ಕಮಲನಗರ: ಕನ್ನಡವು ಬದುಕಾಗಬೇಕು, ಬದುಕು ಕನ್ನಡವಾಗಬೇಕು. ಅಂದಾಗ ಮಾತ್ರ ಕನ್ನಡಿಗರು ಕರ್ನಾಟಕದ ನೆಲದಲ್ಲಿ ಸಾರ್ವಭೌಮತ್ವ ಹಿಡಿದಿಟ್ಟಿಕೊಳ್ಳಬಹುದು. ಜನಭಾಷೆಯಾದ ಕನ್ನಡವು ಆಳಲು ಬಂದವರನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಕನ್ನಡಕ್ಕೆ ಸಾವಿಲ್ಲ. ಆದರೆ ಸವಾಲುಗಳಿವೆ ಎಂದು ಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ ಮಠಪತಿ ಹೇಳಿದರು.
ತಾಲೂಕಿನ ಖತಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬಿರಾದಾರ ಏಜುಕೇಶನ್ ಸೊಸೈಟಿ ಸಹಯೋಗದಲ್ಲಿ ನಡೆದ ಗಡಿನಾಡು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯರ ಪ್ರಭಾವ ಹೆಚ್ಚಾಗಿದ್ದರೂ, ಕನ್ನಡವನ್ನು ಮಾತನಾಡುವ, ಮಾತೃ ಭಾಷೆಯನ್ನು ಪ್ರೀತಿಸುವ, ಉಳಿಸಿ-ಬೆಳೆಸುವ ಮನಸ್ಸುಗಳಿರುವಾಗ ಕರುನಾಡಿನಲ್ಲಿ ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ ಎಂದರು.
ಪಿಎಸ್‌ಐ ನಂದಿನಿ ಎಸ್. ಮಾತನಾಡಿ, ಭಾಷೆ ಭಾವನೆಯ ಪ್ರತಿಬಿಂಬ. ನಮ್ಮ ಅಂತರಂಗದ ಭಾವಗಳು ವ್ಯಕ್ತವಾಗುವುದೇ ನಮ್ಮ ಮಾತೃ ಭಾಷೆಯಲ್ಲಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಜತೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರತದ್ದು ಅಭಿಮಾನದ ಸಂಗತಿಯಾಗಿದೆ. ನಮ್ಮ ಆಸೆ, ಆಕಾಂಕ್ಷೆ, ವಿಚಾರಗಳನ್ನು ನಮ್ಮ ಭಾಷೆಯಲ್ಲಿಯೇ ವ್ಯಕ್ತಪಡಿಸುವ ಉಜ್ವಲ ಅಭಿಮಾನ ಉಳ್ಳವರಾಗೋಣ ಎಂದು ಕರೆ ನೀಡಿದರು.
ಮುಖ್ಯಗುರು ಶಿವಕಾಂತ ಹಣಮಶೆಟ್ಟೆ ಮಾತನಾಡಿ, ಸಾಹಿತ್ಯ ನಮ್ಮ ನಡೆ ನುಡಿಗಳಲ್ಲಿ, ಬದುಕಿನಲ್ಲಿ ಉಂಟು ಮಾಡುವ ಪರಿಣಾಮ ದೊಡ್ಡದು. ನಾವು ಓದುವ ಪುಸ್ತಕಗಳು ಮೌಡ್ಯವನ್ನು ತೊಲಗಿಸಬೇಕೇ ಹೊರತು ಮೌಡ್ಯ ಬಿತ್ತಬಾರದು. ನಮ್ಮನ್ನು ನಾವು ಅರಿವು ಸಾಹಿತ್ಯ ಒಬ್ಬ ಶ್ರೇಷ್ಠ ಗೆಳೆಯನಿಗಿಂತ ಹೆಚ್ಚು ಎಂದರು.
ಮದನೂರ ಗ್ರಾಪಂ ಅಧ್ಯಕ್ಷ ಹರಿಬಾಜಿ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಇಸ್ಮಾಯಿಲ್ ಶೇಖ್, ರಾಜಶೇಖರ ಪಾಟೀಲ, ಮುಖಂಡ ಶಶಿಕಾಂತ ಪಾಟೀಲ, ಸೊಸೈಟಿ ಅಧ್ಯಕ್ಷ ಸಂತೋಷ ಬಿರಾದಾರ, ಆನಂದ, ಶೈಲಶ್ರೀ ಗಲಗಲಿ, ಆರ್. ಎಸ್ ನಾಮದೇವ, ನಾಗೇಶ ಹರಪಳ್ಳೆ ಇದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೀತ ಗಾಯನ, ಜನಪದ ಗಾಯನ, ಕನ್ನಡ ಹಾಡುಗಳನ್ನು ಹಾಡಿದ ಮಕ್ಕಳಿಗೆ, ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.