ಮಂಗಳೂರು: ಅಗಲಿದ ಹಿರಿಯ ರಂಗಕರ್ಮಿ, ಸಿನೆಮಾ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಅವರಿಗೆ ಇಲ್ಲಿನ ಪುರಭವನದಲ್ಲಿ ಸರಕಾರಿ ಗೌರವದೊಂದಿಗೆ ಬುಧವಾರ ಅಂತಿಮ ವಿದಾಯ ಸಲ್ಲಿಸಲಾಯಿತು.
ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿ ಕಾರಿ ಮುಲ್ಲೆ„ ಮುಗಿಲನ್ ಅಂತಿಮ ನಮನ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ನಮನ ಸಲ್ಲಿಸಿದರು. ಅನಂತರ ಸುವರ್ಣರ ಇಚ್ಛೆಯಂತೆ ಅವರ ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಯಿತು.
ಹಿರಿಯ ವಿದ್ವಾಂಸ ಡಾ| ಚಿನ್ನಪ್ಪ ಗೌಡ ಅವರು ನುಡಿನಮನ ಸಲ್ಲಿಸಿ, ಯಾವುದೇ ಕೃತಿಗೆ ಎರಡು ಬದುಕು ಇರುತ್ತದೆ. ಮೊದಲನೆಯದ್ದು ಕೃತಿ ಅಥವಾ ಕತೆಯಾಗಿ ಒಂದು ಬದುಕು. ಅನಂತರ ಆ ಕೃತಿಯನ್ನು ರಂಗಕ್ಕೆ ತಂದು ಜನಮಾನಸಕ್ಕೆ ವಿಸ್ತರಿಸಿಕೊಡುವ ಸೃಜನಶೀಲತೆಯಿಂದ ಕೂಡಿದ ಇನ್ನೊಂದು ಬದುಕು. ಸುವರ್ಣರು ಕೃತಿಗಳಿಗೆ 2ನೇ ಬದುಕನ್ನು ತುಂಬಾ ಸೃಜನಶೀಲತೆಯಿಂದ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸದಾನಂದ ಸುವರ್ಣರು ಕಲಾಕ್ಷೇತ್ರಕ್ಕೆ ಸುವರ್ಣ ಯುಗವನ್ನು ಸೃಷ್ಟಿಸಿಕೊಟ್ಟ ಸಾಧಕರು ಎಂದು ವಿದ್ವಾಂಸ ಡಾ| ಎಂ.ಪ್ರಭಾಕರ ಜೋಷಿ ಹೇಳಿದರು.
ಹೆಚ್ಚುವರಿ ಡಿಸಿ ಡಾ| ಸಂತೋಷ್ ಕುಮಾರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ,ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಾರ್ಪೊರೇಟರ್ ನವೀನ್ ಡಿ’ಸೋಜಾ, ಪತ್ರಕರ್ತ ಯು.ಕೆ.ಕುಮಾರನಾಥ್, ಮುದ್ದು ಮೂಡುಬೆಳ್ಳೆ, ನಟ ಲಕ್ಷ್ಮಣ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಕುದ್ರೋಳಿ ಗಣೇಶ್, ಶಶಿರಾಜ್ ಕಾವೂರು, ಡಾ| ನಾ.ದಾ.ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಅಲ್ವಾರೀಸ್, ನಟ ಅರವಿಂದ ಬೋಳಾರ್, ವಾಲ್ಟರ್ ನಂದಳಿಕೆ, ನಿರ್ಮಾಪಕ ಧನರಾಜ್, ಯಕ್ಷಗಾನ ಗುರು ಸಂಜೀವ ಸುವರ್ಣ, ತಮ್ಮ ಲಕ್ಷ್ಮಣ, ನಟರಾದ ಸಂತೋಷ್ ಶೆಟ್ಟಿ, ಸುರೇಶ್ ಕೊಟ್ಟಾರಿ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ನಟೇಶ್ ಉಳ್ಳಾಲ ನಿರ್ವಹಿಸಿದರು.