ಮತ್ತು ಜನರಾಡುವ ಭಾಷೆಯ ಬಳಕೆಯೊಂದಿಗೆ ಸೃಷ್ಟಿಗೊಂಡ ಸಾಹಿತ್ಯವು ಬದುಕನ್ನು ರೂಪಿಸುತ್ತದೆ. ಕನ್ನಡಿಗರ ಸಹೃದಯತೆಯ ಭಾವನೆಗಳು ಅರಳಿಸುವ ಸಾಹಿತ್ಯವು ನಮ್ಮ ಬದುಕನ್ನು ಸುಂದರವಾಗಿ ರೂಪಿಸಲು ಸಾಧ್ಯವಿದೆ ಎಂದು ಸಾಹಿತಿ ಗಂಗಾಧರ ಅವಟೇರ ಹೇಳಿದರು.

Advertisement

ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಸರಣಿ-5ರ ಪ್ರೊ| ವೀರಭದ್ರ ಕೌದಿ ಅವರ ಸಾಹಿತ್ಯಾವಲೋಕನ ಮತ್ತು ಎ.ಎಸ್‌. ಮಕಾನದಾರ ಅವರ ಉಸಿರು ಗಂಧ ಸೋಕಿ ಗ್ರಂಥ ಲೋಕಾರ್ಪಣೆ ಹಾಗೂ ಜಿಲ್ಲಾ ಕಸಾಪ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯದ ಬರವಣಿಗೆಯಲ್ಲಿ ವಾಸ್ತವಿಕತೆ ಕಟ್ಟಿಕೊಡಬೇಕು, ಬಡತನ, ಶೋಷಣೆ ಮತ್ತು ಸಾಮಾಜಿಕ ಚಿಂತನೆಗಳಂತಹ ಕಳಕಳಿಯ ಬರಹದಲ್ಲಿ ಬರಬೇಕು ಎಂದು ಹೇಳಿದರು. ಸಾಹಿತಿ ಎ.ಎಸ್‌.ಮಕಾನದಾರ ಮಾತನಾಡಿ, ಇಂದಿನ ಸಾಹಿತ್ಯವು ಓದುಗರ ಮನಸೆಳೆಯುವಂತೆ ವಸ್ತು ಮತ್ತು ಮೌಲ್ಯ ಹೊಂದಿರಬೇಕು.

ನಾಡಿನ ಪ್ರತಿಯೊಂದು ಸಾರ್ವಜನಿಕ ಗ್ರಂಥಾಲಯವು ಆಯಾ ಪರಿಸರದ ಓದುಗರ ಸೃಷ್ಟಿಸುವ ವಾತಾವರಣ ಸಿದ್ಧಪಡಿಸುವ ಕಾರ್ಯ ಮಾಡಿದರೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು. ಪ್ರೊ| ವೀರಭದ್ರ ಕೌದಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ನಾಡಿನಲ್ಲಿ ಒಬ್ಬ ಲೇಖಕರ ಎದುರಲ್ಲಿ ಅವರ ಸಾಹಿತ್ಯ ಕುರಿತು ಅವಲೋಕನ ಮಾಡುತ್ತಿರುವ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಮಾದರಿಯಾಗಿದೆ ಎಂದು ಹೇಳಿದರು.

ಡಾ|ವೀಣಾ ಕಲ್ಮಠ, ಪ್ರೊ| ಸಂಗಮೇಶ ಬ್ಯಾಳಿ ಮತ್ತು ವಾದಿರಾಜ ಕಡಿವಾಲ ಅವರು ಸಾಹಿತಿ ವೀರಭದ್ರ ಕೌದಿ ಅವರೊಂದಿಗೆ ಸಾಹಿತ್ಯ ಸಂವಾದ ನಡೆಸಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಸಾಹಿತ್ಯ ಸೇವೆ ಮಾಡಿರುವವರ ಕೃತಿಗಳ ಅವಲೋಕನದಿಂದ ಯುವ ಬರಹಗಾರರಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಂಕಣಬದ್ಧವಾಗಿದೆ. ನಾವೆಲ್ಲರೂ ಕನ್ನಡ ತಾಯಿಯ ಸೇವೆ ಮಾಡೋಣ ಎಂದು ಹೇಳಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ಧರಾಮ ಶಿರೋಳ, ಡಾ|ಮೈನುದ್ದಿನ್‌ ರೇವಡಿಗಾರ, ಕೃಷ್ಣಾ ಕೋರಾ, ಎಸ್‌.ಆರ್‌. ಎಮ್ಮಿಮಠ, ಸಿ.ಎನ್‌. ಬಾಳಕನ್ನವರ, ಡಾ|ಉಮಾ ಅಕ್ಕಿ, ಗೀತಾ ದಾನಶೆಟ್ಟಿ, ದ್ರಾಕ್ಷಾಯಣಿ ಮಂಡಿ, ವಿಜಯಶ್ರೀ ಮುರನಾಳ, ಸಾಹಿತಿಗಳು ಕಲಾವಿದರು ಪಾಲ್ಗೊಂಡಿದ್ದರು.

ಬಾಗಲಕೋಟೆ ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಶೆಲ್ಲಿಕೇರಿ ಆಶಯ ನುಡಿ ಹೇಳಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು. ಸಂಜಯ ನಡುವಿನಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next