ಬೀದರ್ : ಗೋಕಾಕ ಚಳುವಳಿ ಮಾದರಿಯಲ್ಲಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕ ಅಳವಡಿಕೆ ಚಳುವಳಿ ನಡೆಸಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಶನಿವಾರ ಹೇಳಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರವೇ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರುಗಳ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರವೇ ಹೋರಾಟದ ಫಲದಿಂದಲೇ ಇಂದು ರಾಜ್ಯದಾದ್ಯಂತ ಕಣ್ಣು ಕುಕ್ಕುವಂತೆ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ. ಕನ್ನಡದ ನೆಲದಲ್ಲಿ ಹೋರಾಟದ ಕಿಚ್ಚಿದೆ. ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.
ಡಿ. 27ರ ನಂತರ ನನಗೆ 14 ದಿನಗಳ ಜೈಲುವಾಸ ಆಯಿತು. ನಾನು ಮೂರು ತಿಂಗಳು ಹೊರಗೆ ಬರದಂತೆ ನೋಡಿಕೊಳ್ಳುವಂತೆ ಸಿಎಂ ಸೂಚಿಸಿದ್ದರು. ಮೂರು ತಿಂಗಳಲ್ಲ, ಮೂರು ವರ್ಷ ನನಗೆ ಜೈಲಿಗೆ ಹಾಕಿದರೂ ನನ್ನಲ್ಲಿರುವ ಕನ್ನಡದ ಕಿಚ್ಚು, ಛಲ ಕಡಿಮೆಯಾಗಲ್ಲ. ಇಂತಹ ನೂರು ಸಿದ್ದರಾಮಯ್ಯ ಮತ್ತು ಡಿಕೆಶಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ. ರಾಜಕಾಣಿಗಳು ರಾಜ್ಯದ ಆಸ್ತಿ ಲೂಟಿ ಮಾಟಿ ಜೈಲಿಗೆ ಹೋದರೆ, ನಾನು ಈ ನಾಡಿನ ನೆಲ ಜಲ ಭಾಷೆಗಾಗಿ ಹೋರಾಡಿ ಜೈಲಿಗೆ ಹೋಗುತ್ತಿದ್ದೇನೆ. ಕಾರ್ಯಕರ್ತರು ನನ್ನೊಂದಿಗಿರುವಾಗ ನಾನು ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಎಂದು ಗುಡುಗಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಮಾತನಾಡಿ, ಜಿಲ್ಲೆಯಲ್ಲಿ ನಾಡು ನುಡಿಗಾಗಿ ಹಾಗೂ ಕನ್ನಡ ನಾಮಫಲಕ ಅಳವಡಿಕೆಗಾಗಿ ಹೋರಾಟ ಮಾಡಿದಾಗ ಹಲವು ತೊಂದರೆಗಳನ್ನು ನಾನು ಅನುಭವಿಸಬೇಕಾಯಿತು. ನನ್ನ ಮೇಲೆ ದೂರು ದಾಖಲಿಸಿದರೂ ನಾನು ಯಾವುದಕ್ಕೂ ಹೆದರದೆ ಹೋರಾಟ ಮುಂದುವರೆಸಿದೆ. ನಮಗೆ ನಾರಾಯಣಗೌಡರೇ ಸಿಎಂ ಆಗಿದ್ದಾರೆ. ಜಿಲ್ಲಾಧ್ಯಕ್ಷರು ಒಬ್ಬೊಬ್ಬ ಸಂಸದರಂತೆ ಕೆಲಸ ಮಾಡಿದಾಗ ಮಾತ್ರ ರಾಜ್ಯದಲ್ಲಿ ಕನ್ನಡವನ್ನು ಪ್ರಬಲವಾಗಿ ಉಳಿಸಿ ಬೆಳೆಸಬಹುದು ಎಂದು ಹೇಳಿದರು.
ವಿಶ್ವನಾಥ ಗೌಡ ಸ್ವಾಗತಿಸಿದರೆ ಗೋಪಾಲ ಕುಲಕರ್ಣಿ ನಿರೂಪಿಸಿ ಸೋಮಶೇಖರ ಸಜ್ಜನ್ ವಂದಿಸಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಖಾದರ ಪಾಶಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ ಅಬ್ಬಿಗೆರೆ, ಪ್ರಮುಖರಾದ ಸಚಿನ ಗಾಣಿಗೇರ್, ಸಹನಾ ಶೇಖರ, ಹೇಮಲತಾ, ಮಮತಾ ಗೌಡ, ವಿನೋದರೆಡ್ಡಿ, ಭೀಮು ನಾಯಕ, ಹಣಮಂತಪ್ಪ ಅಬ್ಬಿಗೆರೆ, ಗಿರಿಶಾನಂದ, ಕುಮಾರ್, ಮಹೇಶ ಕಾಶಿ, ಅನಿಲ ಹೆಡೆ, ಸುಭಾಷ ಗಾಯಕವಾಡ, ಸಚಿನ ಜಟಗೊಂಡ, ಸಚಿನ ತಿಬಶೆಟ್ಟಿ ಮತ್ತಿತರರಿದ್ದರು.
‘ಹೊಸ ಪ್ರಾದೇಶಿಕ ಪಕ್ಷ ಉದಯ’
ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳ ಬ್ಲಡ್ ಗ್ರೂಪ್ ಒಂದೇ. ಹೀಗಾಗಿ ಯಾವ ಪಕ್ಷಗಳಿಗೂ ನಾನು ನಂಬಲ್ಲ. ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉದಯವಾಗಲಿದೆ. ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ನೂರು ಸ್ವಯಂಸೇವಕರನ್ನು ಸಜ್ಜುಗೊಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಂತ್ಯಗೊಂಡಿದೆ. ಹಲ್ಲು ಕಿತ್ತ ಹಾವಿನಂತಾಗಿದೆ ಎಂದು ನಾರಾಯಣಗೌಡ ಗುಡುಗಿದರು.