Advertisement

ದಕ್ಷಿಣ ಕನ್ನಡಕ್ಕೆ ಏನು ಕೊಟ್ಟಿದ್ದೀರಿ: ಮೋದಿಗೆ ಸಿಎಂ ಪ್ರಶ್ನೆ

11:22 PM Apr 14, 2024 | Team Udayavani |

ಬೆಂಗಳೂರು: “ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದ ಮುಂದುವರಿದ ಭಾಗವಾಗಿ ಈಗ ಪ್ರಧಾನಿ ನರೇಂದ್ರ ಮೋದಿ ಚುನಾವಣ ರ್‍ಯಾಲಿ ನಡೆಸಿದ ದಕ್ಷಿಣ ಕನ್ನಡಕ್ಕೆ ತಮ್ಮ ಕೊಡುಗೆಯ ಲೆಕ್ಕ ಕೊಡುವಂತೆ ಕಾಂಗ್ರೆಸ್‌ ಕೇಳಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ 33 ವರ್ಷಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಯನ್ನು ಗೆಲ್ಲಿಸುತ್ತ ಬಂದಿದ್ದಾರೆ. ಅದಕ್ಕಿಂತ ಹಿಂದಿನ 39 ವರ್ಷ ಈ ಕ್ಷೇತ್ರವನ್ನು ಕಾಂಗ್ರೆಸ್‌ ಸದಸ್ಯರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಕಳೆದ 33 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೀವು ಕೊಟ್ಟ¨ªೆಷ್ಟು? ಎನ್ನುವ ಲೆಕ್ಕ ಕೊಡಿ, ಈ ಜಿಲ್ಲೆಯಿಂದ ಏನು ಕಿತ್ತುಕೊಂಡಿದ್ದೀರಿ ಎನ್ನುವ ಲೆಕ್ಕವನ್ನು ನಾನು ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಜಪೆಯ ವಿಮಾನ ನಿಲ್ದಾಣದ ಕನಸು ಕಂಡವರು ಉಳ್ಳಾಲ ಶ್ರೀನಿವಾಸ ಮಲ್ಯ. ಅವರ ಕನಸನ್ನು ನನಸು ಮಾಡಿದವರು ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು. ಶ್ರೀನಿವಾಸ ಮಲ್ಯರ ಪ್ರಯತ್ನದ ಫ‌ಲವಾದ ಈ ವಿಮಾನ ನಿಲ್ದಾಣವನ್ನು ನೀವು ನಿಮ್ಮ ಉದ್ಯಮಿ ಮಿತ್ರ ಗೌತಮ ಅದಾನಿಗೆ ನೀಡಿದಿರಿ. ನವಮಂಗಳೂರು ಬಂದರು ಕೂಡ ಸಂಸದ ಯು. ಶ್ರೀನಿವಾಸ ಮಲ್ಯ ಅವರ ಕನಸಾಗಿತ್ತು. ಮಲ್ಯರ ಮಾತಿಗೆ ಮನ್ನಣೆ ಕೊಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಪಣಂಬೂರಿನಲ್ಲಿ ಬಂದರಿಗೆ ಚಾಲನೆ ನೀಡಿದರು. ಈ ಬಂದರನ್ನು ಕೂಡ ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರಾಟ ಮಾಡಲು ಹೊರಟಿದ್ದೀರಿ.

ಬಜಪೆ ವಿಮಾನ ನಿಲ್ದಾಣ, ಎನ್‌ಎಂಪಿಟಿ, ಪ್ರಾದೇಶಿಕ ಎಂಜನಿಯರಿಂಗ್‌ ಕಾಲೇಜು, ಎಂಸಿಎಫ್, ಎಂಆರ್‌ಪಿಎಲ್ , ಬೈಕಂಪಾಡಿ ಕೈಗಾರಿಕಾ ಪ್ರದೇಶ, ರಾಷ್ಟ್ರೀಯ ಹೆದ್ದಾರಿ 66, ಕರಾವಳಿಯಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದದ್ದು ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ. ಕಾರ್ಪೊರೇಷನ್‌ ಬ್ಯಾಂಕ್‌ ಅನ್ನು ಯೂನಿಯನ್‌ ಬ್ಯಾಂಕ್‌ ಜತೆ ವಿಲೀನಗೊಳಿಸಿದರೆ, ಸಿಂಡಿಕೇಟ್‌ ಬ್ಯಾಂಕನ್ನು ಕೆನರಾ ಬ್ಯಾಂಕಿನಲ್ಲಿ ಹಾಗೂ ವಿಜಯಾ ಬ್ಯಾಂಕನ್ನು ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್‌ ವಿಲೀನಗೊಳಿಸಿದಿರಿ. ಇದು ನಿಮ್ಮ ಸಾಧನೆ ಎಂದು ಟೀಕಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬಹುಸಂಖ್ಯಾಕ ಸಮುದಾಯವಾದ ಬಿಲ್ಲವರ ಆರಾಧ್ಯಗುರು ಬ್ರಹ್ಮಶ್ರೀ ನಾರಾಯಣ ಗುರುಗಳು. ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ರಾಜ್ಯ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನ ಮಾಡಲು ಹೊರಟರೆ, ಅದಕ್ಕೆ ನೀವು ಅಡ್ಡಗಾಲು ಹಾಕಿದಿರಿ. ನಾರಾಯಣ ಗುರುಗಳಿಗೆ ಹಿಂದೂ ಧರ್ಮದ ಗುರುಗಳ ಪಕ್ಕದಲ್ಲಿ ಜಾಗ ಇಲ್ಲವೇ? ಜತೆಗೆ, ರಾಜ್ಯದ ಬಿಜೆಪಿ ಸರಕಾರ ರಚಿಸಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಶಾಲಾ ಪಠ್ಯದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನೂ ಕಿತ್ತುಹಾಕಿತು. ಒಟ್ಟಾರೆ 33 ವರ್ಷಗಳಲ್ಲಿ ಬಿಜೆಪಿಯ ಅತ್ಯಂತ ಮಹತ್ವದ ಕೊಡುಗೆ- ಜಾತಿ-ಧರ್ಮಗಳ ಅಂತರವನ್ನು ಮೀರಿ ಒಂದು ಕುಟುಂಬದಂತೆ ಸೌಹಾರ್ದದಿಂದ ಬದುಕುತ್ತಿದ್ದ ಜಿಲ್ಲೆಯನ್ನು ಕೋಮುವಾದದ ಪ್ರಯೋಗಶಾಲೆ’ಯನ್ನಾಗಿ ಪರಿವರ್ತಿಸಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next